ADVERTISEMENT

ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತು: ಶಾಸಕ ಕೆ.ಎಸ್‌.ಆನಂದ್‌

ಎಮ್ಮೆದೊಡ್ಡಿಯಲ್ಲಿ ‘ಶಾಸಕರ ನಡೆ ಪಂಚಾಯಿತಿ ಕಡೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:54 IST
Last Updated 8 ನವೆಂಬರ್ 2025, 4:54 IST
ಕಡೂರು ತಾಲ್ಲೂಕು ಎಮ್ಮೆದೊಡ್ಡಿಯಲ್ಲಿ ಶುಕ್ರವಾರ ‘ಶಾಸಕರ ನಡೆ ಪಂಚಾಯಿತಿ ಕಡೆ’ ಅಂಗವಾಗಿ ಜನಸಂಪರ್ಕ ಸಭೆಯಲ್ಲಿ ಶಾಸಕ ಆನಂದ್‌ ರೈತರೊಬ್ಬರ ಪ್ರಶ್ನೆಗೆ ಉತ್ತರಿಸಿದರು. ತಹಶೀಲ್ದಾರ್‌ ಪೂರ್ಣಿಮಾ, ಇಒ ಪ್ರವೀಣ್‌ ಇದ್ದರು
ಕಡೂರು ತಾಲ್ಲೂಕು ಎಮ್ಮೆದೊಡ್ಡಿಯಲ್ಲಿ ಶುಕ್ರವಾರ ‘ಶಾಸಕರ ನಡೆ ಪಂಚಾಯಿತಿ ಕಡೆ’ ಅಂಗವಾಗಿ ಜನಸಂಪರ್ಕ ಸಭೆಯಲ್ಲಿ ಶಾಸಕ ಆನಂದ್‌ ರೈತರೊಬ್ಬರ ಪ್ರಶ್ನೆಗೆ ಉತ್ತರಿಸಿದರು. ತಹಶೀಲ್ದಾರ್‌ ಪೂರ್ಣಿಮಾ, ಇಒ ಪ್ರವೀಣ್‌ ಇದ್ದರು   

ಕಡೂರು: ‘ಎಮ್ಮೆದೊಡ್ಡಿ ವಲಯವು ಅರಣ್ಯ, ಅಮೃತಮಹಲ್‌ ಮತ್ತು ಕಂದಾಯ ಭೂಮಿ ವಿಷಯದಲ್ಲಿ ನಲುಗುವ ಜತೆಗೆ ಜ್ವಲಂತ ಸಮಸ್ಯೆಗಳ ಗೂಡಾಗಿದೆ. ಇಲ್ಲಿ ಇರುವ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ಮೇಲೆ ಕ್ರಮ ವಹಿಸುವುದಾಗಿ’ ಶಾಸಕ ಕೆ.ಎಸ್‌.ಆನಂದ್‌ ತಿಳಿಸಿದರು.

‘ಶಾಸಕರ ನಡೆ-ಪಂಚಾಯಿತಿ ಕಡೆ’ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ತಾಲ್ಲೂಕಿನ ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಭಾಗದ ಜನರು ತಮ್ಮ ಬದುಕು ಮತ್ತು ಹಕ್ಕಿಗಾಗಿ ಹೋರಾಟ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಇಲ್ಲಿನ ಸಂಕಟಗಳ ವಿಷಯವಾಗಿ ಕಂದಾಯ ಮತ್ತು ಅರಣ್ಯ ಸಚಿವರ ಜಂಟಿ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಅದರ ಪ್ರಯುಕ್ತ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕಮಗಳೂರಿನಲ್ಲಿ ಸಭೆ ನಡೆಸಿ, 11 ಸಾವಿರ ಎಕರೆ ಭೂಮಿಗೆ ಅರಣ್ಯ ವ್ಯಾಪ್ತಿಯಿಂದ ಮುಕ್ತಿ ಕೊಡಲು ಸಮ್ಮತಿಸಿದ್ದಾರೆ. ದುರಸ್ತಿ ಸಮಸ್ಯೆ ಬಗೆಹರಿಸಿ ಸಾಗುವಳಿ ಚೀಟಿ ಕೊಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಸಭೆಯಲ್ಲಿ ಅರ್ಜಿ ಸಲ್ಲಿಸಿದ ಜನರ ಪರವಾಗಿ ಮಾತನಾಡಿದ ರೈತ ಹೋರಾಟ ಸಮಿತಿಯ ಸೋಮಶೇಖರ್‌, ‘ಕಂದಾಯ ಮತ್ತು ಅರಣ್ಯ ಇಲಾಖೆಗಳಲ್ಲಿ ಇಲ್ಲಿನ ಭೂಮಿ ವಿಷಯವಾಗಿ ಯಾವುದೇ ಸ್ಕೆಚ್‌ ಇಲ್ಲ, ಎ.ಸಿ ನೇತೃತ್ವದಲ್ಲಿ ತಹಶೀಲ್ದಾರರೂ ಸೇರಿ ಹೊಸ ಸ್ಕೆಚ್‌ ತಯಾರಿಸಲು ಹೊರಟಿದ್ದಾರೆ. ಇದು ಅಸಮಂಜಸ, ಅಮೃತಮಹಲ್‌ನವರು 1942ರಿಂದಲೂ ಇಲ್ಲಿ 13 ಸಾವಿರ ಎಕರೆ ಭೂಮಿ ನಮ್ಮದು ಎಂದು ಹೇಳುತ್ತಾರೆ. ದಾಖಲೆಗಳು ‘ಹುಲಿ ಸಂರಕ್ಷಣಾ ಪ್ರದೇಶ ಎಂದು ಭಾವಿಸಲ್ಪಡುತ್ತದೆ’ ಎನ್ನುತ್ತವೆ. ಅರಣ್ಯ ಇಲಾಖೆಯವರು ನಮ್ಮ ಭೂಮಿ ಇದೆ ಎನ್ನುತ್ತಾರೆ. ಆದರೆ, ಕಂದಾಯ ಇಲಾಖೆಯವರು ನಮ್ಮದೂ ಭೂಮಿ ಇಲ್ಲಿದೆ ಎಂದು ಏಕೆ ಹೇಳುವುದಿಲ್ಲ? ಹಿಂದಿನ ದಾಖಲೆಗಳ ಪ್ರಕಾರ ಅರಣ್ಯ ಮತ್ತು ಅಮೃತಮಹಲ್‌ ಒಂದೇ ಇಲಾಖೆಯಾಗಿತ್ತು’ ಎಂದು ಪ್ರತಿಪಾದಿಸಿದರು.

ಇದಕ್ಕೆ ಉತ್ತರಿಸಿದ ಶಾಸಕ ಕೆ.ಎಸ್‌.ಆನಂದ್‌, ‘ಈ ಎರಡೂ ಬೇರೆ ಇಲಾಖೆಗಳಾಗಿವೆ. ಕಂದಾಯ ಇಲಾಖೆಯ 5,600 ಎಕರೆ ಹಾಗೂ ಪಶು ಸಂಗೋಪನಾ ಇಲಾಖೆಯ(ಅಮೃತಮಹಲ್‌) ಹೆಸರಲ್ಲಿ 4,731 ಎಕರೆ ಭೂಮಿ ಇದೆ. ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎರಡು ಭಾಗಗಳಲ್ಲಿ ಜಾಗ ಗುರುತಿಸಲು ತಿಳಿಸಿದ್ದು, ಮೊದಲ ಭಾಗದಲ್ಲಿ ಅರಣ್ಯ ಭೂಮಿ ಗುರುತಿಸಿ ನಂತರ ರೈತರು ಉಳುಮೆ ಮಾಡಿದ ಭೂಮಿ ಗುರುತಿಸಿ ಎಂದಿದ್ದಾರೆ. ಆದರೆ, ರೈತರು ಮೊದಲು ನಮ್ಮ ಜಮೀನುಗಳನ್ನು ಗುರುತಿಸಿ, ಬಳಿಕ ನಿಮ್ಮ ಭೂಮಿ ಗುರುತು ಮಾಡಿಕೊಳ್ಳಿ ಎನ್ನುತ್ತಾರೆ. ರೈತರ ನಿಲುವಿಗೆ ನನ್ನ ಸಹಮತವಿದೆ. ತಹಶೀಲ್ದಾರರು ನನ್ನ ಗಮನಕ್ಕೆ ಬಾರದೆ ಈ ಭಾಗದ ಜನವಸತಿ ಅಥವಾ ಉಳುಮೆ ಭೂಮಿ ವಿಷಯ ಹೊರತು ಪಡಿಸಿ, ಯಾವ ದಾಖಲೆಗಳಿಗೂ ಸಹಿ ಮಾಡಬೇಡಿ. ರೈತರ ನಿಲುವನ್ನು ವಲಯ ಅರಣ್ಯಾಧಿಕಾರಿ ತಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಿ’ ಎಂದು ಸೂಚಿಸಿದರು.

ಎಮ್ಮೆದೊಡ್ಡಿಯ ಮಹಿಳಾ ಸ್ವ-ಸಹಾಯ ಸಂಘದವರು ಅರ್ಜಿಯಲ್ಲಿ, ಇಲ್ಲಿ ಪ್ರಭಾವಿಗಳು ಬಾರ್‌ ಆರಂಭಿಸಿದ್ದು ಗ್ರಾಮಗಳಿಗೆ ತೆರಳುವ ರಸ್ತೆಯನ್ನೂ ಅತಿಕ್ರಮಿಸಿ ಕಾಂಪೌಂಡ್‌ ನಿರ್ಮಿಸಿದ್ದಾರೆ. ಬಾರ್‌ ವಿರುದ್ಧ ಪ್ರತಿಭಟಿಸಿದ್ದಕ್ಕೆ ಮೂರು ವರ್ಷಗಳ ಹಿಂದೆ 56 ಜನರ ಮೇಲೆ ಮಹಿಳೆ, ಬಾಣಂತಿ ಎಂದೂ ಪರಿಗಣಿಸಿದೆ ಕೇಸು ದಾಖಲಿಸಿ ಹಲವರನ್ನು ಜೈಲಿಗೂ ಕಳಿಸಿದ್ದಾರೆ. ರಾತ್ರೋರಾತ್ರಿ ಮನೆಗೆ ನುಗ್ಗಿ ನಕ್ಸಲರ ರೀತಿ ನಮ್ಮನ್ನು ನಡೆಸಿಕೊಂಡಿದ್ದಾರೆ. ಬಾರ್‌ ಲೈಸೆನ್ಸ್‌ ರದ್ದಾಗಲೇ ಬೇಕು ಮತ್ತು ನಮಗೆ ಪ್ರಕರಣದಿಂದ ಮುಕ್ತಿ ಕೊಡಿಸಬೇಕು ಎಂದು ಕೋರಿದ್ದರು.

ಅಬಕಾರಿ ಅಧಿಕಾರಿಯಿಂದ ಉತ್ತರ ಪಡೆದ ಶಾಸಕರು, ಬಾರ್‌ ಲೈಸೆನ್ಸ್‌ ರದ್ದತಿಗೆ ಅಧಿಕಾರಿ ಶಿಫಾರಸು ಮಾಡಿದ್ದಾರೆ. ಪ್ರಕರಣದ ವಿಷಯವಾಗಿ ನ್ಯಾಯಾಲಯ ತೀರ್ಮಾನಿಸಬೇಕಿದ್ದು, ಪೊಲೀಸರಿಗೆ ಕುಳಿತು ಮಾತನಾಡಲು ತಿಳಿಸಲಾಗುವುದು. 22 ಹಳ್ಳಿಗಳಿಗೂ ಬಾರ್‌ ಸಮಸ್ಯೆ ಉಂಟು ಮಾಡುತ್ತಿದೆ ಎನ್ನುವುದಾದರೆ ಇದು ಶಾಶ್ವತವಾಗಿ ಮುಚ್ಚಬೇಕು. ಸಣ್ಣ ನೀರಾವರಿ ಇಲಾಖೆಯವರು ತಹಶೀಲ್ದಾರ್‌ರ ಆದೇಶದ ಮೇರೆಗೆ ರಸ್ತೆ ಅತಿಕ್ರಮಿಸಿ ನಿರ್ಮಿಸಿರುವ ಕಾಂಪೌಂಡ್‌ ತೆರವುಗೊಳಿಸಬೇಕು. ಜನರನ್ನು ಬೆದರಿಸುತ್ತಿರುವ ಪೊಲೀಸ್‌ ಅಧಿಕಾರಿ ವಿರುದ್ಧ ಎಸ್‌ಪಿಗೆ ವರದಿ ಕೊಡಬೇಕು ಎಂದು ಕಡೂರು ವೃತ್ತ ನಿರೀಕ್ಷಕರಿಗೆ ಸೂಚಿಸಿ, ಸಮೀಪದಲ್ಲಿ ಇರುವ ಟಿಸಿಯನ್ನೂ ಸ್ಥಳಾಂತರಿಸಿ’ ಎಂದು ಮೆಸ್ಕಾಂನವರಿಗೆ ನಿರ್ದೇಶಿಸಿದರು.

ಗ್ರಾಮಕ್ಕೆ ಪಶುವೈದ್ಯರು ನಿರಂತರವಾಗಿ ಬರುವ ವ್ಯವಸ್ಥೆ ಮಾಡಬೇಕು. ಜಾನುವಾರುಗಳಿಗೆ ಔಷಧೋಪಚಾರ ಪಶು ಆಸ್ಪತ್ರೆಯಲ್ಲಿ ದೊರೆಯದೆ ವೈದ್ಯರು ಹೊರಗಡೆ ಚೀಟಿ ಬರೆಯುತ್ತಾರೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು, ಹಳ್ಳಿಗಳಲ್ಲಿ ಸೇತುವೆ, ರಸ್ತೆ ನಿರ್ಮಿಸಿಕೊಡಬೇಕು, ಜಮೀನಿಗೆ ತೆರಳಲು ದಾರಿ ಬಿಡಿಸಿಕೊಡಬೇಕು, ಮಕ್ಕಳಿಗೂ ತೊಂದರೆ ಆಗುತ್ತಿದ್ದು ಸಾರಿಗೆ ಬಸ್‌ ಓಡಾಡಲು ವ್ಯವಸ್ಥೆ, ಸೂಕ್ತ ರಸ್ತೆ ನಿರ್ಮಿಸಿಕೊಡಬೇಕು ಎಂದು ಮೊದಲಾದ ಮನವಿಗಳನ್ನು ಗ್ರಾಮಸ್ಥರು ಸಲ್ಲಿಸಿದರು.

ತಹಶೀಲ್ದಾರ್‌ ಸಿ.ಎಸ್‌.ಪೂರ್ಣಿಮಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್‌.ಪ್ರವೀಣ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ವೈ.ಎನ್‌.ಛಾಯಾಪತಿ, ಉಪಾಧ್ಯಕ್ಷೆ ಶೋಭಾ, ಸದಸ್ಯರಾದ ಶಶಿಕುಮಾರ್‌ ನಾಯ್ಕ, ನವೀನ್‌, ರಮೇಶ್‌, ಅಮ್ಮಯ್ಯಬಾಯಿ, ರವಿ, ಗ್ಯಾರಂಟಿ ಸಮಿತಿ ಸದಸ್ಯ ಮೂರ್ತಿ, ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಎಂವಿಎಯ ಸಾಮರ್ಥ್ಯ 20 ಕಿಲೋವ್ಯಾಟ್‌ಗೆ ಹೆಚ್ಚಳ

ಈ ಭಾಗದ ವೋಲ್ಟೇಜ್‌ ಸಮಸ್ಯೆ ಬಗೆಹರಿಸಲು ಬುಕ್ಕಸಾಗರ ಎಂವಿಎಯ ಸಾಮರ್ಥ್ಯವನ್ನು ತಲಾ 20 ಕಿಲೋವ್ಯಾಟ್‌ಗೆ ಹೆಚ್ಚಿಸಿದ್ದು ಬಹುತೇಕ ಸಮಸ್ಯೆ ಬಗೆಹರಿಯಲಿದೆ. ಜನರಿಗೆ ಕಿರುಕುಳ ಕೊಡುವವರು ದೇವರ ಮತ್ತು ಜನರ ಶಾಪದ ಮುಂದೆ ಯಾರೂ ನಿಲ್ಲಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಕೆ.ಎಸ್‌.ಆನಂದ್‌ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.