ADVERTISEMENT

ನರಸಿಂಹರಾಜಪುರ: ಶಾಂತಿಯುತ ಹಬ್ಬ ಆಚರಣೆಗೆ ಸಹಕರಿಸಿ; ತಹಶೀಲ್ದಾರ್

ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:49 IST
Last Updated 14 ಆಗಸ್ಟ್ 2025, 5:49 IST
ಗಣೇಶೋತ್ಸವ ಹಾಗೂ ಈದ್ ಮಿಲಾದ್ ಅಂಗವಾಗಿ ನರಸಿಂಹರಾಜಪುರ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ತಹಶೀಲ್ದಾರ್ ನೂರುಲ್ ಹುದಾ ಮಾತನಾಡಿದರು. ನವೀನ್ ಕುಮಾರ್, ಗುರುದತ್ ಕಾಮತ್, ಆರ್.ವಿ,ಮಂಜುನಾಥ್ ಭಾಗವಹಿಸಿದ್ದರು
ಗಣೇಶೋತ್ಸವ ಹಾಗೂ ಈದ್ ಮಿಲಾದ್ ಅಂಗವಾಗಿ ನರಸಿಂಹರಾಜಪುರ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ತಹಶೀಲ್ದಾರ್ ನೂರುಲ್ ಹುದಾ ಮಾತನಾಡಿದರು. ನವೀನ್ ಕುಮಾರ್, ಗುರುದತ್ ಕಾಮತ್, ಆರ್.ವಿ,ಮಂಜುನಾಥ್ ಭಾಗವಹಿಸಿದ್ದರು   

ಪ್ರಜಾವಾಣಿ ವಾರ್ತೆ

ನರಸಿಂಹರಾಜಪುರ: ಸುರಕ್ಷಿತವಾಗಿ ಹಾಗೂ ಶಾಂತಿಯುತವಾಗಿ ಗಣೇಶೋತ್ಸವ ಆಚರಣೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ನೂರುಲ್ ಹುದಾ ಮನವಿ ಮಾಡಿದರು.

ಗಣೇಶೋತ್ಸವ ಹಾಗೂ ಈದ್ ಮಿಲಾದ್ ಆಚರಣೆಗೆ ಸಂಬಂಧಿಸಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಆಗದಂತೆ ರಸ್ತೆ, ಸಾರ್ವಜನಿಕ ಸ್ಥಳ ಹಾಗೂ ವಿದ್ಯುತ್ ಮಾರ್ಗದ ಕೆಳಗೆ, ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಗಣಪತಿ ಪೆಂಡಾಲ್ ನಿರ್ಮಿಸಬಾರದು. ಜತೆಗೆ, ಅನುಮತಿಯನ್ನೂ ಕೇಳಬಾರದು. ಈ ಹಿಂದೆ ಯಾವ ಸ್ಥಳದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತೋ ಆ ಸ್ಥಳದಲ್ಲಿಯೇ ಪ್ರತಿಷ್ಠಾಪಿಸಬೇಕು ಎಂದರು.

ಪೆಂಡಾಲ್ ನಿರ್ಮಾಣಕ್ಕೂ ಮೊದಲು ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ, ಅಗ್ನಿಶಾಮಕ ಇಲಾಖೆ, ಲೋಕೋಪಯೋಗಿ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಮೆಸ್ಕಾಂ, ಆರ್‌ಟಿಒದಿಂದ ಅನುಮತಿ ಪಡೆಯಬೇಕು. ಶಾಲೆ, ಕಾಲೇಜು ಸಮೀಪ ಪೆಂಡಾಲ್ ನಿರ್ಮಿಸಬಾರದು. ಗಣಪತಿ ಮೆರವಣಿಗೆ ಸಾಗುವ ಮಾರ್ಗವನ್ನು ಸ್ಪಷ್ಟವಾಗಿ ನಮೂದಿಸಬೇಕು. ಗಣಪತಿ ವಿಸರ್ಜನೆ ಮಾಡುವ ಸ್ಥಳದಲ್ಲಿ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು. ಸುರಕ್ಷತೆಯ ಉದ್ದೇಶದಿಂದ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಪೊಲೀಸ್ ಇನ್‌ಸ್ಪೆಕ್ಟರ್ ಗುರುದತ್ ಕಾಮತ್ ಮಾತನಾಡಿ, ಜನರಿಗೆ ಮತ್ತು ಗಣಪತಿಗೆ ಭದ್ರತೆ, ಸುರಕ್ಷತೆ ಒದಗಿಸುವುದು ಇಲಾಖೆಯ ಜವಾಬ್ದಾರಿ. ಮೆರವಣಿಗೆ ಸುಗಮವಾಗಿ ಸಾಗುವಂತೆ ಸಮಿತಿಯವರೂ ಜವಾಬ್ದಾರಿ ವಹಿಸಬೇಕು. ಗಣಪತಿ ಪ್ರತಿಷ್ಠಾಪಿಸಿರುವ ಸ್ಥಳದಲ್ಲಿ ಭದ್ರತೆ ನೀಡುವ ಜವಾಬ್ದಾರಿಯನ್ನು ಸಮಿತಿಯವರು ತೆಗೆದುಕೊಳ್ಳಬೇಕು ಎಂದರು.

‘ವಿಸರ್ಜನಾ ಮೆರವಣಿಗೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ನಿಗಾ ವಹಿಸಬೇಕು. ರಾತ್ರಿ 10ರಿಂದ ಬೆಳಿಗ್ಗೆ6ರವರೆಗೆ ಧ್ವನಿವರ್ಧಕ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಎಲ್ಲರೂ ಸಹಕಾರ ನೀಡಿದರೆ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಬಹುದು’ ಎಂದು ಹೇಳಿದರು.

ಮೆಸ್ಕಾಂ ಅಧಿಕಾರಿ ಪ್ರಶಾಂತ್ ಮಾತನಾಡಿ, ವಿದ್ಯುತ್ ಮಾರ್ಗಗಳು ಹಾದು ಹೋಗುವ ಕೆಳಭಾಗದಲ್ಲಿ ಪೆಂಡಾಲ್ ನಿರ್ಮಿಸಬಾರದು. ವಿದ್ಯುತ್ ಮಾರ್ಗಗಳು ಹಾದು ಹೋದ ಸ್ಥಳದಲ್ಲಿ ಎತ್ತರದ ಬಾವುಟ ಹಾಕುವಾಗ ಎಚ್ಚರಿಕೆ ವಹಿಸಬೇಕು ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಅಪರಾಧ ವಿಭಾಗದ ಪಿಎಸ್‌ಐ ಜ್ಯೋತಿ, ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯ ನಿರ್ದೇಶಕ ಎನ್.ಎಲ್.ಮನಿಷ್, ವಿವಿಧ ಗಣಪತಿ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.

ಬ್ಯಾನರ್ ಬಂಟಿಂಗ್ಸ್‌: ಅನುಮತಿ ಕಡ್ಡಾಯ

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ನವೀನ್ ಕುಮಾರ್ ಮಾತನಾಡಿ ಪರಿಸರಕ್ಕೆ ಹಾನಿಯಾಗದಂಥ ವಸ್ತುಗಳಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಕಡ್ಡಾಯವಾಗಿ ಪತ್ರಿಷ್ಠಾಪನೆ ಮಾಡಬೇಕು. ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಬ್ಯಾನರ್ ಬಂಟಿಂಗ್ಸ್ ಕಟ್ಟುವಾಗ ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯ ಎಂದರು. ಗಣಪತಿ ಪ್ರತಿಷ್ಠಾಪನೆಗೆ ಎಲ್ಲ ಇಲಾಖೆಯ ಅನುಮತಿ ಸೇವೆ ಒಂದೇ ಸ್ಥಳದಲ್ಲಿ ಲಭ್ಯವಾಗುವಂತೆ ಮಾಡಲು ಈಗಾಗಲೇ ತಾಲ್ಲೂಕು ಪಂಚಾಯಿತಿಯಲ್ಲಿ ಏಕಗವಾಕ್ಷಿ ಸೌಲಭ್ಯ ಆರಂಭಿಸಲಾಗಿದೆ. ಆಗಸ್ಟ್ 25ರವರೆಗೂ ಅನುಮತಿ ನೀಡಲಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.