ತರೀಕೆರೆ: ಪಟ್ಟಣದಲ್ಲಿ ದಿನನಿತ್ಯ ಉತ್ಪಾದನೆಯಾಗುತ್ತಿರುವ ಹಸಿ ಕಸ ಮತ್ತು ಕೋಳಿ ತ್ಯಾಜ್ಯದ ಸಂಸ್ಕರಣೆಗೆ ಬಳಸುವ ಕಪ್ಪು ಸೈನಿಕ ಹುಳುಗಳ ಉತ್ಪಾದನೆ ನಡೆಸುವ ನಿಟ್ಟಿನಲ್ಲಿ ತರೀಕೆರೆ ಪುರಸಭೆಯು ಮೊಟ್ಟೆ ಉತ್ಪಾದನೆ ಘಟಕ ಪ್ರಾರಂಭಿಸಿದೆ.
ನಗರದಲ್ಲಿ ಪ್ರತಿನಿತ್ಯ ಸುಮಾರು 16 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದರಲ್ಲಿ 9 ಟನ್ ಹಸಿ ತ್ಯಾಜ್ಯ, 6 ಟನ್ ಒಣ ತ್ಯಾಜ್ಯ, 1 ಟನ್ ಇತರ ತ್ಯಾಜ್ಯ ಸಂಗ್ರವಾಗುತ್ತಿದೆ. ಇದರಲ್ಲಿ ಹಸಿ ಕಸ ಸಂಸ್ಕರಣೆ ಮಾಡಲು ಕಪ್ಪು ಸೈನಿಕ ಹುಳುಗಳನ್ನು ಬಳಸಲಾಗುತ್ತದೆ.
ಹಸಿ ಕಸದ ಮೇಲೆ ಮೊಟ್ಟೆಯಿಂದ ಲಾರ್ವ ತಯಾರು ಮಾಡಿ, ಅದನ್ನು ಹಸಿ ತ್ಯಾಜ್ಯ ಮತ್ತು ಕೋಳಿ ತ್ಯಾಜ್ಯಕ್ಕೆ ಹಾಕಿ ಸಂಸ್ಕರಣೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ಪ್ರಾರಂಭವಾಗಿ ಕೇವಲ 15 ದಿನಗಳಲ್ಲಿ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರ ಉತ್ಪಾದನೆಯಾಗುತ್ತದೆ.
15 ದಿನಗಳ ನಂತರ ಉಳಿದಿರುವ ಲಾರ್ವ ಬಳಸಿಕೊಂಡು ಕಪ್ಪು ಸೈನಿಕ ನೊಣಗಳಾಗಲು ಬಿಡಲಾಗುತ್ತದೆ. ಇದೇ ಕಸ ವಿಲೇವಾರಿ ಘಟಕದಲ್ಲಿ ವ್ಯವಸ್ಥಿತವಾಗಿ ನಿರ್ಮಿಸಿರುವ ಘಟಕದಲ್ಲಿ ನೊಣಗಳಿಂದ ಪುನಃ ಮೊಟ್ಟೆ ಉತ್ಪಾದನೆಗೆ ಕ್ರಮವಹಿಸಲಾಗುತ್ತಿದೆ. ಈ ಪ್ರಕ್ರಿಯೆಯಿಂದ ಕಡಿಮೆ ಸಮಯದಲ್ಲಿ ಪುರಸಭೆ ತ್ಯಾಜ್ಯದಿಂದ ಗುಣಮಟ್ಟದ ಗೊಬ್ಬರವನ್ನು ಉತ್ಪಾದಿಸಬಹುದಾಗಿದೆ. ಸದ್ಯ ಒಣ ತ್ಯಾಜ್ಯ ಪ್ರತ್ಯೇಕಿಸಿ ಮರು ಬಳಕೆದಾರರಿಗೆ ಮಾರಾಟ ಮಾಡಲಾಗುತ್ತಿದೆ. ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕಿಸಿ ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸಿಕೊಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಈಗ ಉತ್ಪತ್ತಿಯಾಗುತ್ತಿರುವ ಮೊಟ್ಟೆಗಳು ತರೀಕೆರೆ ಪುರಸಭೆಗೆ ಸಾಕಾಗುವಷ್ಟಿದೆ. ಮುಂದಿನ ದಿನಗಳಲ್ಲಿ ಈ ಕಪ್ಪು ಸೈನಿಕ ಲಾರ್ವ ಉತ್ಪಾದನೆ ಹೆಚ್ಚಿಸಿ, ಇತರ ನಗರ ಸ್ಥಳೀಯ ಸಂಸ್ಥೆಗಳಿಗೂ ನೀಡುವ ಯೋಜನೆ ಇದೆ ಎನ್ನುತ್ತಾರೆ ಪರಿಸರ ಎಂಜಿನಿಯರ್ ತಾಹೇರಾ ತಸ್ನೀಮ್.
ಬಿ.ಎಸ್.ಎಫ್. ಲಾರ್ವ ಬಳಕೆಯಿಂದ ಗೊಬ್ಬರ ತಯಾರಿಸಿ ತರೀಕೆರೆ ಪುರಸಭೆ ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳ ಗಮನ ಸೆಳೆದಿದೆಎಚ್. ಪ್ರಶಾಂತ್ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.