ADVERTISEMENT

ನರಸಿಂಹರಾಜಪುರ: ಅತಿವೃಷ್ಟಿ ಸಂತ್ರಸ್ತರಿಗೆ ಸಾಂತ್ವನ

ಮಡಬೂರು ಕಾಲೊನಿಗೆ ನ್ಯಾಯಾಧೀಶ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 3:10 IST
Last Updated 25 ಜುಲೈ 2021, 3:10 IST
ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಬೂರು ಕಾಲೋನಿಗೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಎಸ್.ಸೋಮ ಭೇಟಿ ನೀಡಿದರು.
ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಬೂರು ಕಾಲೋನಿಗೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಎಸ್.ಸೋಮ ಭೇಟಿ ನೀಡಿದರು.   

ನರಸಿಂಹರಾಜಪುರ: ‘ಅತಿಯಾದ ಮಳೆ ಯಿಂದ ಸಂತ್ರಸ್ತರಾದವರು ಯಾರೂ ಹೆದರುವ ಅವಶ್ಯಕತೆ ಇಲ್ಲ. ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ನಿಮ್ಮೊಂದಿಗಿದ್ದಾರೆ’ ಎಂದು ಚಿಕ್ಕಮಗಳೂರು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಎಸ್.ಸೋಮ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಿದರು.

ತಾಲ್ಲೂಕಿನ ವಿವಿಧೆಡೆ ಅತಿವೃಷ್ಟಿ ಸಂಭವಿಸಿದ ಸ್ಥಳಕ್ಕೆ ಶನಿವಾರ ಭೇಟಿ ನೀಡಿದರು. ಮಡಬೂರು ಕಾಲೊನಿಗೆ ತೆರಳಿ ಅಲ್ಲಿನ ಸಂತ್ರಸ್ತರನ್ನು ಭೇಟಿಯಾಗಿ, ‘ಅತಿಯಾಗಿ ಮಳೆ ಸುರಿಯುತ್ತಿದೆ. ಮನೆಯೊಳಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ. ಸಂತ್ರಸ್ತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು’ ಎಂದರು.

ತಾಲ್ಲೂಕು ಪಂಚಾಯಿತಿ ಇ.ಒ. ಎಸ್. ನಯನಾ ಮಾಹಿತಿ ನೀಡಿ, ‘ಮನೆಯೊಳಗೆ ನೀರು ನುಗ್ಗಿ ಹಾನಿಯಾದವರಿಗೆ ಬೇರೆಡೆ ಸ್ಥಳಾಂತರಿಸಿದ್ದು, ಎಲ್ಲರೂ ಅವರವರ ಸಂಬಂಧಿಕರು ಹಾಗೂ ಕೂಲಿ ಕೆಲಸ ಮಾಡುತ್ತಿದ್ದ ಮಾಲೀಕರ ಮನೆಗಳಲ್ಲಿ ವಾಸವಾಗಿರುತ್ತೇವೆ ಎಂದು ತಿಳಿಸಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ ಮುತ್ತಿನಕೊಪ್ಪ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅಡುಗೆಯವರನ್ನೂ ನಿಯೋಜಿಸಲಾಗಿದೆ. ಮನೆ ಕಳೆದು ಕೊಂಡವರು, ಆಹಾರದ ಸಮಸ್ಯೆ ಇರುವವರು ವಿದ್ಯಾರ್ಥಿನಿಲಯದಲ್ಲಿ ವಾಸ್ತವ್ಯ ಮಾಡಲು ಅವಕಾಶ ಕಲ್ಪಸಿಕೊಡಲಾಗಿದೆ’ ಎಂದರು.

ADVERTISEMENT

ನ್ಯಾಯಾಧೀಶ ಎ.ಎಸ್.ಸೋಮ ಮಾತನಾಡಿ, ‘ಬೇರೆಡೆ ಜಾಗ ನೀಡಲು ಅವಕಾಶವಿದೆಯೇ ಎಂಬುವುದರ ಬಗ್ಗೆ ಜಿಲ್ಲಾಧಿಕಾರಿ ಚರ್ಚಿಸಲಾಗುವುದು. ಸಂತ್ರಸ್ತರಿಗೆ ತಹಶೀಲ್ದಾರ್ ಅವರು ಆಹಾರದ ಕಿಟ್‍ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು’ ಎಂದರು.

ಶುಕ್ರವಾರ ಸುರಿದ ಭಾರಿ ಮಳೆಗೆ ಹಳ್ಳ ಉಕ್ಕಿ ಹರಿದು, ಅಕ್ಕಪಕ್ಕದ ತೋಟಗಳಿಗೆ ನೀರು ನುಗ್ಗುತ್ತಿದ್ದ ಶಂಕರಾಪುರದ ಸೇತುವೆ ಸ್ಥಳಕ್ಕೆ ಭೇಟಿ ನೀಡಿದರು. ಜಿಲ್ಲಾ ಗೃಹ ರಕ್ಷಕದಳದ ಕಮಾಂಡೆಂಟ್ ಅನಿಲ್‍ಕುಮಾರ್, ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರ, ಸದಸ್ಯ ರವಿ, ಪೊಲೀಸ್ ಎಂಜಿನಿಯರ್ ಮಂಜು ನಾಥ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವಿಂದ್ಯಾ, ನಾಗೇಶ್, ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ್, ಗ್ರಾಮಲೆಕ್ಕಿಗರಾದ ಅಂಜಲಿ, ಲೋಕೇಶ್, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.