ADVERTISEMENT

ಕೊರೊನಾ ತಡೆಗೆ ತಾಲ್ಲೂಕು ಆಸ್ಪತ್ರೆ ಸಿದ್ಧ

ಎನ್‌.ಆರ್‌.ಪುರ: ಸಂಪರ್ಕಿತರ ಪತ್ತೆಗೆ ಕಾಂಟ್ಯಾಕ್ಟ್ ಟ್ರೇಸಿಂಗ್ ಟೀಂ

ಕೆ.ವಿ.ನಾಗರಾಜ್
Published 3 ಏಪ್ರಿಲ್ 2020, 10:32 IST
Last Updated 3 ಏಪ್ರಿಲ್ 2020, 10:32 IST
ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ ಒಳಗೆ ಬಿಡಲಾಗುತ್ತಿದೆ
ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ ಒಳಗೆ ಬಿಡಲಾಗುತ್ತಿದೆ   

ನರಸಿಂಹರಾಜಪುರ: ಕೇರಳದಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆಯಾದಾಗ ತಾಲ್ಲೂಕು ವ್ಯಾಪ್ತಿಯಲ್ಲೂ ಕೇರಳದೊಂದಿಗೆ ನಂಟು ಹೊಂದಿರುವವರ ಸಂಖ್ಯೆ ಹೆಚ್ಚಿರುವುದರಿಂದ ಇದನ್ನು ಅತಿ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿದ ತಾಲ್ಲೂಕು ಆರೋಗ್ಯ ಇಲಾಖೆ, ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಕಲ ಸಿದ್ಧತೆ ಮಾಡಿಕೊಂಡಿದೆ.

ತಾಲ್ಲೂಕು ಆಸ್ಪತ್ರೆಯಲ್ಲಿ ಫಿವರ್ ಕ್ಲಿನಿಕ್ ಆರಂಭಿಸಲಾಗಿದೆ. 3 ಹಾಸಿಗೆಯ ಪ್ರತ್ಯೇಕ ಕೊರೊನಾ ಐಸೋಲೇಷನ್ ವಾರ್ಡ್ ಸ್ಥಾಪಿಸಲಾಗಿದೆ. ಹೋಂ ಕ್ವಾರಂಟೈನ್‌ನಲ್ಲಿದ್ದವರು ಇದನ್ನು ಉಲ್ಲಂಘಿಸಿದರೆ 28 ದಿನಗಳವರೆಗೆ ಆರೈಕೆ ಮಾಡಲು ಸಮಾಜಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯವನ್ನು ಕಾಯ್ದಿರಿಸಲಾಗಿದೆ.

ಆಸ್ಪತ್ರೆಯಲ್ಲೂ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಚೌಕ ನಿರ್ಮಿಸಲಾಗಿದೆ. ತಾಲ್ಲೂಕಿನ ಬಾಳೆ
ಹೊನ್ನೂರು, ಮುತ್ತಿನಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜ್ವರ ಪತ್ತೆ ಮಾಡಲು ಥರ್ಮಲ್ ಸ್ಕ್ಯಾನರ್ ನೀಡಲಾಗಿದೆ.

ADVERTISEMENT

ಕೊರೊನಾ ವೈರಸ್‌ಗೆ ಚಿಕಿತ್ಸೆ ನೀಡುವ ಸಲುವಾಗಿ ಗಂಟಲು ದ್ರವ ತೆಗೆಯಲು ಸಹಾಯಕವಾಗುವ ನಿಟ್ಟಿನಲ್ಲಿ 4 ಕಿಟ್, ಚಿಕಿತ್ಸೆ ನೀಡುವ ವೈದ್ಯರಿಗೆ ಪರ್ಸನಲ್ ಪ್ರೊಟಕ್ಷನ್ ಎಕ್ಯೂಪ್‌ಮೆಂಟ್ಸ್ (ಪಿಪಿಇ)– 61, ತ್ರಿಪ್ಪಲ್ ಲೇಯರ್ ಮಾಸ್ಕ್– 8,600, ಎನ್ 95 ಮಾಸ್ಕ್ –65, ಸ್ಯಾನಿಟೈಸರ್ –64 ದಾಸ್ತಾನು ಮಾಡಿಟ್ಟುಕೊಳ್ಳಲಾಗಿದೆ.

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಎರಡು ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಇದು 24X7 ಕಾರ್ಯನಿರ್ವಹಿಸುತ್ತದೆ. ಕೋವಿಡ್ –19 ಬಗ್ಗೆ ಸಹಾಯವಾಣಿ ಸಂಖ್ಯೆ 96637 51731, ಗರ್ಭಿಣಿ
ಯರು, ವೃದ್ಧರಿಗೆ, ತುರ್ತುಚಿಕಿತ್ಸೆ ಬೇಕಾದವರಿಗೆ ಸಹಾಯವಾಣಿ ಸಂಖ್ಯೆ 96861 94220.

ಸೋಂಕು ಪೀಡಿತರ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚಲು ಕಾಂಟ್ಯಾಕ್ಟ್ ಟ್ರೇಸಿಂಗ್ ಟೀಂ ರಚಿಸಲಾಗಿದೆ. ತಾಲ್ಲೂಕು ಆರೋಗ್ಯಾಧಿಕಾರಿಗಳು, ತಜ್ಞ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನೊಳಗೊಂಡ ಕ್ಷಿಪ್ರ ಕ್ರಿಯಾ ತಂಡ, ತಹಶೀಲ್ದಾರ್ ನೇತೃತ್ವದ ಕೋವಿಡ್ –19 ನಿಯಂತ್ರಣದ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ರಚಿಸಲಾಗಿದೆ.

ತಾಲ್ಲೂಕಿನಲ್ಲಿ ಇದುವರೆಗೂ ಯಾವುದೇ ಕೊರೊನಾ ಪ್ರಕರಣ ಕಂಡು ಬರದಿರುವುದರಿಂದ ಆಸ್ಪತ್ರೆಯಲ್ಲಿರುವ ಪರಿಕರಗಳು ಸದ್ಯದ ಪರಿಸ್ಥಿತಿಗೆ ಸಾಕಾಗುತ್ತವೆ
ಎಂದು ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವೀರಪ್ರಸಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.