ADVERTISEMENT

ಅಜ್ಜಂಪುರ: ಮಾಜಿ ಯೋಧರಿಗೆ ಹುಟ್ಟೂರ ಸನ್ಮಾನ

ಅಜ್ಜಂಪುರದಲ್ಲಿ ಕುಣಿದು ಕುಪ್ಪಳಿಸಿದ ಗ್ರಾಮಸ್ಥರು, ವಾಹನದಲ್ಲಿ ಮೆರವಣಿಗೆ

ಜೆ.ಒ.ಉಮೇಶ್ ಕುಮಾರ್
Published 9 ಜನವರಿ 2022, 7:31 IST
Last Updated 9 ಜನವರಿ 2022, 7:31 IST
ಅಜ್ಜಂಪುರದಲ್ಲಿ ಮಾಜಿ ಯೋಧರಾದ ಗುರಪ್ಪ, ಕೃಷ್ಣಮೂರ್ತಿ, ಶ್ರೀಕಾಂತ್ ಅವರನ್ನು ಹುಟ್ಟೂರಿನ ಜನರು ಅಭಿನಂದಿಸಿದರು 
ಅಜ್ಜಂಪುರದಲ್ಲಿ ಮಾಜಿ ಯೋಧರಾದ ಗುರಪ್ಪ, ಕೃಷ್ಣಮೂರ್ತಿ, ಶ್ರೀಕಾಂತ್ ಅವರನ್ನು ಹುಟ್ಟೂರಿನ ಜನರು ಅಭಿನಂದಿಸಿದರು    

ಅಜ್ಜಂಪುರ: ‘ಬಾಲ್ಯದಲ್ಲಿಯೇ ಸೇನಾ ಸಮವಸ್ತ್ರವು ನನ್ನನ್ನು ಆಕರ್ಷಿಸಿತ್ತು. ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಕನಸು 20 ವರ್ಷದ ಹಿಂದೆ ಈಡೇರಿತು. ದೇಶಕ್ಕಾಗಿ ಎರಡು ದಶಕ ಸೇವೆ ಸಲ್ಲಿಸಿದ ಸಂತೃಪ್ತ ಭಾವದೊಂದಿಗೆ ತವರಿಗೆ ಬಂದಾಗ ಊರವರು ಸ್ವಾಗತಿಸಿದ ಪರಿ ಜೀವನವನ್ನು ಸಾರ್ಥಕಗೊಳಿಸಿದೆ’

ಇದು ಸುಮಾರು 20 ವರ್ಷಗಳ ಕಾಲ ಗಡಿಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಹಿಂತಿರುಗಿದ ಅಜ್ಜಂಪುರದ ಗುರಪ್ಪ ಅವರ ಮನದ ಮಾತು.

ಅವರ ಜತೆ ಗ್ರಾಮದ ಕೃಷ್ಣಮೂರ್ತಿ ಮತ್ತು ಶ್ರೀಕಾಂತ್ ದೇಶಕ್ಕಾಗಿ ಸೇವೆ ಸಲ್ಲಿಸಿ ತವರಿಗೆ ಬಂದಿದ್ದು, ಹುಟ್ಟೂರಿನ ಜನತೆ ಅವರನ್ನು ಹೃದಯಸ್ಪರ್ಶಿ ಸ್ವಾಗತಿಸಿದ್ದಾರೆ.

ADVERTISEMENT

1977ರಲ್ಲಿ ಜನಿಸಿದ ಗುರಪ್ಪ ಅವರಿಗೆ ಬಾಲ್ಯದಲ್ಲೇ ‘ದೇಶ ಸೇವೆ, ಈಶ ಸೇವೆ’ ಎಂಬ ಮಾತು ಮನದಲ್ಲಿ ಬೇರೂರಿತ್ತು. ಅವಿರತ ಶ್ರಮದಿಂದ 1997ರಲ್ಲಿ ಗಡಿ ಭದ್ರತಾ ಪಡೆಗೆ ಸೇರಿದರು. ಚಾವ್ಲಾ, ಕಾಶ್ಮೀರದ ಗೋಗೋಲ್ಯಾಂಡ್, ಪಶ್ಚಿಮ ಬಂಗಾಳದ ಕಲ್ಯಾಣಿ, ಸಾಧನಪುರ, ರಾಜಸ್ತಾನದ ದಬ್ಲಾ, ಪೋಖ್ರಾನ್, ಕಾಶ್ಮೀರದ ಬಂಡಿಪುರದಲ್ಲಿ ಸೇವೆ ಸಲ್ಲಿಸಿ ಈಗ ತವರಿಗೆ ಮರಳಿದ್ದಾರೆ.

1983ರಲ್ಲಿ ಹುಟ್ಟಿದ ಅಜ್ಜಂಪುರ ಗ್ರಾಮದ ಕೃಷ್ಣಮೂರ್ತಿ, 2001ರಲ್ಲಿ ಸೇನೆಗೆ ನಿಯುಕ್ತರಾಗಿ, ಮೌಂಟ್ ಅಬು, ಹರಿಯಾಣದ ಅಂಬಾಲ, ಅಂಡಮಾನ್-ನಿಕೋಬಾರ್‌ ನಲ್ಲಿ ಸೇವೆ ಸಲ್ಲಿಸಿದ್ದಾರೆ.

ಅದೇ ಗ್ರಾಮದ ಶ್ರೀಕಾಂತ್ ಅವರು 1999 ರಲ್ಲಿ ಸೇನೆಗೆ ಸೇರಿದ್ದು, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳದ ಎನ್‌ಡಿಆರ್‌ಎಫ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ.

ಇವರಿಗೆ ಪಟ್ಟಣದ ಕದಂಬ ಯುವಕ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಹಿರಿಯ ನಾಗರಿಕ ವೇದಿಕೆ, ನೌಕರರ ಸಂಘ, ಆಟೊ ಮಾಲೀಕ ಮತ್ತು ಚಾಲಕರ ಸಂಘ ಹಾಗೂ ಗ್ರಾಮಸ್ಥರು ಹೂ-ಹಾರ ಹಾಕಿ ಬರಮಾಡಿಕೊಂಡರೆ, ಮಕ್ಕಳು ಗುಲಾಬಿ ನೀಡಿ ಸ್ವಾಗತಿಸಿದರು.

ಮೂವರು ಮಾಜಿ ಯೋಧರನ್ನು ವಾಹನದಲ್ಲಿ ಮೆರವಣಿಗೆ ನಡೆಸ ಲಾಯಿತು. ವೀರಗಾಸೆ, ಡೊಳ್ಳು, ಮಂಗಳವಾದ್ಯಗಳು ಮೆರವಣಿಗೆಗೆ ಕಳೆ ತುಂಬಿದ್ದವು. ಯುವಕರು ಹೆಜ್ಜೆ ಹಾಕಿ ಸಂತಸಪಟ್ಟರು. ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

‘ಹುಟ್ಟೂರಲ್ಲಿ ಇಂತಹ ಸ್ವಾಗತ ಸಿಗುವುದೆಂಬ ಅಂದಾಜಿರಲಿಲ್ಲ. ಇದು ಹೃದಯ ಸ್ಪರ್ಶಿಯಾಗಿದ್ದು, ಹರ್ಷ ತಂದಿದೆ. ಜೀವನದ ಸ್ಮರಣೀಯ ಕ್ಷಣದಲ್ಲೊಂದಾಗಿದೆ’ ಎಂದು ನಿವೃತ್ತ ಯೋಧ ಶ್ರೀಕಾಂತ್ ಸಂತಸ ವ್ಯಕ್ತಪಡಿಸಿದರು.

‘ದುಡಿಮೆಗೆ ಅನೇಕ ಕೆಲಸಗಳಿದ್ದು, ದೇಶ ಸೇವೆ ಶ್ರೇಷ್ಠವಾದುದು. ದೇಶ ರಕ್ಷಣೆಯ ಅವಕಾಶ ಸಿಗುವುದು ವಿರಳ. ಸದೃಢ ಯುವಕರು, ಸೇನೆಯತ್ತ ಮುಖಮಾಡಬೇಕು. ಅಜ್ಜಂಪುರ ಗ್ರಾಮದ ಯುವಕರು ಸೇನೆಯತ್ತ ಮುಖ ಮಾಡಬೇಕು’ ಎಂದು ಗುರಪ್ಪ ಅಭಿಪ್ರಾಯಪಟ್ಟರು.

‘ಸೇನೆಯಲ್ಲಿದ್ದಾಗ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ತೃಪ್ತಿ ಇದೆ. ಅಜ್ಜಂಪುರ ಗ್ರಾಮ ಜನತೆ ನಮ್ಮನ್ನು ಮನೆಯ ಮಗನಂತೆ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಇದು ಜೀವನದ ಸ್ಮರಣೀಯ ಕ್ಷಣ’ ಎಂದು ಕೃಷ್ಣಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.