ADVERTISEMENT

ರಾಜ್ಯದೆಲ್ಲೆಡೆ ರೈತ ಬಜಾರ್ ಆರಂಭವಾಗಲಿ: ಸೋನಲ್‌ಗೌಡ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 14:08 IST
Last Updated 14 ಜೂನ್ 2025, 14:08 IST
ಕಡೂರು ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ರೈತ ಬಜಾರ್ ಮೂಲಕ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಹಕಾರ ಸಂಘದ ಅಧ್ಯಕ್ಷ ಎಚ್.ವಿಶ್ವನಾಥ್, ಸೋನಲ್‌ಗೌಡ, ಬಿದರೆ ಜಗದೀಶ್, ಕಂಸಾಗರ ಸೋಮಶೇಖರ್‌ ಭಾಗವಹಿಸಿದ್ದರು
ಕಡೂರು ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ರೈತ ಬಜಾರ್ ಮೂಲಕ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಹಕಾರ ಸಂಘದ ಅಧ್ಯಕ್ಷ ಎಚ್.ವಿಶ್ವನಾಥ್, ಸೋನಲ್‌ಗೌಡ, ಬಿದರೆ ಜಗದೀಶ್, ಕಂಸಾಗರ ಸೋಮಶೇಖರ್‌ ಭಾಗವಹಿಸಿದ್ದರು   

ಕಡೂರು: ಕಡೂರು ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ತೆರೆದಿರುವ ರೈತ ಬಜಾರ್‌ನ ಶಾಖೆಯನ್ನು ರಾಜ್ಯದೆಲ್ಲೆಡೆಯ ಸಹಕಾರ ಸಂಘಗಳು ತೆರೆದು ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಬೆಲೆ ಸಿಗುವಂತಾಗಲಿ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಎಸ್.ಡಿ.ಸೋನಲ್‌ಗೌಡ ಹೇಳಿದರು.

ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಶನಿವಾರ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರಿಯಾಯಿತಿ ಕಾರ್ಡ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲೇ ಪ್ರಥಮವಾಗಿ ಕಡೂರು ಪಟ್ಟಣದಲ್ಲಿ ರೈತ ಬಜಾರ್ ಆರಂಭವಾಗಿದ್ದು, ಸಾವಯವ ಕೃಷಿಗೆ ಉತ್ತೇಜನ, ಸಾವಯವ ಆಹಾರ ಪದಾರ್ಥಗಳಿಗೆ ಮಾರುಕಟ್ಟೆ ಕಲ್ಪಿಸಿದೆ. ಸಹಕಾರ ಸಂಘಗಳಿಗೆ, ರೈತರಿಗೆ ಉತ್ತಮ ಬೆಲೆ ನೀಡಿ ಖರೀದಿದಾರರಿಗೂ ಶೇ 5ರ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿರುವ ಸಂಘದ ಅಧ್ಯಕ್ಷ ವಿಶ್ವನಾಥ್ ಮತ್ತು ಅವರ ನಿರ್ದೇಶಕ ತಂಡದವರ ಶ್ರಮ ಶ್ಲಾಘನೀಯ ಎಂದರು.

ADVERTISEMENT

ಕಡೂರು ತಾಲ್ಲೂಕಿನ ಎಲ್ಲ ಹಾಲು ಉತ್ಪಾದಕ ಸಂಘಗಳ ಸದಸ್ಯರಿಗೆ ರೈತ ಬಜಾರ್ ರಿಯಾಯಿತಿ ಕಾರ್ಡ್ ನೀಡಿರುವುದು ಶ್ಲಾಘನೀಯ. ಕಡೂರು ತಾಲ್ಲೂಕಿನಲ್ಲಿ 161 ಹಾಲು ಉತ್ಪಾದಕ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 101 ಸಂಘಗಳು ಮಹಿಳೆಯರ ನಿರ್ವಹಣೆ ಇದ್ದು, ಲಾಭ ಗಳಿಸುತ್ತಿವೆ. ಪ್ರತಿ ತಿಂಗಳು 32 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗಿ ಖರೀದಿದಾರ ಸಂಸ್ಥೆ ಹಾಸನ ಹಾಲು ಒಕ್ಕೂಟವು ಪ್ರತಿ ತಿಂಗಳು ₹ 12 ಕೋಟಿ ನೀಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಿ.ಎಚ್.ವಿಶ್ವನಾಥ್, 10, 12ನೇ ತರಗತಿಯಲ್ಲಿ ಈ ಬಾರಿ ಅತಿ ಹೆಚ್ಚು ಅಂಕಗಳಿಸಿದ ರೈತಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಸಂಘ ಹೆಜ್ಜೆ ಇಟ್ಟಿದೆ ಎಂದರು.

ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಬಿದರೆ ಜಗದೀಶ್ ಮಾತನಾಡಿ, ರೈತ ಬಜಾರಿನಲ್ಲಿ ರೈತರಿಗೆ ನಿಖರವಾದ ಬೆಲೆ ಸಿಗುತ್ತಿದ್ದು, ನಮ್ಮ ಕೃಷಿ ವ್ಯವಸ್ಥೆಯನ್ನು ಸರ್ಕಾರ ಕೈಗಾರಿಕೆಯಾಗಿ ಘೋಷಿಸಬೇಕು ಎಂದು ಒತ್ತಾಯ ಮಾಡಿದರು.

ಸರಸ್ಪತಿಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಂಸಾಗರ ಸೋಮಶೇಖರ್, ಚಿಕ್ಕಮಗಳೂರು ರೈತ ಮುಖಂಡ ಸುನಿಲ್ ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ದಯಾನಂದ್, ಮಧುಸೂದನ್, ಕೃಷ್ಣರಾಮಪ್ಪ, ವಿನೋದ್ ಭಾಗವಹಿಸಿದ್ದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ತಾಲ್ಲೂಕಿನ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು, ಸದಸ್ಯರಿಗೆ ರೈತ ಬಜಾರಿನ ರಿಯಾಯಿತಿ ಕಾರ್ಡ್ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.