ADVERTISEMENT

ಬಡವರಿಗೆ ಕಡಿಮೆ ಬಾಡಿಗೆ ನಿಗದಿಪಡಿಸಿ: ಸಿದ್ದರಾಮಯ್ಯ ಸಲಹೆ

ಕನಕ ಸಮುದಾಯ ಭವನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 15:15 IST
Last Updated 11 ನವೆಂಬರ್ 2018, 15:15 IST
ಸಿದ್ದರಾಮಯ್ಯ ಅವರು ಕನಕ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿದರು. ಈಶ್ವರಾನಂದಪುರಿ ಸ್ವಾಮೀಜಿ ಇದ್ದಾರೆ.
ಸಿದ್ದರಾಮಯ್ಯ ಅವರು ಕನಕ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿದರು. ಈಶ್ವರಾನಂದಪುರಿ ಸ್ವಾಮೀಜಿ ಇದ್ದಾರೆ.   

ಚಿಕ್ಕಮಗಳೂರು: ನಗರದ ಕನಕ ಸಮುದಾಯ ಭವನದಲ್ಲಿ ಮದುವೆ ಮೊದಲಾದ ಶುಭಸಮಾರಂಭಗಳಿಗೆ ಕುರುಬ ಸಮಾಜದ ಬಡವರಿಗೆ ಕಡಿಮೆ ಬಾಡಿಗೆ ನಿಗದಿಪಡಿಸುವಂತೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಲಹೆ ನೀಡಿದರು.

ಜಿಲ್ಲಾ ಕುರುಬರ ಸಂಘದ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಬಳಿ ನಿರ್ಮಿಸಿರುವ ಕನಕ ಸಮುದಾಯ ಭವನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು. ಬಹಳಷ್ಟು ವರ್ಷಗಳ ಪ್ರಯತ್ನದಿಂದ ಈ ಭವನ ನಿರ್ಮಾಣವಾಗಿದೆ. ಭವನ ನಿರ್ಮಾಣಕ್ಕೆ ಸರ್ಕಾರದಿಂದಲೂ ₹ 2 ಕೋಟಿ ಅನುದಾನ ನೀಡಲಾಗಿದೆ. ಸಾರ್ವಜನಿಕರಿಗೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಅನುದಾನ ಒದಗಿಸಿದೆ. ದುಡ್ಡಿದ್ದವರ ಜೊತೆಗೆ ದುಡ್ಡಿಲ್ಲದವರಿಗೂ ಉಪಯೋಗವಾದರೆ ಸಾರ್ಥಕತೆ ಹೆಚ್ಚಾಗುತ್ತದೆ ಎಂದು ಹೇಳಿದರು.

‘ಪಶುಸಂಗೋಪನೆ ಸಚಿವನಾಗಿದ್ದಾಗ 1986ರಲ್ಲಿ ಈ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ನೆನಪಿದೆ. 32 ವರ್ಷಗಳಲ್ಲಿ ₹ 7.5 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಿದ್ದಾರೆ. ಇಲ್ಲಿ ಪಾರ್ಕಿಂಗ್‌ಗೆ ತುಂಬಾ ಜಾಗ ಇದೆ. ಈ ಭವನ ಸುತ್ತ ಕಾಂಪೌಂಡು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಸ್ವಲ್ಪ ಅನುದಾನ ಒದಗಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಹಿಂದುಳಿದವರಿಗೆ ಶಿಕ್ಷಣ ಬೇಕು, ರಾಜಕೀಯ ಪ್ರಾತಿನಿಧ್ಯ ಬೇಕು ಎಂದು ಬಾಯಿಮಾತಿನಲ್ಲಿ ಹೇಳಿದರೆ ಸಾಲದು, ಕಾರ್ಯರೂಪಕ್ಕೆ ತರಬೇಕು. ಸಮುದಾಯ ಭವನಕ್ಕೆ ಬಳಸಿಕೊಂಡು ಮಿಕ್ಕಿರುವ ಜಾಗದಲ್ಲಿ ವಿದ್ಯಾಸಂಸ್ಥೆ ಆರಂಭಿಸಬೇಕು’ ಎಂದು ಹೇಳಿದರು.

‘ಹಿಂದುಳಿದ ವರ್ಗದವರಿಗೆ ಧಾರ್ಮಿಕ ಕೇಂದ್ರ ಬೇಕು ಎಂದು 1992ರಲ್ಲಿ ಕನಕ ಗುರುಪೀಠವನ್ನು ಸ್ಥಾಪನೆ ಮಾಡಿದೆವು. ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಹಣ ಸಂಗ್ರಹಿಸಿದ್ದೆವು. ಪೀಠವು ಚೆನ್ನಾಗಿ ಬೆಳೆಯುತ್ತಿದೆ’ ಎಂದು ಹೇಳಿದರು.

‘ಪ್ರದೇಶ ಕುರುಬ ಸಂಘದ ಆಸ್ತಿ, ಹಣ ಲಪಟಾಯಿಸಲು ತುಂಬಾ ವರ್ಷಗಳ ಹಿಂದೆ ಕೆಲವರು ಪಿತೂರಿ ಮಾಡಿದ್ದರು. ಅದಕ್ಕೆಲ್ಲ ಅವಕಾಶವಾಗದಂತೆ ತಡೆಯೊಡ್ಡಿದ್ದೆ’ ಎಂದು ನೆನಪಿಸಿಕೊಂಡರು.
‘ಚಿಕ್ಕಮಗಳೂರಿಗೆ ಮೆಡಿಕಲ್‌ ಕಾಲೇಜನ್ನು ಮಂಜೂರು ಮಾಡಿಸಿದ್ದೆ. ಇದಕ್ಕಾಗಿ 40 ಎಕರೆ ತೆಗೆದುಕೊಳ್ಳಲಾಗಿತ್ತು. ಹಣದ ಕೊರತೆಯಿಂದಾಗಿ ಕಾಲೇಜು ಸ್ಥಾಪಿಸಲು ಆಗಿಲ್ಲ’ ಎಂದು ಹೇಳಿದರು.

ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಎ.ವಿ.ಗಾಯತ್ರಿಶಾಂತೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಶಾಂತೇಗೌಡ, ರಾಜ್ಯಸಭಾ ಸದಸ್ಯ ಜೈರಾಂರಮೇಶ್‌, ಅರಣ್ಯ ಸಚಿವ ಆರ್‌.ಶಂಕರ್‌, ವಿಧಾನ ಪರಿಷತ್‌ ಸದಸ್ಯರಾದ ಎಚ್‌.ಎಂ.ರೇವಣ್ಣ, ಎಸ್‌.ಎಲ್‌.ಭೋಜೇಗೌಡ, ಎಸ್‌.ಎಲ್‌.ಧರ್ಮೇಗೌಡ, ಎಂ.ಕೆ.ಪ್ರಾಣೇಶ್‌, ಶಾಸಕರಾದ ಸಿ.ಟಿ.ರವಿ, ಎಂ.ಪಿ.ಕುಮಾರಸ್ವಾಮ, ಟಿ.ಡಿ.ರಾಜೇಗೌಡ, ಮಾಜಿ ಶಾಸಕರಾದ ಮೋಟಮ್ಮ, ಜಿ.ಎಚ್‌.ಶ್ರೀನಿವಾಸ್‌, ಟಿ.ಎಚ್‌.ಶಿವಶಂಕರಪ್ಪ, ಬಿ.ಬಿ.ನಿಂಗಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಬೆಳವಾಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ, ಮುಖಂಡರಾದ ಕೆಂಪರಾಜು, ಕೆ.ಬಿ.ಮಲ್ಲಿಕಾರ್ಜುನ್‌, ರೇಖಾ ಹುಲಿಯಪ್ಪಗೌಡ, ಎಂ.ಎಲ್‌.ಮೂರ್ತಿ, ಮಾಹಿತಿ ಆಯುಕ್ತ ಬಿ.ಎಸ್‌.ಶೇಖರಪ್ಪ, ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ, ಶರತ್‌ ಕೃಷ್ಣಮೂರ್ತಿ, ಸವಿತಾ ರಮೇಶ್‌, ನಗರಸಭೆ ಸದಸ್ಯ ಪುಷ್ಪರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.