ಬಾಳೆಹೊನ್ನೂರು ಸಮೀಪದ ಕೊಗ್ರೆ– ಮೆಣಸಿನಹಾಡ್ಯ ನಡುವಿನ ನಿಡಂಗಿ ಬಳಿ ರಸ್ತೆ ಮೇಲೆ ಧರೆ ಕುಸಿದು ಸಂಪರ್ಕ ಕಡಿತಗೊಂಡು ಮೂರು ದಿನಗಳು ಕಳೆದಿದ್ದು, ತೆರವುಗೊಳಿಸದಿರುವುದು
–ಪ್ರಜಾವಾಣಿ ಚಿತ್ರ/ಎ.ಎನ್.ಮೂರ್ತಿ
ಚಿಕ್ಕಮಗಳೂರು: ಧಾರಾಕಾರವಾಗಿ ಸುರಿದ ಮಳೆಗೆ ಇಡೀ ಮಲೆನಾಡು ತೊಯ್ದು ತೊಪ್ಪೆಯಾಗಿದ್ದು, ಮತ್ತೊಮ್ಮೆ ಭಾರಿ ಮಳೆ ಸುರಿದರೆ ಗುಡ್ಡಗಳು ಕುಸಿಯುವ ಆತಂಕ ಜನರನ್ನು ಕಾಡುತ್ತಿದೆ.
ಬಾಳೆಹೊನ್ನೂರು, ಜಯಪುರ, ಬಸರೀಕಟ್ಟೆ, ಕೊಪ್ಪ, ಶೃಂಗೇರಿ, ಕಳಸ, ಮೂಡಿಗೆರೆ, ಕೊಟ್ಟಿಗೆಹಾರ ಸೇರಿ ಯಾವ ಪ್ರದೇಶಕ್ಕೆ ಹೋದರೂ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಅಲ್ಲಲ್ಲಿ ಗುಡ್ಡದ ಮಣ್ಣು ರಸ್ತೆಗೆ ಜರಿದಿದೆ. ಮರಗಳು ಬಿದ್ದಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಗಿರಿ– ಶಿಖರಗಳು ಮಂಜಿನ ನಡುವೆ ಮಳೆಯಲ್ಲಿ ಮಿಂದಿವೆ. ತೋಟಗಳು, ಗದ್ದೆಗಳಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿದೆ. ಬಿದ್ದಿರುವ ಮರಗಳನ್ನು ತೆರೆವುಗೊಳಿಸಲು ಬಿಡುವಿಲ್ಲದಷ್ಟು ಮಳೆ ಮಲೆನಾಡನ್ನು ಕಾಡುತ್ತಿದೆ.
ಜಯಪುರ, ಕೊಗ್ರೆ, ಗುಡ್ಡೇತೋಟ, ಬಿಳಾಲುಕೊಪ್ಪ, ಅತ್ತಿಕೂಡಿಗೆ, ಬಸರೀಕಟ್ಟೆ ಭಾಗದಲ್ಲಿ ಎತ್ತ ಸಾಗಿದರೂ ತೋಟಗಳಿಂದ ಅಲ್ಲಲ್ಲಿ ಜಲಪಾತಗಳ ಮಾದರಿಯಲ್ಲಿ ರಸ್ತೆಗಳಿಗೆ ನೀರು ಧುಮ್ಮಿಕ್ಕುತ್ತಿದೆ. ಕಾಫಿ ಮತ್ತು ಅಡಿಕೆ ತೋಟಗಳು ನೀರಿನಲ್ಲಿ ಮಿಂದಿವೆ. ತೋಟದ ಮಣ್ಣನ್ನು ಮಳೆ ರಸ್ತೆಗೆ ತಂದು ಬಿಟ್ಟಿದೆ.
‘ಬೆಟ್ಟದ ಸಮೀಪ ಇರುವ ಮನೆಗಳಲ್ಲಿ ಜನ ಆತಂಕದಲ್ಲೇ ದಿನ ದೂಡುತ್ತಿದ್ದಾರೆ. ಕೇರಳದಲ್ಲಿ ಸಂಭವಿಸಿರುವ ಭೂಕುಸಿತ ಇಲ್ಲಿನ ಜನರಲ್ಲೂ ಆತಂಕ ತರಿಸಿದೆ. ಸೋಮವಾರ ರಾತ್ರಿ ಒಂದೇ ದಿನ 25 ಸೆಂಟಿ ಮೀಟರ್ ತನಕ ಮಳೆಯಾಗಿದೆ. ಜಿಲ್ಲೆಯಲ್ಲಿ ಜೂನ್ 1ರಿಂದ ಈವರೆಗೆ 104 ಸೆಂಟಿ ಮೀಟರ್ ಮಳೆಯಾಗಬೇಕಿತ್ತು. 142 ಸೆಂಟಿ ಮೀಟರ್ ಮಳೆಯಾಗಿದೆ. ಈಗಾಗಲೇ ಗುಡ್ಡಗಳು ತೊಯ್ದು ಮುದ್ದೆಯಾಗಿವೆ. ಇಷ್ಟು ಮಳೆ ಮತ್ತೊಮ್ಮೆಯಾದರೆ ನಮ್ಮ ಗುಡ್ಡಗಳೂ ತಡೆಯುವುದಿಲ್ಲ’ ಎಂದು ಬಿಳಾಲುಕೊಪ್ಪದ ಪ್ರಕಾಶ್ ಹೇಳಿದರು.
‘ರಾತ್ರಿ ಮಳೆ ಜೋರಾದರೆ ನಿದ್ರೆಯೇ ಬರುತ್ತಿಲ್ಲ. ಬೆಳಿಗ್ಗೆ ಎದ್ದಾಗಲೇ ಜೀವ ಉಳಿದಿದೆ ಎಂಬುದು ಖಾತ್ರಿ. ಮಳೆಗಾಲ ಮುಗಿಯುವ ತನಕ ನಮ್ಮ ಸ್ಥಿತಿ ಇದೆ’ ಎಂದು ಆತಂಕಗೊಂಡರು.
ವಿದ್ಯುತ್ ಸಂಪರ್ಕ ಕಡಿತಗೊಂಡು 20 ದಿನಗಳೇ ಕಳೆದಿವೆ. ಪ್ರತಿನಿತ್ಯ ಮಳೆಯ ನಡುವೆಯೂ ಮೆಸ್ಕಾಂ ಸಿಬ್ಬಂದಿ ಕಂಬಗಳನ್ನು ಮೇಲೆತ್ತಿ ದುರಸ್ತಿ ಮುಂದುವರಿಸಿದ್ದಾರೆ. ಆದರೆ, ಮತ್ತೆ ಬೀಳುವ ಮರಗಳಿಂದ ವಿದ್ಯುತ್ ಕಂಬಗಳೂ ನೆಲ ಕಾಣುತ್ತಿವೆ. ಮೆಸ್ಕಾಂ ಸಿಬ್ಬಂದಿ ಮಳೆಗಾಲದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದು, ಅವರನ್ನು ಮಲೆನಾಡಿನ ಜನ ಮರೆಯುವಂತಿಲ್ಲ ಎಂದು ಜನ ಹೇಳುತ್ತಾರೆ.
ರಸ್ತೆಗೆ ಕುಸಿದಿರುವ ಮಣ್ಣು ತೆಗೆದು ಹಾಕಲು ಲೋಕೋಪಯೋಗಿ ಇಲಾಖೆಗೆ ಬಿಡುವಿಲ್ಲದಾಗಿದೆ. ಸದ್ಯಕ್ಕೆ ದೊಡ್ಡ ಮಟ್ಟದಲ್ಲಿ ಅಪಾಯ ಆಗದಿರುವುದು ನೆಮ್ಮದಿ ತರಿಸಿದೆ. ಆದರೆ, ಕುಸಿಯುವ ಸಾಧ್ಯತೆ ಇರುವ 77 ಪ್ರದೇಶಗಳನ್ನು ಜಿಲ್ಲಾಡಳಿತ ಗುರುತು ಮಾಡಿದೆ. ಗುಡ್ಡ ಕುಸಿತಕ್ಕಿಂತ ನೀರು ಹರಿದು ರಸ್ತೆ ಕುಸಿತವೇ ಹೆಚ್ಚಾಗಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ವಯನಾಡ್ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಬಳಿಕ ಹೆಚ್ಚು ನಿಗಾ ಇಡಲಾಗಿದೆ. ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿ ಜನರನ್ನು ಸುರಕ್ಷಿತ ಜಾಗಕ್ಕೆ ಕಳುಹಿಸಲಾಗುತ್ತಿದೆ.–ಮೀನಾ ನಾಗರಾಜ್ ಜಿಲ್ಲಾಧಿಕಾರಿ
ಚಾರ್ಮಾಡಿ ಘಾಟಿ:
ಲಾರಿ ಸಂಚಾರ ನಿಯಂತ್ರಣಕ್ಕೆ ಒತ್ತಾಯ ಬೆಂಗಳೂರಿನಿಂದ ಕರಾವಳಿ ಭಾಗ ಸಂಪರ್ಕಕ್ಕೆ ಶಿರಾಡಿ ಘಾಟಿ ಪ್ರಮುಖ ರಸ್ತೆ. ಅಲ್ಲಿ ಮತ್ತೆ ಭೂಕುಸಿತ ಉಂಟಾಗಿರುವುದರಿಂದ ಬಂದ್ ಮಾಡಲಾಗಿದೆ. ಎಲ್ಲಾ ವಾಹನಗಳು ಶಿರಾಡಿ ಘಾಟಿಯಲ್ಲಿ ಬಂದರೆ ಇಲ್ಲಿಯೂ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂಬುದು ಸ್ಥಳೀಯರ ಆತಂಕ. ಮಳೆ ಮತ್ತು ಮಂಜಿನ ನಡುವೆ ರಾತ್ರಿ ವೇಳೆ ವಾಹನ ಸಂಚಾರ ಇಲ್ಲಿ ಕಷ್ಟ. ವಾಹನ ಸಂಚಾರ ಹೆಚ್ಚಾದರೆ ಇನ್ನಷ್ಟು ಕಷ್ಟವಾಗಲಿದೆ. ಆದ್ದರಿಂದ ಭಾರಿ ವಾಹನಗಳ ಸಂಚಾರವನ್ನು ರಾತ್ರಿ ವೇಳೆ ತಡೆಯಬೇಕು ಎಂಬುದು ಸ್ಥಳೀಯರ ಒತ್ತಾಯ. ‘ಎಲ್ಲಾ ರಸ್ತೆಗಳಲ್ಲೂ ಭೂಕುಸಿತವಾಗಿದ್ದು ಈ ಸಂದರ್ಭದಲ್ಲಿ ಚಾರ್ಮಾಡಿ ಘಾಟಿ ಉಳಿಸಿಕೊಳ್ಳುವುದು ಅನಿವಾರ್ಯ. ಆದ್ದರಿಂದ ರಾತ್ರಿ ವೇಳೆ ಲಘು ವಾಹನಗಳು ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕಷ್ಟೇ ಜಿಲ್ಲಾಡಳಿತ ಅನುಮತಿ ನೀಡಬೇಕು. ಲಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರವನ್ನು ರಾತ್ರಿ 6ರಿಂದ ಬೆಳಿಗ್ಗೆ 6ರ ತನಕ ಮಳೆ ಮುಗಿಯುವ ತನಕ ತಡೆಯಬೇಕು’ ಎಂದು ಕೊಟ್ಟಿಗೆಹಾರದ ಸಾಮಾಜಿಕ ಕಾರ್ಯಕರ್ತ ಸಂಜಯಗೌಡ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.