ಅಜ್ಜಂಪುರ: ‘ಉತ್ತಮ ಸಮಾಜ ಕಟ್ಟಲು, ಬಲಿಷ್ಠ ರಾಷ್ಟ್ರ ರೂಪಿಸಲು ಅಗತ್ಯವಾದ ಶಿಕ್ಷಣ ಇಂದು ವ್ಯಾಪಾರದ ಸರಕಾಗಿ ಪರಿವರ್ತನೆ ಆಗಿರುವುದು ಆತಂಕಕಾರಿ’ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನೊಳಂಬ ಲಿಂಗಾಯತ ಸಂಘ, ಗುರುಸಿದ್ದರಾಮೇಶ್ವರ ಭವನ ಉಪ ಸಮಿತಿ ಮತ್ತು ಜಿಜಿಹಳ್ಳಿಯ ದಾನಿ ಲಿಂಗೈಕ್ಯ ಜಿ.ಎಸ್. ಸಿದ್ದರಾಮಪ್ಪ(ಚನ್ನಬಸಪ್ಪ) ಸ್ಮರಣಾರ್ಥ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಶಾಲೆಗಳಿವೆ. ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹೀಗಿದ್ದರೂ ಸರ್ಕಾರಿ ಶಾಲೆಗಳು, ಮಕ್ಕಳ ಕೊರತೆ ಎದುರಿಸುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ 5 ವರ್ಷಗಳಲ್ಲಿ 6 ರಿಂದ 7 ಸಾವಿರ ಸರ್ಕಾರಿ ಶಾಲೆಗಳು ಮುಚ್ಚುವ ಸಾಧ್ಯತೆ ಇದೆ, ಇದು ದುರದೃಷ್ಟಕರ’ ಎಂದು ಆತಂಕ ವ್ಯಕ್ತಪಡಿಸಿದರು.
ನೊಳಂಬ ಲಿಂಗಾಯತ ಸಂಘದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಎಸ್.ಎಂ. ನಾಗರಾಜ್ ಮಾತನಾಡಿ,‘ ಸಮಾಜದ ವಿದ್ಯಾರ್ಥಿಗಳು, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಪ್ರೇರೇಪಿಸುವ ಉದ್ದೇಶದಿಂದ ಎಂಟು ವರ್ಷಗಳಿಂದ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿದ್ದೇವೆ’ ಎಂದರು.
ದಾನಿಗಳಾದ ತುಮಕೂರಿನ ಆದರ್ಶ ಕೆಮಿಕಲ್ಸ್ ವ್ಯವಸ್ಥಾಪಕ ಜಿ.ಎಸ್. ಒಂಕಾರ ಮೂರ್ತಿ ಮಾತನಾಡಿ, ‘ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಬಂದ ಅವಕಾಶವನ್ನು ಸರಿಯಾಗಿ ಬಳಸಿಕೊಂಡು, ಜೀವನದಲ್ಲಿ ಯಶಸ್ಸು ಸಾಧಿಸಬೇಕು’ ಎಂದು ಸಲಹೆ ನೀಡಿದರು.
ಯಳನಾಡು ಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮದೇಶೀಕೇಂದ್ರ ಸ್ವಾಮೀಜಿ ಮಾತನಾಡಿದರು. ನೊಳಂಬ ಲಿಂಗಾಯತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಮಾಜಿ ಶಾಸಕ ಡಿ.ಎಸ್. ಸುರೇಶ್, ನಿವೃತ್ತ ಐಪಿಎಸ್ ಅಧಿಕಾರಿ ಸಿದ್ದರಾಮಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೃವಕುಮಾರ್, ಶಂಬೈನೂರು ಆನಂದಪ್ಪ, ಎಂ.ಕೃಷ್ಣಮೂರ್ತಿ, ಜೆಡಿಎಸ್ ಮುಖಂಡ ಎಸ್.ಶಿವಾನಂದ್ ಮಾತನಾಡಿದರು.
ನೊಳಂಬ ಸಮಾಜ ಮುಖಂಡ ಕೆ.ಟಿ.ಶಶಿಧರ್, ಸಿದ್ದರಾಮೇಶ್ವರ ಭವನ ಸಮಿತಿ ಅಧ್ಯಕ್ಷ ಬಸಪ್ಪ, ಸಿದ್ದರಾಮಪ್ಪ, ಮಧುಸೂಧನ್, ಚನ್ನವೀರಪ್ಪ, ಒಂಕಾರಪ್ಪ ಇದ್ದರು.
ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದ ಜಿಲ್ಲೆಯ 300ಕ್ಕೂ ಹೆಚ್ಚು ನೊಳಂಬ ಸಮಾಜದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.