ADVERTISEMENT

ಬೀರೂರು: ಲಕ್ಷ್ಮಯ್ಯ ಬಡಾವಣೆಯಲ್ಲಿ ಜಿ+2 ಮನೆಗಳ ನಿರ್ಮಾಣ

ಬೀರೂರು ಪುರಸಭೆಯ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಕೆ.ಎಸ್‌.ಆನಂದ್‌

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 3:08 IST
Last Updated 3 ಸೆಪ್ಟೆಂಬರ್ 2025, 3:08 IST
ಬೀರೂರು ಪುರಸಭೆಯಲ್ಲಿ ಸೋಮವಾರ ಶಾಸಕ ಕೆ.ಎಸ್‌.ಆನಂದ್‌ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆ ನಡೆಯಿತು
ಬೀರೂರು ಪುರಸಭೆಯಲ್ಲಿ ಸೋಮವಾರ ಶಾಸಕ ಕೆ.ಎಸ್‌.ಆನಂದ್‌ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆ ನಡೆಯಿತು   

ಬೀರೂರು(ಕಡೂರು): ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಎಸ್‌.ಆರ್‌.ಲಕ್ಷ್ಮಯ್ಯ ಆಶ್ರಯ ಬಡಾವಣೆಯಲ್ಲಿ ‘ಜಿ+2ʼ ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಶಾಸಕ ಕೆ.ಎಸ್‌.ಆನಂದ್‌ ತಿಳಿಸಿದರು.

ಬೀರೂರು ಪುರಸಭೆಯ ಸಭಾಂಗಣದಲ್ಲಿ ಸೋಮವಾರ ಆಶ್ರಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಕ್ಷ್ಮಯ್ಯ ಬಡಾವಣೆಯಲ್ಲಿ 15 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಿ ಆಶ್ರಯ ನಿವೇಶನ ಹಂಚಿಕೆಗೆ ಕ್ರಮ ವಹಿಸಲಾಗಿತ್ತು. ಬಡಾವಣೆ ಅಸ್ತಿತ್ವಕ್ಕೆ ಬಂದಾಗ 552 ನಿವೇಶನಗಳನ್ನು ನಿರ್ಮಿಸಿ 234 ಅರ್ಹರನ್ನು ಗುರುತಿಸಿ 94 ಜನರಿಗೆ ಹಕ್ಕುಪತ್ರ ವಿತರಿಸಲಾಗಿತ್ತು. ಆದರೆ ಬೆಂಗಳೂರು-ಶಿವಮೊಗ್ಗ ಬೈಪಾಸ್‌ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಈ ಬಡಾವಣೆಯ 5.37ಎಕರೆ ಭೂಮಿ ಭೂಸ್ವಾಧೀನಗೊಂಡು ಕೇವಲ 9.03ಎಕರೆ ಭೂಮಿ ಮಾತ್ರ ಉಳಿದಿದೆ. ಅಲ್ಲಿ ನಿವೇಶನಗಳಾಗಿ ವಿಂಗಡಿಸಿದರೆ 316 ಮಾತ್ರ ಲಭ್ಯವಾಗುತ್ತದೆ. ಬದಲಾಗಿ ರಾಜೀವಗಾಂಧಿ ವಸತಿ ನಿಗಮದ ಅಡಿಯಲ್ಲಿ ಜಿ+2 ಮನೆಗಳನ್ನು ನಿರ್ಮಿಸಿದರೆ ಪಟ್ಟಣದ ಸಾವಿರಾರು ಕುಟುಂಬಗಳಿಗೆ ವಸತಿ ಕಲ್ಪಿಸಬಹುದು ಎಂದು ಮಾಹಿತಿ ನೀಡಿದರು.

ADVERTISEMENT

ಆಶ್ರಯ ಸಮಿತಿಯ ತೀರ್ಮಾನದಂತೆ ಅಲ್ಲಿ ಉಳಿದಿರುವ 9.03 ಎಕರೆ ಭೂಮಿಯಲ್ಲಿ ಒಂದು ಎಕರೆ ಭೂಮಿಯನ್ನು ಸಾರ್ವಜನಿಕ ಬಳಕೆಯ ಉದ್ದೇಶಕ್ಕೆ ಮೀಸಲಿಟ್ಟು ಉಳಿದ ಜಾಗದಲ್ಲಿ ವಸತಿ ಸೌಲಭ್ಯಕ್ಕೆ ಮುಂದಾಗಬೇಕು. ಸದ್ಯ ಬೀರೂರು ಪುರಸಭೆಯಲ್ಲಿ ನಿವೇಶನ ಕೋರಿ 1,641 ಅರ್ಜಿಗಳು ಬಂದಿದ್ದು ಬ್ಲಾಕ್‌ ವಸತಿ ಸಮುಚ್ಚಯ ನಿರ್ಮಿಸಿದರೆ ಅರ್ಜಿ ಸಲ್ಲಿಸಿದ ಬಹುತೇಕರಿಗೆ ಸೌಲಭ್ಯ ದೊರೆಯಲಿದೆ ಎಂದು ವಿವರಿಸಿದರು.

ಪುರಸಭೆ ವ್ಯಾಪ್ತಿಯ ಭಾಗವತ್‌ ನಗರದಲ್ಲಿ ಪುರಸಭೆಗೆ ಸಂಬಂಧಿಸಿದ ಒಂದು ಎಕರೆ ಭೂಮಿ ಇದ್ದು, ಅದರಲ್ಲಿ ಒತ್ತುವರಿ ಬಗ್ಗೆ ದೂರುಗಳಿವೆ. ಪುರಸಭೆಯು ಪೊಲೀಸ್‌ ರಕ್ಷಣೆಯೊಂದಿಗೆ ಅಲ್ಲಿ ಅಳತೆ ನಡೆಸಿ ಜಾಗವನ್ನು ವಶಕ್ಕೆ ಪಡೆಯಬೇಕು. 23 ವಾರ್ಡ್‌ಗಳಲ್ಲಿ ಪುರಸಭೆಯ ನಿವೇಶನಗಳಿದ್ದು, ಆಡಳಿತವು ಯಾವುದೇ ಪಕ್ಷ, ಜಾತಿ, ಪ್ರಭಾವಕ್ಕೆ ಒಳಗಾಗದೇ ಜಾಗವನ್ನು ವಶಪಡಿಸಿಕೊಂಡು ತಂತಿಬೇಲಿ ನಿರ್ಮಿಸಿ ಪುರಸಭೆ ಆಸ್ತಿ ಎಂದು ಬೋರ್ಡ್‌ ಹಾಕಬೇಕು ಎಂದು ಸಮಿತಿ ಸೂಚಿಸಿತು.

ಪುರಸಭೆ ಆಸ್ತಿಯಲ್ಲಿ ಅನೇಕ ಕುಟುಂಬಗಳು ಮನೆ ಕಟ್ಟಿಕೊಂಡಿವೆ. ನಮಗೆ ಹಕ್ಕುಪತ್ರ ಕೊಡಿ ಎಂದು 42 ಅರ್ಜಿಗಳು ಸಲ್ಲಿಕೆಯಾಗಿವೆ. ಅಲ್ಲಿ ಸರ್ವೇ ನಡೆಸಿ ಅರ್ಹ ಫಲಾನುಭವಿಗಳಿದ್ದರೆ ಅವರಿಗೆ ನಿಯಮಾನುಸಾರ ಕ್ರಮ ವಹಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಹೊಸಳಮ್ಮ ಬಡಾವಣೆಯಲ್ಲಿ ನಿವೇಶನ ಕೊಡುವಂತೆ ಅರ್ಜಿ ಸಲ್ಲಿಕೆಯಾಗಿದೆ. ಎರಡು ನಿವೇಶನಗಳಿದ್ದು ಒಂದು ಅರ್ಜಿ ಬಂದಿದೆ. ಸರಸ್ವತಿಪುರಂ ಬಡಾವಣೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಿರ್ಮಿಸಿರುವ ಮನೆಗಳಿಗೆ ಈವರೆಗೆ ಹಕ್ಕುಪತ್ರ ಸಿಕ್ಕಿಲ್ಲ. ಪುರಸಭೆಯು ಸ್ಥಳ ಪರಿಶೀಲನೆ ನಡೆಸಿ, ಕೊಳಚೆ ನಿರ್ಮೂಲನಾ ಮಂಡಳಿ ಜತೆ ಪತ್ರ ವ್ಯವಹಾರ ನಡೆಸಿ ಸ್ವಾಧೀನಕ್ಕೆ ಪಡೆದು ಅವರಿಗೆ ಹಕ್ಕುಪತ್ರ ಕೊಡಲು ಕ್ರಮ ವಹಿಸುವಂತೆ ಶಾಸಕರು ಮುಖ್ಯಾಧಿಕಾರಿಗೆ ಸೂಚಿಸಿದರು.

ಆಶ್ರಯ ಸಮಿತಿ ಸದಸ್ಯ ಬಿ.ಟಿ.ಚಂದ್ರಶೇಖರ್‌, ಪುರಸಭೆಯಲ್ಲಿದ್ದ 13 ಆಸ್ತಿ ದಾಖಲೆಗಳ ವಾಲ್ಯೂಮ್‌ಗಳಲ್ಲಿ ನಾಲ್ಕು ಕಳುವಾಗಿವೆ ಎಂದು ಆರೋಪಿಸಿದರೆ, ಪುರಸಭಾಧ್ಯಕ್ಷೆ ಭಾಗ್ಯಲಕ್ಷ್ಮಿ ಅಧಿಕಾರಿಗಳು ಸಾಕಷ್ಟು ವಿಷಯವನ್ನು ತಮ್ಮ ಗಮನಕ್ಕೆ ತಂದಿಲ್ಲ. ಸಭೆಗೆ ಏನು ಮಾಹಿತಿ ಕೊಡುವುದು ಎಂದು ಅಳಲು ತೋಡಿಕೊಂಡರು. ಅನುಭೋಗದಲ್ಲಿದ್ದೂ ಹಕ್ಕುಪತ್ರ ಪಡೆಯದ ನಿವೇಶನಗಳನ್ನು ಸರ್ವೇ ಮೂಲಕ ಗುರುತಿಸಿ ಅವರಿಗೆ ಸೌಲಭ್ಯ ಕಲ್ಪಿಸಿದರೆ ಪುರಸಭೆಗೂ ಕಂದಾಯ ರೂಪದಲ್ಲಿ ಆದಾಯ ಬರುತ್ತದೆ ಎಂದು ಸದಸ್ಯ ಮುಬಾರಕ್‌ ಹೇಳಿದರು.

ಗ್ರಾಮಠಾಣಾ ವ್ಯಾಪ್ತಿ ವಿಸ್ತರಿಸಿದರೆ ಪಟ್ಟಣದ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಸಭೆಯಲ್ಲಿದ್ದ ನಗರ ಯೋಜನಾ ಕೋಶದ ಜಾನಕಿ ಅವರಿಗೆ ಶಾಸಕರು ಸೂಚಿಸಿದರು. ಪುರಸಭೆಯು ಕೇವಲ ಹಕ್ಕುಪತ್ರ ವಿತರಿಸಿದರೆ ಸಾಲದು. ಆಸ್ತಿ ನೋಂದಣಿ ದಾಖಲೆ, ಹಕ್ಕುಪತ್ರ ಮತ್ತು ಇ-ಸ್ವತ್ತು ವಿತರಿಸಿದರೆ ಆಗ ಅದಕ್ಕೆ ಬೆಲೆ ಮತ್ತು ಪೂರ್ಣತೆ ಇರುತ್ತದೆ ಎಂದರು.

ಸಭೆಯಲ್ಲಿ ತಹಶೀಲ್ದಾರ್‌ ಸಿ.ಎಸ್‌.ಪೂರ್ಣಿಮಾ, ಮುಖ್ಯಾಧಿಕಾರಿ ಜಿ.ಪ್ರಕಾಶ್‌, ಆಶ್ರಯ ಸಮಿತಿ ಸದಸ್ಯ ಉಮೇಶ್‌, ಪುರಸಭೆ ಎಂಜಿನಿಯರ್‌ ವೀಣಾ, ಆರೋಗ್ಯ ನಿರೀಕ್ಷಕ ಲಕ್ಷ್ಮಣ್‌, ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.