ADVERTISEMENT

ಈದ್‌ಮಿಲಾದ್‌ ಮೆರವಣಿಗೆ ವಿಜೃಂಭಣೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:00 IST
Last Updated 21 ನವೆಂಬರ್ 2018, 20:00 IST
ನಗರದ ಐ.ಜಿ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಜನಸ್ತೋಮ ಸಾಗಿದ ಪರಿ
ನಗರದ ಐ.ಜಿ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಜನಸ್ತೋಮ ಸಾಗಿದ ಪರಿ   

ಚಿಕ್ಕಮಗಳೂರು: ಈದ್‌ ಮಿಲಾದ್‌ ಆಚರಣೆ ಅಂಗವಾಗಿ ಮುಸ್ಲಿಂ ಸಮುದಾಯದವರು ನಗರದಲ್ಲಿ ಬುಧವಾರ ವಿಜೃಂಭಣೆಯಿಂದ ಮೆರವಣಿಗೆ ನಡೆಸಿದರು. ಸಹಸ್ರಾರು ಮಂದಿ ಪಾಲ್ಗೊಂಡು ಸಂಭ್ರಮಿಸಿದರು.

ಹಸಿರು ವರ್ಣದ ಧ್ವಜಗಳು, ಮೆಕ್ಕಾ ಮದೀನಾ ಪ್ರತಿಕೃತಿಗಳು, ವಿವಿಧ ವೇಷಧಾರಿ ‍ಪುಟಾಣಿಗಳು, ಗಾನಬಜಾನಗಳು ಮೆರವಣಿಗೆಯುದ್ದಕ್ಕೂ ರಾರಾಜಿಸಿದವು. ಕಟ್ಟಡಗಳ ಮಹಡಿ, ರಸ್ತೆ ಬದಿಗಳಲ್ಲಿ ನಿಂತು ಜನರು ಮೆರವಣಿಗೆ ವೀಕ್ಷಿಸಿ ಖುಷಿಪಟ್ಟರು.

ಮಧ್ಯಾಹ್ನ 3.15ರ ಹೊತ್ತಿಗೆ ಅಂಡೇ ಛತ್ರದ ಬಳಿಯಿಂದ ಮೆರವಣಿಗೆ ಮೊದಲ್ಗೊಂಡಿತ್ತು. ‘ಜಿಂದಾಬಾದ್‌ ಜಿಂದಾಬಾದ್ ಇಸ್ಲಾಂ ಜಿಂದಾಬಾದ್‌’, ‘ಅಲ್ಲಾಹು ಅಕ್ಬರ್‌’ ಘೋಷಣೆಗಳು ಮೊಳಗಿದವು. ಪ್ರವಾದಿ ಮಹಮ್ಮದ್‌ ಪೈಗಂಬರರ ಜನ್ಮದಿನಾಚರಣೆ ಶುಭಾಶಯ ಕೋರಿದರು. ಮೆರವಣಿಗೆಯುದ್ದಕ್ಕೂ ಯುವಜನರು ಕುಣಿದುಕುಪ್ಪಳಿಸಿದರು.

ADVERTISEMENT

ಬಹಳಷ್ಟು ಮಂದಿ ಶ್ವೇತವಸ್ತ್ರಗಳನ್ನು ಧರಿಸಿದ್ದರು. ಹಸಿರು ಧ್ವಜಗಳನ್ನು ಹಿಡಿದು ಸಾಗಿದರು. ಆಟೊ, ಜೀಪು, ವ್ಯಾನು, ಇತರ ವಾಹನಗಳಲ್ಲಿ ಕುಳಿತ ಕೆಲವರು ಸಾಗಿದರು. ಟಿಪ್ಪು ವೇಷಧಾರಿ ಕೆಲ ಪುಟಾಣಿಗಳು ವಾಹನಗಳ ಮೇಲೆ ಕುಳಿತು ಗಮನ ಸೆಳೆದರು.

‘ಮೈಸೂರಿನ ಹುಲಿ ಟಿಪ್ಪು, ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಟಿಪ್ಪು...’, ‘ ನಮ್ಮ ನಾಡಿನ ಹೆಮ್ಮೆ ಟಿಪ್ಪು...’ ಮೊದಲಾದ ಗೀತೆಗಳನ್ನು ಹಾಡಿದರು. ಸಂದೇಶಗಳನ್ನು ಸಾರಿದರು. ತಾಳಮೇಳಕ್ಕೆ ಯುವಜನರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಯುವಜನರ ಉಲ್ಲಾಸ ಉತ್ಸಾಹ ಮುಗಿಲು ಮುಟ್ಟಿತ್ತು.

ಮೆರವಣಿಗೆಯು ಆಜಾದ್‌ ಪಾರ್ಕ್‌ ವೃತ್ತ, ತೊಗರಿಹಂಕಲ್‌ ವೃತ್ತ, ಐ.ಜಿ.ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಹಾದು ಸಂಜೆ 6 ಗಂಟೆಗೆ ಹೊತ್ತಿಗೆ ಮತ್ತೆ ಅಂಡೇ ಛತ್ರ ತಲುಪಿ ಸಂಪನ್ನಗೊಂಡಿತು.

ಮೆರವಣಿಗೆ ನಿಟ್ಟಿನಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿತ್ತು. ಪೊಲೀಸ್‌ ಬಂದೋಬಸ್ತ್‌ನಲ್ಲಿ ಮೆರವಣಿಗೆ ಸಾಗಿತು. ಮುಂಜಾಗ್ರತೆಯಾಗಿ ಐ.ಜಿ, ಎಂ.ಜಿ ರಸ್ತೆಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿತ್ತು. ಈ ರಸ್ತೆಗಳಲ್ಲಿ ಕೆಲವು ಅಂಗಡಿ ಮಳಿಗೆಗಳು ಮುಚ್ಚಿದ್ದವು. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಕೆಲಕಾಲ ನಿರ್ಬಂಧಿಸಲಾಗಿತ್ತು. ಎಂ.ಜಿ ರಸ್ತೆಯ ಸಂಪರ್ಕ ಹಾದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ಅವರು ಬಂದೋಬಸ್ತ್‌ ನಿಗಾವಹಿಸಿದ್ದರು. ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.