ಮೂಡಿಗೆರೆ ಪಟ್ಟಣದ ಗಂಗನಮಕ್ಕಿಯಲ್ಲಿ ಮಳೆಯಿಂದ ಭಾನುವಾರ ಕಟ್ಟಡ ಕುಸಿದು ಕಾರು ಜಖಂ ಗೊಂಡಿರುವುದು
ಮೂಡಿಗೆರೆ: ತಾಲ್ಲೂಕಿನಾದ್ಯಂತ ಭಾನುವಾರ ಮಳೆ ಚುರುಕಾಗಿದ್ದು, ಇಡೀ ದಿನ ಬಿಡುವಿಲ್ಲದೇ ಸುರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.
ಮಳೆಯಿಂದ ತಾಲ್ಲೂಕಿನ ಗಂಗನಮಕ್ಕಿ ಗ್ರಾಮದಲ್ಲಿ ಹಳೆಯ ಕಟ್ಟಡವೊಂದು ಕುಸಿದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮಂಜುನಾಥ್ ಹಾಗೂ ಗಿರೀಶ್ ಎಂಬುವರ ಒಡೆತನದಲ್ಲಿದ್ದ ಕಟ್ಟಡವು ಮಧ್ಯಾಹ್ನ 3 ರ ಸುಮಾರಿಗೆ ಏಕಾಏಕಿ ಕುಸಿದು ಬಿಟ್ಟಿದ್ದು, ಕಟ್ಟದಲ್ಲಿದ್ದ ಅಕ್ಮಲ್ ಖಾನ್ ಎಂಬುವರಿಗೆ ಸೇರಿದ ಎಲೆಕ್ಟ್ರಿಕಲ್ ಅಂಗಡಿಯು ಸಂಪೂರ್ಣವಾಗಿ ಹಾನಿಯಾಗಿದೆ. ಕಟ್ಟಡದ ಬಳಿ ನಿಲ್ಲಿಸಿದ್ದ ಕಾರು, ಎರಡು ಬೈಕ್ ಗಳು ಕೂಡ ಜಖಂ ಗೊಂಡಿದ್ದು ನಷ್ಟ ಉಂಟಾಗಿದೆ. ಕಟ್ಟಡದಲ್ಲಿ ಸುಮಾರು 10 ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಘಟನೆ ಸಂಭವಿಸುವ ವೇಳೆ ಊಟಕ್ಕಾಗಿ ಹೊರ ಹೋಗಿದ್ದರಿಂದ ಜೀವ ಹಾನಿ ತಪ್ಪಿದಂತಾಗಿದೆ.
ಮಳೆಯಿಂದ ಗೆಂಡೆಹಳ್ಳಿ ಬೇಲೂರು ರಸ್ತೆಯಲ್ಲಿ ಮರಬಿದ್ದು ಸಂಚಾರಕ್ಕೆ ಅಡ್ಡಿಯಾಗಿದ್ದು, ಸ್ಥಳೀಯರು ಮರವನ್ನು ತೆರವುಗೊಳಿಸಿದ ಬಳಿಕ ಸಂಚಾರ ಸುಗಮವಾಗಿತ್ತು. ಮಳೆಯ ನಡುವೆಯೇ ತಾಲ್ಲೂಕಿಗೆ ಭಾನುವಾರ ಪ್ರವಾಸಿಗರ ದಂಡು ಹರಿದು ಬಂದಿದ್ದು, ಭೈರಾಪುರ, ದೇವರಮನೆ, ರಾಣಿಝರಿ ಪ್ರದೇಶಗಳಲ್ಲಿ ಪ್ರವಾಸಿಗರಿಂದ ವಾಹನ ದಟ್ಟಣೆ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.