ಚಿಕ್ಕಮಗಳೂರು: ಹಿಂದೂ ಫ್ಯಾಸಿಸ್ಟ್ ನೀತಿಯನ್ನು ಸೋಲಿಸಲು ಐಕ್ಯ ಹೋರಾಟ ಏಕೈಕ ಮಾರ್ಗವೆಂದು ಸಿಪಿಐ(ಎಂ.ಎಲ್.) ರೆಡ್‌ಸ್ಟಾರ್ ಪಕ್ಷದ ಪಾಲಿಟ್ ಬ್ಯುರೋ ಸದಸ್ಯ ಕಬೀರ್ ಪ್ರತಿಪಾದಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಸಿಪಿಐ (ಎಂ.ಎಲ್), ದಲಿತ ಸಂಘಟನೆಗಳ ಒಕ್ಕೂಟ, ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಸಹಯೋಗದಲ್ಲಿ ಶನಿವಾರ ನಡೆದ ಆರ್.ಎಸ್.ಎಸ್.ಹಿಂದುತ್ವ- ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿ, ಫ್ಯಾಸಿಸ್ಟ್ ಶಕ್ತಿಯನ್ನು ಸೋಲಿಸಬೇಕಾದರೆ ನಾವೆಲ್ಲರೂ ಒಂದೇ ವೇದಿಕೆಯಡಿ ಬರಬೇಕಾಗಿದೆ ಎಂದು ಹೇಳಿದರು.
ಕೇರಳದಿಂದ ಪಂಜಾಬ್‌ವರೆಗೆ ಫ್ಯಾಸಿಸ್ ವಿರೋಧಿ ಜನತಾ ಸಮಾವೇಶ ನಡೆಸಲಾಗುತ್ತಿದೆ. ಹೈದರಾಬಾದ್‌ನಲ್ಲಿ ಡಿ.6ಕ್ಕೆ ರಾಷ್ಟ್ರ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಬೇಕಾದರೆ ನಮ್ಮೊಳಗಿರುವ ಸಣ್ಣ, ಪುಟ್ಟ ವಿಚಾರಗಳನ್ನು ಮರೆತು ಒಗ್ಗೂಡಬೇಕಾಗಿದೆ ಎಂದು ತಿಳಿಸಿದರು.
ದೇಶವನ್ನು ವಿಭಜಿಸುವ ಯತ್ನಗಳು ನಡೆಯುತ್ತಿವೆ. ದಾರ್ಶನಿಕರ ಆಶಯಗಳಿಗೆ ಧಕ್ಕೆ ಬಂದೊದಗಿದೆ. ದೇಶದಲ್ಲಿ ಹಣಕಾಸು ಬಂಡವಾಳ ಫ್ಯಾಸಿಸ್ಟ್ ಶಕ್ತಿಯನ್ನು ಮುನ್ನಡೆಸುತ್ತಿದೆ. ಸಂಘ ಪರಿವಾರ ಶಕ್ತಿಗಳಿಗೆ ಹಣಕಾಸು ಬಂಡವಾಳ ಅನುಕೂಲ ಮಾಡಿಕೊಡುತ್ತಿದೆ. ಕಾರ್ಮಿಕರು ಹೋರಾಟದ ಮೂಲಕ ಪಡೆದ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ತರಲಾಗಿದೆ. ದುಡಿಯುವ ವರ್ಗದ ಮೇಲೆ ಸವಾರಿ ಮಾಡಲಾಗುತ್ತಿದ್ದು, ಬಂಡವಾಳಿಗರ ಪರವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳ ಕೈಗೆ ನೀಡಲಾಗಿದೆ. ಕೃಷಿ ಕ್ಷೇತ್ರದ ಮೇಲೆ ದಾಳಿಗಳು ಮುಂದುವರೆದಿದ್ದು, ವ್ಯಾಪಾರಿ ಕ್ಷೇತ್ರವನ್ನು ಅದು ಬಿಟ್ಟಿಲ್ಲ, ಬಹುಸಂಖ್ಯಾತರ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಹೆದರಿಸುವ ಕೆಲಸ ನಡೆದಿದೆ. ಫ್ಯಾಸಿಸ್ಟ್ ಶಕ್ತಿಗಳು ಬಹುಸಂಖ್ಯಾರನ್ನು ಓಲೈಸಿಕೊಂಡು ಅವರನ್ನು ಅಲ್ಪಸಂಖ್ಯಾತರ ಮೇಲೆ ಎತ್ತಿಕಟ್ಟುವ ಕೆಲಸ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಬಹುತ್ವವನ್ನು ಬದಿಗೆ ಸರಿಸಿ, ಹಿಂದೂತ್ವವನ್ನು ಹೇರಲಾಗುತ್ತಿದೆ. ನಿರಂಕುಶ ಆಡಳಿತವನ್ನು ಹೇರುವ ಹವಣಿಕೆ ನಿರಂತರವಾಗಿ ನಡೆಯುತ್ತಿದೆ. ಸಂಘಪರಿವಾರದವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರವಹಿಸಿದ್ದರು ಎಂದು ಹಸಿಸುಳ್ಳನ್ನು ಯುವಜನತೆ ತಲೆಗೆ ತುಂಬಲಾಗುತ್ತಿದೆ ಎಂದು ಹೇಳಿದರು.
ಫ್ಯಾಸಿಸ್ಟ್ ಶಕ್ತಿಯನ್ನು ಮಣಿಸಲು, ದೇಶದ ಸಂವಿಧಾನವನ್ನು ರಕ್ಷಿಸಲು ಎಡಪಕ್ಷಗಳು, ಪ್ರಗತಿಪರ ಸಂಘಟನೆಗಳು ಒಗ್ಗೂಡುವ ಮೂಲಕ ಐಕ್ಯ ಹೋರಾಟಕ್ಕೆ ಮುಂದಾಗಬೇಕೆಂದು ಸಿಪಿಐ(ಎಂ.ಎಲ್) ರೆಡ್‌ಸ್ಟಾರ್ ಪಕ್ಷದ ಕೇಂದ್ರ ಸಮಿತಿ ಸದಸ್ಯ ಬಸೀರ್ ಮನವಿ ಮಾಡಿದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಪೆಡಂಬೂರು ಮಾತನಾಡಿ, ದೇಶದ ಉಸಿರು ಸಂವಿಧಾನ. ಇಂತಹ ಸಂವಿಧಾನಕ್ಕೆ ಆಪತ್ತು ಬಂದೊದಗಿದೆ. ದೇಶವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯುವ ಕೆಲಸ ನಡೆದಿದೆ. ದೇಶದಲ್ಲಿ ಆರ್‌ಎಸ್‌ಎಸ್ ಫ್ಯಾಸಿಸ್ಟ್ ಶಕ್ತಿಯನ್ನು ವಿರೋಧಿಸುವವರು ಒಟ್ಟಾಗಬೇಕಾಗಿದೆ. ಸಂವಿಧಾನದಲ್ಲಿರುವ ಜಾತ್ಯತೀತ, ಸಮಾಜವಾದ ಪದವನ್ನು ತೆಗೆದು ಹಾಕಬೇಕೆಂಬ ಒತ್ತಡಗಳು ಬರುತ್ತಿದ್ದು, ಇದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು.
ಬಿಜೆಪಿ ಸೇರಿದಂತೆ ಸಂಘ ಪರಿವಾರವನ್ನು ವಿರೋಧಿಸುವವರ ಧ್ವನಿ ಅಡಗಿಸುವ ಕೆಲಸ ದೇಶದಲ್ಲಿ ನಡೆದಿದೆ. ಕೇಂದ್ರ ಸರ್ಕಾರವನ್ನು ಟೀಕಿಸುವವರ ಮೇಲೆ ಯುಎಪಿಎ ಕಾಯ್ದೆಯನ್ನು ಬಳಸುವ ಮೂಲಕ ಅವರನ್ನು ಜೈಲಿಗೆ ತಳ್ಳುವ ಕೆಲಸಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇಂತಹವುಗಳಿಗೆ ಅವಕಾಶ ದೊರೆಯದಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ರವೀಶ್ ಬಸಪ್ಪ, ಬಹುತ್ವದ ಭಾರತವನ್ನು ಉಳಿಸಿಕೊಳ್ಳಬೇಕಾಗಿದೆ. ಮನುಷ್ಯರ ನಡುವೆ ಮುಳ್ಳಿನಬೇಲಿ, ತಡೆಗೋಡೆಯನ್ನು ನಿರ್ಮಿಸುತ್ತಿದ್ದು, ಇದನ್ನು ಚಿದ್ರಗೊಳಿಸಬೇಕಾಗಿದೆ. ಜೀವಪರವನ್ನು ಗಟ್ಟಿಗೊಳಿಸಬೇಕಾಗಿದ್ದು, ಸತ್ಯದ ಪರವಾಗಿ ಧ್ವನಿಎತ್ತು ಕೆಲಸವಾಗಬೇಕಾಗಿದೆ ಎಂದು ತಿಳಿಸಿದರು.
ಸಿಪಿಐ(ಎಂ.ಎಲ್.) ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿರುವ ಹಿನ್ನಲೆಯಲ್ಲಿ ಫ್ಯಾಸಿಸ್ಟ್ ವಿರೋಧ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ. ರಾಜ್ಯ, ಜಿಲ್ಲಾ ಮಟ್ಟದಲ್ಲಿ ದೊಡ್ಡಮಟ್ಟದ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ, ಕಾಂಗ್ರೆಸ್ ಕೆಪಿಸಿಸಿ ವಕ್ತಾರ ದೇವರಾಜ್, ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಸಂವಿಧಾನ ಉಳಿಸಿ ಹೋರಾಟ ವೇದಿಕೆ ಮುಖಂಡ ಕೃಷ್ಣಮೂರ್ತಿ,ಗುರುಶಾಂತಪ್ಪ, ಗೌಸ್ ಮೊಹಿಯುದ್ದೀನ್, ಅಂಗಡಿ ಚಂದ್ರು, ಗಂಗಾಧರ, ಉಮೇಶ್‌ಕುಮಾರ್, ಮಂಜುನಾಥ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.