ADVERTISEMENT

ಗಾಂಜಾ ಸೇವನೆ; ವಾರದಲ್ಲಿ 8 ಪ್ರಕರಣ ದಾಖಲು

ಮಾರಾಟ– ಒಬ್ಬ ಆರೋಪಿ ಬಂಧನ, ಮಾಲು ವಶ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 6:14 IST
Last Updated 27 ಡಿಸೆಂಬರ್ 2022, 6:14 IST
ಚಿಕ್ಕಮಗಳೂರಿನ ಸಿಇಎನ್‌ ಠಾಣೆ
ಚಿಕ್ಕಮಗಳೂರಿನ ಸಿಇಎನ್‌ ಠಾಣೆ   

ಚಿಕ್ಕಮಗಳೂರು: ನಗರದ ವಿವಿಧೆಡೆ ಕಳೆದ ಒಂದು ವಾರದಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಸಿಇಎನ್‌ ಠಾಣೆ ಪೊಲೀಸರು ಎಂಟು ಮಂದಿ ವಶಕ್ಕೆ ಪಡೆದು, ಪ್ರಕರಣ ದಾಖಲಿಸಲಾಗಿದೆ. ಗಾಂಜಾ ಮಾರಾಟ ಪ್ರಕರಣದಲ್ಲಿ ಒಬ್ಬರನ್ನು ಬಂಧಿಸಿದ್ದಾರೆ.
ಸೈಬರ್‌, ಅರ್ಥಿಕ ಮತ್ತು ಮಾದಕ (ಸಿಇಎನ್‌) ಠಾಣೆ ಪೊಲೀಸರು ಉಪ್ಪಳ್ಳಿ ವೃತ್ತ, ಶಂಕರಪುರ, ಸಂತೆ ಮೈದಾನ, ಶಂಕರಪುರ, ಟಿಪ್ಪುನಗರ, ಗೌರಿ ಕಾಲುವೆ ಮೊದಲಾದ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಗಾಂಜಾ ಸೇವನೆ ಪ್ರಕರಣಗಳು ಹೆಚ್ಚು ಪತ್ತೆಯಾಗಿವೆ.
ಗಾಂಜಾ ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವವರು 30 ವರ್ಷದೊಳಗಿನವರು. ಮರಗೆಲಸ, ಪೇಂಟಿಂಗ್‌ ಮೊದಲಾದ ಕೆಲಸ ಮಾಡುವವರು ಇದ್ದಾರೆ.
ಬಾಳೆ ಹಳ್ಳಿ ಸಂಪರ್ಕ ರಸ್ತೆಯಲ್ಲಿ ಇದೇ 24ರಂದು ಗಾಂಜಾ ಮಾರಾಟದಲ್ಲಿ ವೇಣುಗೋಪಾಲ ಎಂಬಾತನನ್ನು ವಶಕ್ಕೆ ಪಡೆದು, 350 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಬಳ್ಳಾರಿ, ಬೆಂಗಳೂರು, ಮೈಸೂರು ಭಾಗದಿಂದ ತಂದು ಗಾಂಜಾ ಮಾರುತ್ತಾರೆ. ಮಾಮೂಲಿ ಗಾಂಜಾ ಐದು ಗ್ರಾಂಗೆ ₹ 2,000 ಹಾಗೂ ಎಂಡಿಎಂ ಪುಡಿಯನ್ನು 1 ಗ್ರಾಂಗೆ ₹ 2,000ವರೆಗೆ ಮಾರುತ್ತಾರೆ. ಅದಕ್ಕಾಗಿಯೇ ವ್ಯವಸ್ಥಿತ ಜಾಲಗಳು ಇವೆ ಎಂದು ಮೂಲಗಳು ತಿಳಿಸಿವೆ.
ಗಾಂಜಾ ಸೇವನೆ ಪ್ರಕರಣದಲ್ಲಿ ಸಾಮಾನ್ಯವಾಗಿ ₹ 5 ಸಾವಿರದಿಂದ ₹ 10 ಸಾವಿರ ವರೆಗೆ ದಂಡ ವಿಧಿಸುತ್ತಾರೆ. ಗಾಂಜಾ ಸೇವಿಸಿ ಒಮ್ಮೆ ಸಿಕ್ಕಿಬಿದ್ದು ದಂಡ ತೆತ್ತ ನಂತರ ಹಲವರು ಗಾಂಜಾ ಗೀಳು ಬಿಟ್ಟಿದ್ದಾರೆ ಎಂದು ಪೊಲೀಸರೊಬ್ಬರು ತಿಳಿಸಿದರು.
ವಾರಾಂತ್ಯದಲ್ಲಿ ಬೆಂಗಳೂರಿನಿಂದ ಬಂದು ಗಿರಿ ಶ್ರೇಣಿ ಭಾಗದಲ್ಲಿ ವಾಸ್ತವ್ಯ ಹೂಡುತ್ತಾರೆ. ಹಲವರು ಬೆಂಗಳೂರಿನಿಂದಲೇ ಗಾಂಜಾ ತಂದಿರುತ್ತಾರೆ. ವಾಸ್ತವ್ಯ ಹೂಡಿದ್ದ ಸ್ಥಳಗಳಲ್ಲಿ ಸೇವನೆ ಮಾಡುತ್ತಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.