ADVERTISEMENT

ತವರಿಗೆ ಹೋಗಲು ಕಾರ್ಮಿಕನಿಗೆ ನೆರವು

ಮುಸ್ಲಿಂ ಸಂಘಟನೆಯ ಮುಖಂಡರ ಮಾನವೀಯತೆ

​ಪ್ರಜಾವಾಣಿ ವಾರ್ತೆ
Published 15 ಮೇ 2020, 17:03 IST
Last Updated 15 ಮೇ 2020, 17:03 IST
ಚಿಕ್ಕಮಗಳೂರಿನಿಂದ ನರಸಿಂಹರಾಜಪುರಕ್ಕೆ ನಡೆದುಕೊಂಡು ಬಂದು ಅನಾರೋಗ್ಯಕ್ಕೆ ತುತ್ತಾಗಿದ್ದ ಸೊರಬದ ಕಾರ್ಮಿಕನಿಗೆ ಮುಸ್ಲಿಂ ಸಂಘಟನೆಯ ಮುಖಂಡರು ಚಿಕಿತ್ಸೆ ಕೊಡಿಸಿ ಗುರುವಾರ ಊರಿಗೆ ಕಳುಸಿಕೊಟ್ಟರು.
ಚಿಕ್ಕಮಗಳೂರಿನಿಂದ ನರಸಿಂಹರಾಜಪುರಕ್ಕೆ ನಡೆದುಕೊಂಡು ಬಂದು ಅನಾರೋಗ್ಯಕ್ಕೆ ತುತ್ತಾಗಿದ್ದ ಸೊರಬದ ಕಾರ್ಮಿಕನಿಗೆ ಮುಸ್ಲಿಂ ಸಂಘಟನೆಯ ಮುಖಂಡರು ಚಿಕಿತ್ಸೆ ಕೊಡಿಸಿ ಗುರುವಾರ ಊರಿಗೆ ಕಳುಸಿಕೊಟ್ಟರು.   

ನರಸಿಂಹರಾಜಪುರ: ಕಾಲಿಗೆ ಗ್ಯಾಂಗ್ರೀನ್‍ ಆಗಿದ್ದರೂ ಚಿಕ್ಕಮಗಳೂರಿನಿಂದ ಎನ್.ಆರ್.ಪುರಕ್ಕೆ ನಡೆದುಕೊಂಡು ಬಂದಿದ್ದ ಸೊರಬದ ಕೂಲಿ ಕಾರ್ಮಿಕನೊಬ್ಬನಿಗೆ ಮುಸ್ಲಿಂ ಸಂಘಟನೆಯ ಮುಖಂಡರು ಆಹಾರ, ಔಷಧ, ಬಟ್ಟೆ, ಹಣ ನೀಡಿ ಊರಿಗೆ ಹೋಗಲು ನೆರವಾಗಿದ್ದಾರೆ.

ತಾಲ್ಲೂಕಿನ ಶೆಟ್ಟಿಕೊಪ್ಪದಲ್ಲಿ ರಸ್ತೆಯ ಬದಿ ಮಂಗಳವಾರ ಪ್ರಜ್ಞೆತಪ್ಪಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಆರೋಗ್ಯ ಇಲಾಖೆಯವರು ಗಮನಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಊರಿನಲ್ಲಿ ಯಾರೇ ಅನಾಥರು ಕಂಡರೂ ಅಂಥವರ ಸೇವೆಗೆ ಸಿದ್ಧರಾಗುವ ಸಮಾಜ ಸೇವಕಿ ಜುಬೇದಾ ಅವರು ಅಪರಿಚಿತ ವ್ಯಕ್ತಿಗೆ ಊಟ, ಬಟ್ಟೆ ನೀಡಿದ್ದಾರೆ.

ಅಪರಿಚಿತ ವ್ಯಕ್ತಿಯ ಕಾಲಿಗೆ ಗಾಯವಾಗಿ ನಂತರ ಅದು ಗ್ಯಾಂಗ್ರೀನ್ ಆಗಿ ಮಾರ್ಪಟಾಗಿತ್ತು. ಎರಡು ದಿನದಿಂದ ವೈದ್ಯರು ಚಿಕಿತ್ಸೆ ನೀಡಿದ್ದರು. ಜುಬೇದಾ ಹಾಗೂ ಮುಸ್ಲಿಂ ಮುಖಂಡರು ಎರಡು ದಿನಗಳ ಕಾಲ ಊಟ ನೀಡಿದ್ದಾರೆ. ನಂತರ ಚೇತರಿಸಿಕೊಂಡ ವ್ಯಕ್ತಿಯನ್ನು ವಿಚಾರಿಸಿದಾಗ ಸೊರಬ ತಾಲ್ಲೂಕಿನ ನಿಡುವಟ್ಟಿ ಗ್ರಾಮದ ಉಮೇಶ್‍ ಎಂದು ತಿಳಿದು ಬಂದಿದ್ದು, ಕೆಲಸಕ್ಕಾಗಿ ಚಿಕ್ಕಮಗಳೂರಿಗೆ ಬಂದಿದ್ದರು. ಲಾಕ್‍ಡೌನ್‍ ಆಗಿದ್ದರಿಂದ ಅಲ್ಲಿಯೇ ಒಂದು ತಿಂಗಳಿಂದ ನೆಲೆಸಿ ಪ್ರಸ್ತುತ ಬಸ್ ಇಲ್ಲದೆ ಇರುವುದರಿಂದ ಕೆಲಸವಿಲ್ಲದೆ ನಡೆದುಕೊಂಡು ಸೊರಬಕ್ಕೆ ಹೊರಟಿದ್ದರು. ಒಂದು ವಾರದ ಹಿಂದೆಯೇ ಚಿಕ್ಕಮಗಳೂರಿನಿಂದ ನಡೆದುಕೊಂಡೇ ಬಂದಿದ್ದರಿಂದ ಕಾಲಿನ ಗಾಯ ಮತ್ತಷ್ಟು ಉಲ್ಬಣಿಸಿತ್ತು.

ADVERTISEMENT

ಗುರುವಾರಕ್ಕೆ ಚೇತರಿಸಿಕೊಂಡ ಕಾರ್ಮಿಕನನ್ನು ಜುಬೇದಾ ನೇತೃತ್ವದಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಎಸ್.ಎಂ.ಆಬೀದ್, ಪಟ್ಟಣ ಪಂಚಾಯಿತಿ ಸದಸ್ಯ ಮುನಾವರ್ ಪಾಷಾ, ಸೈಯದ್ ವಸೀಂ, ಮುಖಂಡ ಸಿಗ್ಬುತುಲ್ಲಾ, ಮಾನವ ಹಕ್ಕುಗಳ ವೇದಿಕೆಯ ಸದಸ್ಯರಾದ ರಿಯಾಜ್, ಗಫಾರ್, ಮೊಹಮ್ಮದ್‍ ಕುಂಜು ಮತ್ತಿತರರು ಹಣ ಒಟ್ಟುಗೂಡಿಸಿ ಮಾನವ ಹಕ್ಕುಗಳ ವೇದಿಕೆಗೆ ಸೇರಿದ ಆಂಬುಲೆನ್ಸ್ ಮೂಲಕ ಸೊರಬಕ್ಕೆ ಕಳುಹಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.