ADVERTISEMENT

ಕ್ರೀಡೋತ್ಸಾಹದಲ್ಲಿ 'ಶೂನ್ಯತ್ಯಾಜ್ಯ'ದ ಮಾದರಿ

ಮಲೆನಾಡು ಅಲ್ಟ್ರಾ ಓಟ: ಸ್ವಚ್ಛತೆ ಪರಿಸರ ಸಂರಕ್ಷಣೆಯ ಕಾಳಜಿ ಮೆರೆದ ಸಂಘಟಕರು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:26 IST
Last Updated 23 ನವೆಂಬರ್ 2025, 5:26 IST
ಪರಿಸರ ಸ್ನೇಹಿ ತಟ್ಟೆಗಳಲ್ಲಿ ಊಟ ಮಾಡುತ್ತಿರುವ ಕ್ರೀಡಾಪಟುಗಳು
ಪರಿಸರ ಸ್ನೇಹಿ ತಟ್ಟೆಗಳಲ್ಲಿ ಊಟ ಮಾಡುತ್ತಿರುವ ಕ್ರೀಡಾಪಟುಗಳು   

ಚಿಕ್ಕಮಗಳೂರು: ಒಂದು ತುಣುಕು ಪ್ಲಾಸ್ಟಿಕ್ ಕೂಡ ಇಲ್ಲದ ಪರಿಸರ ಸ್ನೇಹಿ ಕಾರ್ಯಕ್ರಮ. ಆಹಾರ, ಚಹಾ-ಕಾಫಿ ಸೇವನೆಗೆ ಪ್ರಕೃತಿದತ್ತ ಕಂಗಿನ ಹಾಳೆಯ ಪ್ಲೇಟ್, ಪರಿಸರಕ್ಕೆ ಧಕ್ಕೆ ಮಾಡದ ಲೋಟಗಳ ಬಳಕೆ, ಎಲ್ಲ ಕಡೆ ಸ್ವಚ್ಛತೆಗೆ ಆದ್ಯತೆ.

ಬೆಂಗಳೂರಿನ ಜಿರಿಮ್ ಸಂಸ್ಥೆ, ಚಿಕ್ಕಮಗಳೂರು ಗಾಲ್ಫ್ ಕ್ಲಬ್‌ ಮತ್ತು ಅಮೆರಿಕದ ಟೆಕಿಯಾನ್ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಮಲ್ಲಂದೂರಿನಲ್ಲಿ ಆಯೋಜಿಸಿದ್ದ ಮಲೆನಾಡು ಅಲ್ಟ್ರಾ ಟ್ರೇಲ್ ರೇಸ್ ಶೂನ್ಯತ್ಯಾಜ್ಯ ಮಾದರಿ ಮೂಲಕ ಸಮಾಜಕ್ಕೆ ಪಾಠ ಹೇಳಿತು.

ಬೆಳಿಗ್ಗೆ 6.30ರಿಂದ ವಿವಿಧ ವಿಭಾಗಗಳ ಓಟಕ್ಕೆ ಚಾಲನೆ ನೀಡಲಾಯಿತು. ಓಟಗಾರರು ಪ್ಲಾಸ್ಟಿಕ್ ಬಾಟಲಿ ಬಳಸಲು ಅವಕಾಶ ಇರಲಿಲ್ಲ. ಜೊತೆಯಲ್ಲಿ ಕೊಂಡೊಯ್ದ ಬಿಸ್ಕತ್ ಮತ್ತು ಇತರ ಅಗತ್ಯ ವಸ್ತುಗಳ ಕವರ್ ಎಲ್ಲೂ ಎಸೆಯಬಾರದು ಎಂದು ಮುಂಚಿತವಾಗಿ ಸೂಚಿಸಲಾಗಿತ್ತು. ಹೀಗಾಗಿ ಅವುಗಳನ್ನು ಸೊಂಟಕ್ಕೆ ಕಟ್ಟಿದ್ದ ಕಿಟ್ ಗಳಲ್ಲಿ ಇರಿಸಿಕೊಂಡೇ ಓಟಗಾರರು ವಾಪಸ್ ಬಂದರು. ಪ್ಲಾಸ್ಟಿಕ್ ಬಳಸಬಾರದು ಎಂದು ಅಲ್ಟ್ರಾ ರನ್ ವೆಬ್ ಸೈಟ್ಟಿನಲ್ಲೂ ತಿಳಿಸಲಾಗಿತ್ತು.

ADVERTISEMENT

'ಪಶ್ಚಿಮ ಘಟ್ಟ ಮತ್ತು ಅದರೊಳಗಿನ ಮಲೆನಾಡು, ಒಟ್ಟಾರೆ ಪರಿಸರ ಚೆನ್ನಾಗಿರಬೇಕು, ಉಳಿಯಬೇಕು ಎಂಬುದು ಜಿರಿಮ್ ಸಂಸ್ಥೆಯ ಧ್ಯೇಯಗಳಲ್ಲಿ ಒಂದು. ಅದನ್ನು ಸಾಕಾರಗೊಳಿಸಲು ಪ್ರಯತ್ನ ಮಾಡುತ್ತಿದ್ದೇವೆ' ಎಂದು ಸಂಸ್ಥೆಯ ಸ್ಥಾಪಕ ಮತ್ತು ರೇಸ್ ನಿರ್ದೇಶಕ ಶ್ಯಾಮ್ ಸುಂದರ್ ಪಾಣಿ 'ಪ್ರಜಾವಾಣಿ'ಗೆ ತಿಳಿಸಿದರು.

'ಇಲ್ಲಿಗೆ ಬರುವ ಬಹುತೇಕ ಓಟಗಾರರಲ್ಲಿ ಪರಿಸರ ಕಾಳಜಿ ಇದೆ. ಅವರೆಲ್ಲ ಪ್ರಕೃತಿ ಪ್ರಿಯರು. ಆದ್ದರಿಂದ ಹೆಚ್ಚಿನದೇನೂ ಹೇಳುವ ಅಗತ್ಯವಿರುವುದಿಲ್ಲ. ಪ್ರಕೃತಿಗೆ ತೊಂದರೆಯಾಗುವ ಎಲ್ಲವನ್ನೂ ಅವರೆಲ್ಲರೂ ಪ್ರಜ್ಞಾಪೂರ್ವಕವಾಗಿ ದೂರ ಇರಿಸುತ್ತಾರೆ' ಎಂದು ಅವರು ಹೇಳಿದರು.

65ರ ಹರಯದ ಓಟದ 'ಡಾಕ್ಟರ್'

ಬಳ್ಳಾರಿಯ ಡಾ.ತಿಪ್ಪಾರೆಡ್ಡಿ ಅವರಿಗೆ ಓಟ ಬರೀ ವ್ಯಾಯಾಮವಲ್ಲ. ಆರೋಗ್ಯದ ಕುರಿತು ಅರಿವು‌ ಮೂಡಿಸುವ ಸಾಧನವೂ ಆಗಿದೆ.‌ ತಿಪ್ಪಾರೆಡ್ಡಿ ಅವರಿಗೆ ವಯಸ್ಸು 65 ವರ್ಷ. ಮಲೆನಾಡು ಅಲ್ಟ್ರಾದಲ್ಲಿ 30 ಕಿಮೀ ಓಟವನ್ನು 3.35 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಜೊತೆಯಲ್ಲಿ ಯುವಕರ ಗುಂಪಿನ ಪೈಕಿ ಕೆಲವರಿಗೆ ಗುರಿ ಮುಟ್ಟಲು ಸಾಧ್ಯವಾದದ್ದು ಡಾಕ್ಟರ್ ಗಿಂತ ನಂತರವೇ.

'10 ವರ್ಷಗಳಿಂದ ಓಡುತ್ತ ಇದ್ದೇನೆ. ಅದಕ್ಕೂ ಮೊದಲು ಓದು, ವೃತ್ತಿಯ ನಡುವೆ ಕ್ರೀಡಾ ಚಟುವಟಿಕೆಗೆ ಹೆಚ್ಚು ಸಮಯ ಮೀಸಲಿಡಲು ಆಗುತ್ತಿರಲಿಲ್ಲ. ರೋಗಿಗಳನ್ನು ನೋಡುತ್ತ ನೋಡುತ್ತ ಆಗೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮೂಡಿತು. ಚಟುವಟಿಕೆ ಇಲ್ಲದೆ ರೋಗಗಳನ್ನು ಆಹ್ವಾನಿಸುವವರಿಗೆ ಓಟ, ಸೈಕ್ಲಿಂಗ್ ಮೂಲಕ ಆರೋಗ್ಯದ ಪಾಠ ಮಾಡುತ್ತಿದ್ದೇನೆ' ಎಂದು ಬಳ್ಳಾರಿ ಸೈಕ್ಲಿಸ್ಟ್ ಮತ್ತು ರನ್ನರ್ಸ್ ಫೌಂಡೇಷನ್ ಸಮಿತಿ ಸದಸ್ಯರೂ ಆಗಿರುವ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ನಮ್ಮ ತಂಡದಲ್ಲಿರುವ ಕೆಲವರು ಓಡಲು ಆರಂಭಿಸಿದ ನಂತರ ಬಿಪಿ, ಮಧುಮೇಹ ಮುಂತಾದ ಸಮಸ್ಯೆ ಗಳಿಂದ‌ ಮುಕ್ತರಾಗಿದ್ದಾರೆ. ಆ್ಯಂಜಿಯೊಗ್ರಾಂ ಮಾಡಿಸಿಕೊಂಡವರು ಈಗ ಓಡುತ್ತಿದ್ದಾರೆ. ಎಲ್ಲರೂ ಆರೋಗ್ಯದ ಕಾಳಜಿ ಹೊಂದಿದರೆ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

'ಮಲೆನಾಡು ಅಲ್ಟ್ರಾಗೆ ಮೊದಲ ಬಾರಿ ಬಂದಿದ್ದೇ‌ನೆ. ಇಲ್ಲಿಯ ಅನುಭವ ಅಪೂರ್ವ. ಹೀಗಾಗಿ ಮತ್ತೆ ಮತ್ತೆ ಬರಬೇಕು ಎನಿಸುತ್ತಿದೆ' ಎಂದು ಅವರು ಹೇಳಿದರು.

ಯುವಕರ ತಂಡದೊಂದಿಗೆ ಡಾ ತಿಪ್ಪಾರೆಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.