ADVERTISEMENT

ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಶೃಂಗೇರಿ ಪೀಠದ ಶ್ರೀಗಳಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 17:02 IST
Last Updated 12 ಜನವರಿ 2024, 17:02 IST
ಆಹ್ವಾನ ಪತ್ರಿಕೆಯನ್ನು ವಿಧುಶೇಖರಭಾರತಿ ಸ್ವಾಮೀಜಿ ಪ್ರದರ್ಶಿಸಿದರು
ಆಹ್ವಾನ ಪತ್ರಿಕೆಯನ್ನು ವಿಧುಶೇಖರಭಾರತಿ ಸ್ವಾಮೀಜಿ ಪ್ರದರ್ಶಿಸಿದರು   

ಶೃಂಗೇರಿ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಮೂರ್ತಿಯ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಟ್ರಸ್ಟ್ ವತಿಯಿಂದ ಶೃಂಗೇರಿ ಶಾರದಾ ಪೀಠದ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ ಸ್ವಾಮೀಜಿಗೆ ನೀಡಲಾಯಿತು.

ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ದಿನ  ಜ. 22ರಂದು ಶೃಂಗೇರಿ ಶಾರದಾ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಮಠದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ನಡೆಯಲಿದೆ.  ಭಾರತೀತೀರ್ಥ ಸ್ವಾಮೀಜಿಯವರ ಸೂಚನೆಯಂತೆ  ಭಕ್ತರು ಶ್ರೀರಾಮ ಜಪ, ಭಜನೆ ಮಾಡುವರು. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ದೇವಸ್ಥಾನದಲ್ಲಿ ಶ್ರೀರಾಮತಾರಕ ಮಂತ್ರ ಜಪ, ಶ್ರೀರಾಮತಾರಕ ಹೋಮ ನಡೆಯಲಿದೆ. ಶಾರದಾ ಮಠದ ಶಕ್ತಿ ದೇವತೆಯಾದ ಕೆರೆದಂಡೆಯಲ್ಲಿರುವ ಕೆರೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮ ತಾರಕ ಹೋಮ ಹಾಗೂ ವಿಶೇಷ ಪೂಜೆ ನಡೆಯಲಿದೆ.

ಕುಂಭಾಭಿಷೇಕ: ಜ.22 ರಂದೇ ಶಾರದಾ ಪೀಠದ ಗುರುಗಳಾದ ವಿಧುಶೇಖರ ಭಾರತಿ ಸ್ವಾಮೀಜಿಯವರ ನೇತೃತ್ವದಲ್ಲಿ ರಾಮ ದೇವರ ಪುನರ್ ಅಷ್ಟಬಂಧ ಮತ್ತು ಕುಂಭಾಭಿಷೇಕ ನಡೆಯಲಿದೆ. ಕುಂಭಾಭಿಷೇಕದ ಅಂಗವಾಗಿ ಜ.21ರಂದು ಮಹಾ ಸಂಕಲ್ಪ, ಶಾಂತಿ ಹೋಮ, ಜಲಾಧಿವಾಸ, ಬಿಂಬಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ ಮುಂತಾದ ಕಾರ್ಯಕ್ರಮ ನಡೆಯಲಿವೆ.

ADVERTISEMENT

ಜ.22 ರಂದು ನಡೆಯುವ ಕುಂಬಾಭಿಷೇಕ ಕಾರ್ಯಕ್ರಮದಲ್ಲಿ ರತ್ನನ್ಯಾಸ, ಪ್ರತಿಷ್ಠೆ, ಅಷ್ಟಬಂಧ ಸಂಯೋಜನೆ, ಪ್ರತಿಷ್ಠಾಂಗ ಹೋಮ ನಡೆಯಲಿದೆ. ಬೆಳಗ್ಗೆ ರಾಮತಾರಕ ಹೋಮದ ಪೂರ್ಣಾಹುತಿಯಲ್ಲಿ ಗುರುಗಳು ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.