ADVERTISEMENT

ಎಫ್‌ಎಸ್ಒ ವಿರುದ್ಧ ಗೋಬ್ಯಾಕ್ ಚಳವಳಿ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 13:01 IST
Last Updated 26 ಜೂನ್ 2025, 13:01 IST
ಎಸ್.ವಿಜಯಕುಮಾರ್
ಎಸ್.ವಿಜಯಕುಮಾರ್   

ಚಿಕ್ಕಮಗಳೂರು: ಅರಣ್ಯ ಮತ್ತು ಸಾಗುವಳಿ ಭೂಮಿ ವಿವಾದ ಇತ್ಯರ್ಥಕ್ಕೆ ನೇಮಕವಾಗಿರುವ ಅರಣ್ಯ ವ್ಯವಸ್ಥಾಪನಾ ಅಧಿಕಾರಿ (ಎಫ್‌ಎಸ್‌ಒ) ಏಕಮುಖವಾಗಿ ನಿರ್ಧಾರ ಕೈಗೊಳ್ಳುತ್ತಿದ್ದು, ಇದೇ ರೀತಿ ಮುಂದುವರಿದರೆ ಎಫ್‌ಎಸ್ಒ ಗೋಬ್ಯಾಕ್ ಚಳವಳಿ ನಡೆಸಲಾಗುವುದು ಎಂದು ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯಕುಮಾರ್ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಅರಣ್ಯ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಇತ್ತೀಚೆಗೆ ಸಭೆ ನಡೆದಿದ್ದು, ಈ ಸಭೆಯಲ್ಲಿ ಆಗಿರುವ ನಿರ್ಣಯಗಳನ್ನು ಈ ಅಧಿಕಾರಿ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪರಿಭಾವಿತ ಅರಣ್ಯ (ಡೀಮ್ಡ್) ಹಾಗೂ ಸೆಕ್ಷನ್ 4 ಅಧಿಸೂಚನೆ ಹೊರಡಿರುವ ಜಾಗ ಸಾಗುವಳಿ ಇಲ್ಲದೆ ಖಾಲಿ ಇದ್ದರೆ ‘ಎ’ ಎಂದು ವಿಭಾಗಿಸಿ ಅರಣ್ಯ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಅಧಿಸೂಚನೆ ಹೊರಡಿಸಬಹುದು. ಸಾಗುವಳಿ ಮಾಡಿದ್ದರೆ ಅಥವಾ ಮನೆ ನಿರ್ಮಿಸಿಕೊಂಡಿದ್ದರೆ ‘ಬಿ’ ಎಂದು ವಿಭಾಗಿಸಬೇಕು. ಈ ಜಾಗಕ್ಕೆ ಬದಲಿಯಾಗಿ ಕಂದಾಯ ಜಾಗವನ್ನು ಅರಣ್ಯ  ಇಲಾಖೆಗೆ ನೀಡಿ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಸಭೆಯಲ್ಲಿ ತೀರ್ಮಾನವಾಗಿದೆ. ಇದೇ ವಿಷಯವನ್ನು ರೈತರ ಸಮಾವೇಶದಲ್ಲೂ ಜಿಲ್ಲೆಯ ಜನಪ್ರತಿನಿಧಿಗಳು ತಿಳಿಸಿದ್ದಾರೆ. ಆದರೂ ಎಫ್‌ಎಸ್‌ಒ ರೈತರನ್ನು ಹೆದರಿಸುತ್ತಿದ್ದಾರೆ ಎಂದರು.

ADVERTISEMENT

ಎಫ್‌ಎಸ್‌ಒ ಅವರು ಈ ತೀರ್ಮಾನವನ್ನು ಧಿಕ್ಕರಿಸಿ ರೈತರ ಜಮೀನಿಗೆ ಭೇಟಿ ನೀಡದೆ ನಕ್ಷೆ ತಯಾರಿಸದೆ ಕಚೇರಿಯಲ್ಲೇ ಕುಳಿತು ಏಕಮುಖ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅವರ ಅವಧಿ ಇನ್ನು ಒಂದೂವರೆ ತಿಂಗಳು ಮಾತ್ರ ಇದ್ದು, ಆದ್ದರಿಂದ ತರಾತುರಿಯಲ್ಲಿ ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಅವರ ವಿರುದ್ಧ ಚಳವಳಿ ನಡೆಸಲಾಗುವುದು ಎಂದು ಹೇಳಿದರು.

ಸುಪ್ರೀಂಕೋರ್ಟ್‌ ಸೂಚನೆಯಂತೆ ಪರಿಭಾವಿತ ಅರಣ್ಯ ಪರಿಷ್ಕರಣೆ ಮಾಡಲು ರಚಿಸಲಾಗಿರುವ ತಂಡಗಳು ಸ್ಥಳೀಯ ಸರ್ವೆ ನಂಬರ್‌ಗಳ ಜಾಗಕ್ಕೆ ಭೇಟಿ ನೀಡಿ ರೈತರ ಜಮೀನು, ಶಾಲಾ ಕಾಲೇಜು, ಆಟದ ಮೈದಾನ, ಸ್ಮಶಾನ, ಸಾರ್ವಜನಿಕ ಉಪಯುಕ್ತ ಪ್ರದೇಶಗಳನ್ನು ಕೈಬಿಟ್ಟು ಹೊಸ ಪಟ್ಟಿ ತಯಾರಿಸಬೇಕು ಎಂದು ಮನವಿ ಮಾಡಿದರು.

ನಮೂನೆ 50, 53ರಲ್ಲಿ ಮಂಜೂರಾಗಿದ್ದ ಭೂಮಿಯನ್ನು ಅಕ್ರಮ ಎಂದು ಪರಿಗಣಿಸಿ ರದ್ದುಪಡಿಸಿದ್ದು, ಕೂಡಲೇ ಇದನ್ನು ಪುನರ್‌ ಪರಿಶೀಲನೆ ನಡೆಸಬೇಕು. ನಿಯಮಾವಳಿಗೆ ತಿದ್ದುಪಡಿ ಮಾಡಿ ನಮೂನೆ 57ರಲ್ಲಿ ಪ್ಲಾಂಟೇಶನ್ ಬೆಳೆಗಳಿಗೂ ಹಕ್ಕುಪತ್ರ ನೀಡುವಂತೆ ಕಂದಾಯ ಸಚಿವರಿಗೆ ಮನವರಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಕೆ.ಕೆ.ರಘು, ವಾಸು ಪೂಜಾರಿ, ಈಶ್ವರ್, ರವಿಕುಮಾರ್, ಪೂರ್ಣೇಶ್, ಚಂದ್ರೇಗೌಡ, ಕುಮಾರಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.