ADVERTISEMENT

ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ: ವಿಶ್ವ ಭೂದಿನಾಚರಣೆಯಲ್ಲಿ ಎ.ಎಸ್.ಸದಲಗೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 15:07 IST
Last Updated 22 ಏಪ್ರಿಲ್ 2019, 15:07 IST
ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶ ಎ.ಎಸ್.ಸದಲಗೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎನ್.ಹೆಗಡೆ ಇದ್ದಾರೆ.
ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶ ಎ.ಎಸ್.ಸದಲಗೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎನ್.ಹೆಗಡೆ ಇದ್ದಾರೆ.   

ಚಿಕ್ಕಮಗಳೂರು: ಪರಿಸರ ಸಮತೋಲನ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶ ಎ.ಎಸ್.ಸದಲಗೆ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ವಾರ್ತಾ ಇಲಾಖೆ, ಜಿಲ್ಲಾ ವಕೀಲರ ಸಂಘ, ಹಿಂದುಳಿದ ವರ್ಗಗಳ ಕಲ್ಯಾಣನ ಇಲಾಖೆ ಸಹಯೋಗದಲ್ಲಿ ನಗರದ ನರಿಗುಡ್ಡನಹಳ್ಳಿಯಲ್ಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಆಯೋಜಿಸಿದ್ದ ‘ವಿಶ್ವ ಭೂ ದಿನ ಹಾಗೂ ಕಾನೂನು ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರಣ್ಯ ನಾಶ, ಗಣಿಗಾರಿಕೆ, ಕೈಗಾರಿಕೆಗಳು, ವಾಹನಗಳ ಸಂಖ್ಯೆ ಹೆಚ್ಚಳದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ. ಕೃಷಿ ಜಮೀನುಗಳನ್ನು ಪರಿವರ್ತಿಸಿ ಸಿಮೇಂಟ್ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅದರಿಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ ಸಂಭವಿಸುತ್ತಿವೆ ಎಂದರು.

ADVERTISEMENT

ಮನೆಯ ಸುತ್ತ ಖಾಲಿ ಜಾಗ ಇದ್ದರೆ ಸಸಿ ನೆಡಬೇಕು. ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು. ಅನಿವಾರ್ಯ ಪರಿಸ್ಥಿಯಲ್ಲಿ ಮಾತ್ರ ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ ಬಳಕೆ ಮಾಡಬೇಕು. ಕೆಲ ಪ್ರಜ್ಞಾವಂತ ದೇಶಗಳಲ್ಲಿ ಜನರು ಹೆಚ್ಚಾಗಿ ಸೈಕಲ್ ಉಪಯೋಗಿಸುತ್ತಾರೆ. ಎಲ್ಲರೂ ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಪ್ರತಿಯೊಬ್ಬರಿಗೂ ಕಾನೂನು ಜಾಗೃತಿ ಮೂಡಿಸುವುದು, ನೆರವು ನೀಡುವುದು, ರಾಜಿ ಸಂಧಾನ ಮಾಡಿಸುವ ನಿಮಿತ್ತ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರ ರಚನೆಯಾಗಿದೆ. ಜನರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎನ್.ಹೆಗಡೆ ಮಾತನಾಡಿ, 1970ರ ಏಪ್ರಿಲ್‌ 22ರಂದು ವಿಶ್ವ ಭೂ ದಿನಾಚರಣೆ ಜಾರಿಗೆಬಂದಿತು. ಪ್ರಪಂಚದ 193 ದೇಶಗಳು ಪ್ರತಿ ವರ್ಷ ವಿಶ್ವ ಭೂ ದಿನ ಆಚರಿಸುತ್ತವೆ. ಆದರೂ ಪರಿಸರ ಮಾಲಿನ್ಯ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ ಎಂದು ವಿಷಾಧಿಸಿದರು.

ಪರಿಸರಕ್ಕೆ ಪ್ಲಾಸ್ಟಿಕ್ ಮಾರಕವಾಗಿದೆ. ಪ್ಲಾಸ್ಟಿಕ್ ಕೈ ಚೀಲಗಳ ಬದಲಾಗಿ ಬಟ್ಟೆ, ಪೇಪರ್ ಕೈ ಚೀಲಗಳನ್ನು ಬಳಸಬೇಕು. ನೀರಿನ ಮಿತ ವ್ಯಯ ಮಾಡಬೇಕು. ನೀರೊ ಪೋಲಾಗದಂತೆ ತಡೆಯಬೇಕು. ಸಸಿಗಳನ್ನು ನೆಡಲು ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಎಸ್.ಆರ್.ಮಂಜುನಾಥ್, ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಇ.ಪ್ರಕಾಶ್, ವಕೀಲೆ ಪಾರ್ವತಿಬಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.