ADVERTISEMENT

ಏರಿಳಿತ ಕಾಣುವ ಹೂವಿನ ಮಾರುಕಟ್ಟೆ

ಸ್ವಾತಂತ್ರ್ಯ ಮಹೋತ್ಸವಕ್ಕೆ ಏರುಗತಿ; ಮತ್ತೆ ಕುಸಿತ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 5:15 IST
Last Updated 19 ಆಗಸ್ಟ್ 2022, 5:15 IST
ಕಡೂರು ಹೂವಿನ ಮಾರುಕಟ್ಟೆ
ಕಡೂರು ಹೂವಿನ ಮಾರುಕಟ್ಟೆ   

ಕಡೂರು: ಹೂವು ಚೆಲುವೆಲ್ಲಾ ನಂದೆಂದಿತು... ಎಂಬುದು ಹಾಡೊಂದರ ಜನಜನಿತ ಸಾಲು. ಎಷ್ಟೇ ಚೆಲುವು, ಸುವಾಸನೆ ಇದ್ದರೂ ಮಾರುಕಟ್ಟೆಯಲ್ಲಿ ಹೂವಿನ ಬೇಡಿಕೆ ಏರಿಳಿತ ಕಾಣುತ್ತದೆ. ವಾರಾಂತ್ಯ ಹಾಗೂ ಹಬ್ಬ ಹರಿದಿನಗಳ ಬೇಡಿಕೆ ಎಲ್ಲ ಸಂದರ್ಭದಲ್ಲೂ ಸ್ಥಿರವಾಗಿರುವುದಿಲ್ಲ. ಹೂ ಬೆಳೆಗಾರರು ಮತ್ತು ಮಾರಾಟಗಾರರು ಈ ಏರಿಳಿತ ಅರಿತುಕೊಂಡು ವ್ಯಾಪಾರ ನಡೆಸಬೇಕಾಗಿದೆ.

ಸೇವಂತಿಗೆ ಹೂವನ್ನು ಅಲ್ಪಪ್ರಮಾಣದಲ್ಲಿ ಬೆಳೆಯುವ ರೈತರು ತಾವೇ ಹೂವು ಕಟ್ಟಿ ಮಾರಾಟ ಮಾಡುತ್ತಾರೆ. ಒಂದು ಕೆ.ಜಿ.ಹೂವಿನಲ್ಲಿ ನಾಲ್ಕೈದು ಮಾರು, ಹತ್ತು ಮಾರುಗಳಿಗೆ ಒಂದು ಕುಚ್ಚು ಎಂಬುದು ಸಗಟು ಮಾರಾಟದ ಭಾಷೆ.

ಆದರೆ ಇಲ್ಲಿ ಬೇಡಿಕೆಗೆ ತಕ್ಕಷ್ಟು ಹೂವಿನ ಬೆಳೆ ಇಲ್ಲ. ವಿವಿಧ ರೀತಿಯ ಹೂವುಗಳನ್ನು ತುಮಕೂರು ಹಾಗೂ ತುಳಸಿಯನ್ನು ಹೊಸದುರ್ಗದಿಂದ ತರಿಸುತ್ತಾರೆ. ಕೆ.ಜಿ.ಲೆಕ್ಕದಲ್ಲಿ ಹೂವುಗಳನ್ನು ತರಿಸಿ ತಾವೇ ಕಟ್ಟಿ ಮಾರಾಟ ಮಾಡುತ್ತಾರೆ.

ADVERTISEMENT

ಒಂದು ಕೆ.ಜಿ. ಕನಕಾಂಬರದಲ್ಲಿ 22 ಮಾರು, ಕಾಕಡ 20, ದುಂಡು ಮಲ್ಲಿಗೆ 8ರಿಂದ 10, ಸೇವಂತಿಗೆ 2ರಿಂದ 3 ಮಾರು ಕಟ್ಟಬಹುದು. ಒಂದು ಕೆ.ಜಿ. ಬಿಡಿ ಹೂವನ್ನು ಮಾರುಕಟ್ಟೆಯಲ್ಲಿ ಖರೀದಿಸಿ, ಅದನ್ನು ಕಟ್ಟಿ ಮಾರಲಾಗುತ್ತದೆ. ಮಾರಾಟ ವಾಗದೆ ಉಳಿದರೆ ನಷ್ಟಕ್ಕೆ ದಾರಿ.

ಗುರುವಾರ, ಶುಕ್ರವಾರ ಮತ್ತು ಶನಿವಾರ ಹೂವುಗಳಿಗೆ ಬೇಡಿಕೆ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಬೇಡಿಕೆ ಹೆಚ್ಚು. ಆಗ ಹೂವುಗಳು ಒಂದು ಕೆ.ಜಿ.ಗೆ 2 ಸಾವಿರದ ತನಕ ಇರುತ್ತದೆ. ಇದರ ಜೊತೆ ಹಾರಗಳನ್ನು ಕಟ್ಟಿ ಇಡುತ್ತೇವೆ. ಅದರ ಆಯಸ್ಸು ಒಂದು ದಿನ ಮಾತ್ರ. ಮಾರಾಟವಾಗದಿದ್ದರೆ ಅದು ಬಾಡಿ ಹೋಗಿ ನಮ್ಮ ಸಮಯ,ಶ್ರಮ,ಹಣ ಎಲ್ಲವೂ ವ್ಯರ್ಥ ಎನ್ನುತ್ತಾರೆ ಕಡೂರಿನ ಗಣಪತಿ ದೇವಸ್ಥಾನದ ಬಳಿ ಹೂವಿನ ಅಂಗಡಿಯಿಟ್ಟಿರುವ ಚಂದ್ರಪ್ಪ.

ಕಳೆದ ವಾರ ಒಂದು ಕುಚ್ಚಿಗೆ ₹650 ಇತ್ತು. ಕನಕಾಂಬರ ಒಂದು ಕೆ‌.ಜಿ.ಹೂವಿಗೆ ₹800, ಕಾಕಡ ₹500, ದುಂಡು ಮಲ್ಲಿಗೆ ₹650 ಇತ್ತು. ಚೆಂಡು ಹೂವು ₹350 ಇತ್ತು.

ಕೇವಲ ಮೂರು ದಿನದಲ್ಲಿ ಹೂವುಗಳ ಬೆಲೆ ಅರ್ಧದಷ್ಟು ಕಡಿಮೆಯಾಗಿದೆ. ಹಬ್ಬಗಳೂ ಇಲ್ಲದ್ದರಿಂದ ಬೆಲೆ,ಬೇಡಿಕೆ ಕಡಿಮೆಯಾಗಿದೆ. ಬಹುಶಃ ಗಣಪತಿ ಹಬ್ಬದ ಹೊತ್ತಿಗೆ ಹೂವು ಮಾರುಕಟ್ಟೆ ಏರಿಕೆಯಾಗುತ್ತದೆ ಎಂಬುದು ವ್ಯಾಪಾರಸ್ಥರ ಅನಿಸಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.