ADVERTISEMENT

ಸರ್‌.ಎಂ.ವಿ ಆದರ್ಶಗಳು ಎಂಜಿನಿಯರ್‌ಗಳಿಗೆ ದಾರಿದೀಪ: ಮಲ್ಲೇಶ್ ಅಭಿಮತ

ಚಿಕ್ಕಮಗಳೂರಿನಲ್ಲಿ ಎಂಜಿನಿಯರ್ಸ್ ಡೇ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 12:45 IST
Last Updated 16 ಸೆಪ್ಟೆಂಬರ್ 2019, 12:45 IST
ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆ ಆವರಣದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಎಂಜಿನಿಯರ್ಸ್ ಸಂಘದ ವತಿಯಿಂದ ಮಾಲಾಪರ್ಣೆ ಮಾಡಲಾಯಿತು. ನಗರಸಭೆ ಆಯುಕ್ತ ಕೆ.ಪರಮೇಶಿ ಇದ್ದಾರೆ.
ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆ ಆವರಣದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಎಂಜಿನಿಯರ್ಸ್ ಸಂಘದ ವತಿಯಿಂದ ಮಾಲಾಪರ್ಣೆ ಮಾಡಲಾಯಿತು. ನಗರಸಭೆ ಆಯುಕ್ತ ಕೆ.ಪರಮೇಶಿ ಇದ್ದಾರೆ.   

ಚಿಕ್ಕಮಗಳೂರು: ರೈತನ ಅನುಕೂಲಕ್ಕೆ ತಾಂತ್ರಿಕತೆ ಬಳಸಬಹುದು ಎನ್ನುವುದನ್ನು ಸರ್.ಎಂ.ವಿಶ್ವೇಶ್ವರಯ್ಯ ತೋರಿಸಿಕೊಟ್ಟರು. ಅವರ ಆದರ್ಶಗಳು ಎಂಜಿನಿಯರ್ಸ್‌ಗಳಿಗೆ ದಾರಿದೀಪ ಎಂದು ಜಿಲ್ಲಾ ಸಿವಿಲ್ ಎಂಜಿನಿಯರ್ಸ್ ಸಂಘದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಅಭಿಪ್ರಾಯಪಟ್ಟರು.

ಜಿಲ್ಲಾ ಸಿವಿಲ್ ಎಂಜಿನಿಯರ್ಸ್ ಸಂಘದ ವತಿಯಿಂದ ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ‘ಎಂಜಿನಿಯರ್ಸ್ ಡೇ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವೇಶ್ವರಯ್ಯ ಅವರು ಬಡತನದಲ್ಲಿಯೇ ಬೆಳೆದರು. ದೇಶಕ್ಕೆ ಕೊಡುಗೆ ನೀಡಬೇಕು ಎನ್ನುವ ಆಸೆ ಅವರಲ್ಲಿತ್ತು. ಗುರಿ ಒಂದೇ ಇರಲಿ, ಆದರೆ ಗುರಿಯಲ್ಲಿ ನಿಯಮ ಇರಲಿ ಎನ್ನುವುದು ಅವರ ಸಿದ್ಧಾಂತವಾಗಿತ್ತು. ವಾಣಿಜ್ಯ ಉದ್ದಿಮೆ ಒಳಗೊಂಡಂತೆ ಸಮಾಜದ ಸರ್ವತೋಮುಕ ಅಭಿವೃದ್ಧಿಗೆ ಅವರು ಯೋಜನೆ ರೂಪಿಸಿದ್ದರು. ಅವರ ಚಿಂತನೆಗಳೆಲ್ಲವೂ ಸಾಕಾರಗೊಂಡಿದ್ದರೆ, ಪ್ರಗತಿಯಲ್ಲಿ ಭಾರತ ಇಂದು ವಿಶ್ವಕ್ಕೆ ಪ್ರಥಮ ಸ್ಥಾನದಲ್ಲಿರುತ್ತಿತ್ತು ಎಂದರು.

ADVERTISEMENT

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಆರ್.ರಾಜೇಶ್ ಮಾತನಾಡಿ, ವಿಶ್ವೇಶ್ವರಯ್ಯ ಅವರದ್ದು ಬಹುಮುಖ ಪ್ರತಿಭೆ. ಯುವಪೀಳಿಗೆಗೆ ಅವರು ಸ್ಫೂರ್ತಿದಾಯಕ ಎಂದರು.

ಹಿರಿಯ ಎಂಜಿನಿಯರ್ ಎಂ.ಎ.ನಾಗೇಂದ್ರ ಮಾತನಾಡಿ, ಪ್ರಾಮಾಣಿಕತೆ, ಕಠಿಣಪರಿಶ್ರಮ ಮತ್ತು ಸಮಯಪಾಲನೆಯಿಂದ ಸಾಧನೆ ಮಾಡಬಹುದು ಎನ್ನುವುದಕ್ಕೆ ವಿಶ್ವೇಶ್ವರಯ್ಯ ಅವರು ಉತ್ತಮ ಉದಾಹರಣೆಯಾಗಿದ್ದಾರೆ. ಅವರು ಎಂಜಿನಿಯರ್ ವೃತ್ತಿಗೆ ಘನತೆ ತಂದುಕೊಟ್ಟರು. ಭಾರತರತ್ನ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಮೊದಲಿಗ ಎಂದರು.

ಎಂಜಿನಿಯರ್ಸ್ ಡೇ ಅಂಗವಾಗಿ ವಿಶ್ವೇಶ್ವರಯ್ಯ ಅವರ ಭಾವಚಿತ್ರವನ್ನು ಡಿಎಸಿಜಿ ಪಾಲಿಟೆಕ್ನಿಕ್ ಆವರಣದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ನಾದಸ್ವರ, ವೀರಗಾಸೆ ತಂಡಗಳು ಮೆರವಣಿಗೆಗೆ ಮರಗು ನೀಡಿದ್ದವು.

ಲೋಕೋಪಯೋಗಿ ಇಲಾಖೆ ಎಇಇ ಎಚ್.ಎಲ್.ಬಸವರಾಜ್, ಸಂಘದ ಕಾರ್ಯದರ್ಶಿ ಬಿ.ಎಂ.ಪ್ರಕಾಶ್, ಖಜಾಂಚಿ ಕೆ.ಎನ್.ನಂದೀಶ್, ಸದಸ್ಯ ಎಂ.ಎಸ್.ಮಹೇಶ್, ಡಿಎಸಿಜಿ ಪಾಲಿಟೆಕ್ನಿಕ್ ಪ್ರಾಚಾರ್ಯ ಉಮಾಪತಿ, ಎಐಟಿ ಪ್ರಾಚಾರ್ಯ ಸಿ.ಟಿ.ಜಯದೇವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.