ಕಳಸ: ಹೆಬ್ಬೊಳೆ ಸೇತುವೆ ಕಾಮಗಾರಿ ಕಾರಣಕ್ಕೆ ಈ ರಸ್ತೆಯಲ್ಲಿ ಸಂಚಾರ ನಿಲ್ಲಿಸಿ ಎರಡು ತಿಂಗಳುಗಳು ಕಳೆದಿವೆ. ಹೀಗಾಗಿ, ಹಳುವಳ್ಳಿ- ಹೊರನಾಡು ಪರ್ಯಾಯ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಆದರೆ, ಈ ರಸ್ತೆಯ ಇಕ್ಕಟ್ಟಾದ ತಿರುವುಗಳು ವಾಹನ ಸಂಚಾರಕ್ಕೆ ತೊಡಕಾಗಿವೆ.
ಏ.25ರವರೆಗೆ ಹೆಬ್ಬೊಳೆ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಈ ಸೇತುವೆಯ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು ಮುಂದಿನ ವಾರ ಮುಗಿಯುವುದು ಅನುಮಾನ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಮಕ್ಕಳ ಬೇಸಿಗೆ ರಜೆ ಪ್ರಾರಂಭವಾಗಿರುವ ಕಾರಣಕ್ಕೆ ಹೊರನಾಡಿನ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ. ಪ್ರತಿದಿನವೂ ನೂರಾರು ಪ್ರವಾಸಿ ವಾಹನಗಳು ಕಳಸ, ಹಳುವಳ್ಳಿ ಮೂಲಕ ಹೊರನಾಡಿಗೆ ಸಾಗಿ ಅಲ್ಲಿಂದ ಶೃಂಗೇರಿಗೆ ಹೋಗುತ್ತಿವೆ.
ಆದರೆ, ಹಳುವಳ್ಳಿ-ದಾರಿಮನೆ ನಡುವಿನ 8 ಕಿ.ಮೀ ರಸ್ತೆ ಅತ್ಯಂತ ಇಕ್ಕಟ್ಟಾಗಿದೆ. ಈ ರಸ್ತೆಯಲ್ಲಿ ಅನೇಕ ತಿರುವುಗಳು ಇದ್ದು ಅಪಾಯಕಾರಿಯಾಗಿವೆ. ಎರಡು ತಿಂಗಳುಗಳಲ್ಲಿ ಅನೇಕ ಸಣ್ಣ ಅಪಘಾತಗಳು ಸಂಭವಿಸಿದ್ದು ರಸ್ತೆ ಮಧ್ಯೆ ಪ್ರವಾಸಿಗರ ಘರ್ಷಣೆ ಮಾಮೂಲಿ ದೃಶ್ಯವಾಗಿದೆ.
ಇದರ ಜೊತೆಗೆ, ಈ ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಪ್ರಪಾತಗಳು ಇವೆ. ಕೆಲವು ಕಡೆ ಚರಂಡಿಗಳು ಕೂಡ ರಸ್ತೆಗೆ ತೆರೆದುಕೊಂಡಿವೆ. ಒಂದೇ ವಾಹನ ಸಾಗಬಹುದಾದ ಈ ರಸ್ತೆಯಲ್ಲಿ ಎದುರಿನಿಂದ ಹತ್ತಾರು ವಾಹನಗಳು ಬಂದಾಗ ಸಾಗಲು ಸ್ಥಳ ಇಲ್ಲದೆ ಸಂಚಾರಕ್ಕೆ ಅಡಚಣೆ ಆಗುತ್ತಿದೆ.
ಹೊರನಾಡಿನಿಂದ ಹಳುವಳ್ಳಿ ಮೂಲಕ ಬಾಳೆಹೊನ್ನೂರು, ಬಸರೀಕಟ್ಟೆ, ಕೊಪ್ಪದ ಕಡೆಗೆ ತಲುಪಲು ಈ ರಸ್ತೆ ಸಂಚಾರ ಸನಿಹ. ಆದರೆ ಬಹಳ ಕಾಲ ನಿರ್ವಹಣೆ ಮತ್ತು ವಿಸ್ತರಣೆ ಮಾಡದೆ ಇರುವುದರಿಂದ ರಸ್ತೆ ಮೂಲ ಸ್ವರೂಪ ಕಳೆದುಕೊಂಡಿದೆ.
ಈ ರಸ್ತೆಯನ್ನು ವಿಸ್ತರಿಸಿ, ತಿರುವುಗಳನ್ನು ಕಡಿಮೆ ಮಾಡಿದರೆ ಅನುಕೂಲ ಆಗುತ್ತದೆ. ಈ ರಸ್ತೆಯಲ್ಲಿ ವರ್ಷವಿಡೀ ಬಸ್ ಸಂಚಾರ ನಡೆದರೆ ಇಲ್ಲಿ ಕೃಷಿಕರಿಗೆ, ಶಾಲಾ ಮಕ್ಕಳಿಗೂ ಅನುಕೂಲ ಆಗುತ್ತದೆ. ಆದರೆ ಈ ಬಗ್ಗೆ ಸಂಬಂಧಪಟ್ಟವರಿಗೆ ಆಸಕ್ತಿಯೇ ಇಲ್ಲ ಎಂದು ಗ್ರಾಮಸ್ಥ ಅನಿಲ್ ಮುಜೇಕಾನು ಬೇಸರಿಸಿದರು.
ಕಿರಿದಾದ ರಸ್ತೆಯಲ್ಲಿ ಸಂಚಾರವೇ ಸವಾಲು ರಸ್ತೆ ಮಧ್ಯೆ ಪ್ರವಾಸಿಗರ ಘರ್ಷಣೆ ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಪ್ರಪಾತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.