ಕಡೂರು: ತಾಲ್ಲೂಕಿನ ಎಮ್ಮೆದೊಡ್ಡಿ ಪ್ರದೇಶಕ್ಕೆ ತುರುವೇಕೇರೆಯಲ್ಲಿ ಸೆರೆ ಹಿಡಿದ ಚಿರತೆಯನ್ನು ರಾತ್ರೋರಾತ್ರಿ ಸಾಗಿಸಿ ಇಲ್ಲಿನ ಜನರು ಭಯದಲ್ಲಿ ಬದುಕುವ ಸ್ಥಿತಿ ನಿರ್ಮಿಸಿದವರ ವಿರುದ್ಧ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಎಮ್ಮೆದೊಡ್ಡಿ ಭಾಗದ ರೈತರು ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಕನಕ ವೃತ್ತದ ಬಳಿ ಶನಿವಾರ ಜಮಾಯಿಸಿದ ಎಮ್ಮೆದೊಡ್ಡಿ, ಸಿದ್ದರಹಳ್ಳಿ, ಸಣ್ಣ ಸಿದ್ದರಹಳ್ಳಿ ಮತ್ತು ಮದಗದಕೆರೆ ವ್ಯಾಪ್ತಿಯ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗುತ್ತಾ ಕಚೇರಿವರೆಗೆ ನಡೆದುಬಂದರು.
ಅರಣ್ಯ ಇಲಾಖೆ ಕಚೇರಿ ಮುಂದೆ ಸೇರಿದ್ದ ಗ್ರಾಮಸ್ಥರು ಇಲಾಖೆಯ ಆವರಣ ಪ್ರವೇಶಿಸಲು ಸ್ಥಳದಲ್ಲಿದ್ದ ಪೊಲೀಸರು ಬಿಡಲಿಲ್ಲ. ಈ ಸಂದರ್ಭದಲ್ಲಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಲು ಮುಂದಾದರು. ಸುಮಾರು ಒಂದು ಗಂಟೆಯ ಬಳಿಕವೂ ಯಾರೂ ಜಗ್ಗದಿದ್ದ ಪರಿಣಾಮ ಕೆ.ಎಂ.ರಸ್ತೆ ಬಂದ್ ಮಾಡಿ ಪ್ರತಿಭಟಿಸುವುದಾಗಿ ಹೊರಟ ಗ್ರಾಮಸ್ಥರು ಕಡೂರು ಡಿಪೋ ತಿರುವಿನ ಬಳಿ ಧರಣಿ ಕುಳಿತು ರಸ್ತೆ ತಡೆಗೆ ಮುಂದಾದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಗರ್‌ಹುಕುಂ ಸಮಿತಿ ಸದಸ್ಯ ಎಚ್.ಜಿ.ಶಶಿಕುಮಾರ್ ಅವರು ಪ್ರತಿಭಟನಾ ಸ್ಥಳಕ್ಕೆ ಬಂದ ಚಿಕ್ಕಮಗಳೂರು ಡಿಸಿಎಫ್ ರಮೇಶ್‌ಬಾಬು, ತರೀಕೆರೆ ಡಿವೈಎಸ್‌ಪಿ ಹಾಲಮೂರ್ತಿರಾವ್ ಅವರ ಮುಂದೆ ಎಮ್ಮೆದೊಡ್ಡಿ ವ್ಯಾಪ್ತಿಯ ಸಿಸಿಟಿವಿಯಲ್ಲಿ ಸೆರೆಯಾದ ಫುಟೇಜ್‌ಗಳನ್ನು ಪ್ರದರ್ಶಿಸಿದರು.ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಜನರ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯನ್ನು ರಾತ್ರಿ ವೇಳೆ ಸೆರೆ ಹಿಡಿದು ಅದನ್ನು ವಾಹನದಲ್ಲಿ ಇಲ್ಲಿಗೆ ತಂದು ಬಿಡಲಾಗಿದೆ. ವಾಹನಗಳು ಯಾರದ್ದು ಎನ್ನುವ ಬಗ್ಗೆ ಮಾಹಿತಿ ಪಡೆದು ಅವರ ವಿರುದ್ಧ ಕ್ರಮ ವಹಿಸಲೇಬೇಕು ಹಾಗೂ ಎಫ್‌ಐಆರ್ ದಾಖಲಿಸಬೇಕು. ಸ್ಥಳಾಂತರಿಸಿರುವ ಚಿರತೆಯನ್ನು ಶೀಘ್ರವಾಗಿ ಹಿಡಿದು ದಾಳಿಯ ಕಾರಣದಿಂದ ಇಲ್ಲಿನ ಜನರಲ್ಲಿ ಉಂಟಾಗಿರುವ ಭಯವನ್ನು ಹೋಗಲಾಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಚಿಕ್ಕಮಗಳೂರು ಡಿಸಿಎಫ್ ರಮೇಶಬಾಬು ಕ್ರಮ ವಹಿಸುವ ಭರವಸೆ ನೀಡಿದರೂ ಒಪ್ಪದ ಪ್ರತಿಭಟನಾಕಾರರು, ಜನರ ಎದುರೇ ನಿರ್ಣಯ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ನಂತರ ಅರಣ್ಯ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾಹನಗಳ ಮತ್ತು ಕೃತ್ಯ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ನಾಳೆ ಬೆಳಿಗ್ಗೆ ಒಳಗೆ ಎಫ್‌ಐಆರ್ ಪ್ರತಿ ಒದಗಿಸಲಾಗುವುದು ಎಂದು ಪ್ರಕಟಿಸಿದರು. ಡಿವೈಎಸ್‌ಪಿ ಹಾಲಮೂರ್ತಿರಾವ್, ಎಸಿಎಫ್ ಮೋಹನ ನಾಯಕ್ ಕೂಡಾ ಅಧಿಕಾರಿಗಳ ಹೇಳಿಕೆಯನ್ನು ಒಪ್ಪಿಕೊಳ್ಳುವಂತೆ ಪ್ರತಿಭಟನಾಕಾರರಿಗೆ ಮನ ಒಲಿಸಿದರು.
ಪ್ರತಿಭಟನೆಯಲ್ಲಿ ಮುಸ್ಲಾಪುರ ಶಶಿಕುಮಾರ್, ಸಿದ್ದರಹಳ್ಳಿ ಸೋಮೇಶ್, ಪ್ರೇಮ್‌ಕುಮಾರ್, ವಿನಯ್ ವಳ್ಳು, ರಮೇಶ್, ನವೀನ್, ಛಾಯಾಪತಿ, ಯೋಗೀಶ್, ಲವಕುಮಾರ್ ಭಾಗವಹಿಸಿದ್ದರು. ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.