ADVERTISEMENT

ಕಡೂರು | ರಸ್ತೆ ಬದಿ ಗೂಡಂಗಡಿ ತೆರವಿಗೆ ನಿರ್ಧಾರ: ಭಂಡಾರಿ ಶ್ರೀನಿವಾಸ

ಕಡೂರು ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಪ್ರಕಟಿಸಿದ ಅಧ್ಯಕ್ಷ: ಸದಸ್ಯರ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 6:01 IST
Last Updated 10 ಅಕ್ಟೋಬರ್ 2025, 6:01 IST
ಕಡೂರು ಪುರಸಭೆಯ ಕನಕ ಸಭಾಂಗಣದಲ್ಲಿ ಗುರುವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿದರು. ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಭಾಗವಹಿಸಿದ್ದರು
ಕಡೂರು ಪುರಸಭೆಯ ಕನಕ ಸಭಾಂಗಣದಲ್ಲಿ ಗುರುವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿದರು. ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಭಾಗವಹಿಸಿದ್ದರು   

ಕಡೂರು: ಬೆಳೆಯುತ್ತಿರುವ ಪಟ್ಟಣಕ್ಕೆ ಸ್ವಚ್ಛತೆ ಸವಾಲಾಗಿದ್ದು, ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ತಲೆ ಎತ್ತಿರುವ ಗೂಡಂಗಡಿ, ಪಾನಿಪುರಿ, ಟಿ–ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದ್ದಾರೆ ಎಂದು ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಪುರಸಭೆಯ ಕನಕ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದ ಕೋರ್ಟ್ ಮುಂಭಾಗದಲ್ಲಿರುವ ರಸ್ತೆ, ಬಸ್ ನಿಲ್ದಾಣದಿಂದ ಪುರಸಭೆಗೆ ತೆರಳುವ ರಸ್ತೆ, ಕದಂಬ ವೃತ್ತ, ಗಣಪತಿ ಪೆಂಡಾಲ್ ಮುಂದೆ ಹಲವರು ಗೂಡಂಗಡಿ, ಪಾನಿಪುರಿ, ಟಿ ಅಂಗಡಿ ಇರಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಹಾಗೂ ಸ್ವಚ್ಛತೆಗೆ ತೊಂದರೆಯಾಗುತ್ತಿರುವ ದೂರುಗಳು ಬಂದಿವೆ. ಆಯ್ದ ಭಾಗಗಳಲ್ಲಿ ಆಡಚಣೆ ಉಂಟು ಮಾಡುತ್ತಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ಸದಸ್ಯರು ಸಮ್ಮತಿಸಬೇಕು ಎಂದು ಎಂದು ಕೋರಿ ಒಪ್ಪಿಗೆ ಪಡೆದರು.

ADVERTISEMENT

ಸಂಚಾರ ವ್ಯವಸ್ಥೆ ಸರಾಗವಾಗಿಸಲು ಪುರಸಭೆ ಆಡಳಿತವೂ ಕೈಜೋಡಿಸಬೇಕೆಂದು ಕಡೂರು ಪೊಲೀಸರು ಮನವಿ ಮಾಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೂ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡುವಂತೆ ಸೂಚಿಸಿದ್ದಾರೆ. ಈ ಕಾರಣದಿಂದ ಗೂಡಂಗಡಿ ತೆರವು ಕಾರ್ಯ ಶೀಘ್ರವೇ ನಡೆಯಲಿದೆ ಎಂದರು.

ಸದಸ್ಯೆ ಸುಧಾ ಉಮೇಶ್, ಪ್ರೇಮಜ್ಯೋತಿ ಶಾಲೆಯ ಪಕ್ಕದಲ್ಲಿ ಚರಂಡಿ ನೀರು ಹರಿಯುತ್ತಿದ್ದು ಸಮಸ್ಯೆಯಾಗುತ್ತಿದೆ. ಅಲ್ಲಿ ಈ ಮೊದಲು ಇದ್ದ ರಾಜಕಾಲುವೆ ಮುಚ್ಚಿ ನೀರು ಹರಿಯದಂತೆ ಮಾಡಿದ್ದಾರೆ. ಈ ಬಗ್ಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.

ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಉತ್ತರಿಸಿ, ಯಾವುದೇ ರಾಜಕಾಲುವೆಗೆ ಚರಂಡಿ ನೀರು ಹರಿಸುವಂತಿಲ್ಲ. ಅದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದರು.

ಅಧ್ಯಕ್ಷ ಮಧ್ಯೆ ಪ್ರವೇಶಿಸಿ, ಏನು ಬದಲಾವಣೆ ಮಾಡಬಹುದು ಎಂದು ಕೇಳಿದರು.

ಶ್ರೀನಿವಾಸ್ ಉತ್ತರಿಸಿ, ಹೊಸ ಚರಂಡಿ ನಿರ್ಮಿಸಿ ಕೊಳಚೆ ನೀರನ್ನು ಹರಿಯಲು ಬಿಡಬೇಕು ಎಂದರು.

ಅಂದಾಜುಪಟ್ಟಿ ತಯಾರಿಸಿ ಚರಂಡಿ ಮಾಡಿ ಎಂದು ಅಧ್ಯಕ್ಷ ಸೂಚಿಸಿದರು.

ಸದಸ್ಯೆ ಹಾಲಮ್ಮ, ವೀರಭದ್ರೇಶ್ವರ ದೇವಾಲಯದಿಂದ ಸಿದ್ದನಾಯ್ಕ ಅವರ ಮನೆಯವರೆಗಿನ ರಸ್ತೆ ‌ಹದಗೆಟ್ಟಿದ್ದು, ಕನಿಷ್ಠ ಮಣ್ಣನ್ನಾದರೂ ಹಾಕಿಸಿ ಎಂದು ಮನವಿ ಮಾಡಿದರು.

ಉಪಾಧ್ಯಕ್ಷೆ ಮಂಜುಳಾಚಂದ್ರು, ಸದಸ್ಯರಾದ ಸೋಮಣ್ಣ, ಮರುಗುದ್ದಿ ಮನು,ಯತೀಶ್, ವಿಜಯಾ ಚಿನ್ನರಾಜ್, ಗೋವಿಂದರಾಜ್, ಲತಾ, ಜ್ಯೋತಿ, ಹಾಲಮ್ಮ, ಪದ್ಮ, ಸುಧಾ, ವಿಜಯಲಕ್ಷ್ಮಿ, ಪುಷ್ಪಲತಾ, ಕಮಲ, ಶ್ರೀಕಾಂತ್, ಇಕ್ಬಾಲ್, ಯಾಸೀನ್, ಮೋಹನ್‌ಕುಮಾರ್, ಈರಳ್ಳಿ ರಮೇಶ್, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಎಂಜಿನಿಯರ್ ಶ್ರೇಯಸ್, ತಿಮ್ಮಯ್ಯ ಹಾಗೂ ಪುರಸಭೆ ಸಿಬ್ಬಂದಿ ಭಾಗವಹಿಸಿದ್ದರು.

ಪಟ್ಟಣದಲ್ಲಿ ಸ್ವಚ್ಛತೆಯೇ ಸವಾಲು ಹೊಸ ಚರಂಡಿ ನಿರ್ಮಿಸಲು ಸೂಚನೆ ಸಮರ್ಪಕ ಸಂಚಾರ ವ್ಯವಸ್ಥೆಗೆ ಕ್ರಮ

ಹೂವಿನ ಪ್ಯಾವರಾ: ಪರ್ಯಾಯ ಸ್ಥಳ ಪಟ್ಟಣದ ಕಲ್ಲೇಶ್ವರ ಟಿ.ವಿ ಸೆಂಟರ್ ಮುಂಭಾಗದಲ್ಲಿ ಇರುವ ರಸ್ತೆಯ ಮೇಲೆ ವ್ಯಾಪಾರಿಗಳು ಬೆಳಿಗ್ಗೆ ಮತ್ತು ಸಂಜೆ 4 ಗಂಟೆ ನಂತರ ಹೂವಿನ ವ್ಯಾಪಾರ ಮಾಡುವುದರಿಂದ  ಸಮಸ್ಯೆಯಾಗುತ್ತಿದೆ. ದ್ವಿಚಕ್ರವಾಹನಗಳೂ ಓಡಾಡಲು ಕಷ್ಟವಾಗುತ್ತಿದ್ದು ಪದೇಪದೇ ಸಂಚಾರ ತೊಂದರೆಯಾಗುತ್ತಿದೆ.  ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿರುವ ಜಾಗದಲ್ಲಿ ಹೂವಿನ ವ್ಯಾಪಾರಿಗಳಿಗೆ ಪರ್ಯಾಯ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ರೈತರು ಮತ್ತು ಹೂವಿನ ವ್ಯಾಪಾರಿಗಳು ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ವ್ಯಾಪಾರ ಮಾಡಿಕೊಳ್ಳಲು ಅವಕಾಶವನ್ನು ಪುರಸಭೆ ಅವಕಾಶ ಕಲ್ಪಿಸಲಿದೆ. ಹೂವಿನ ವ್ಯಾಪಾರಿಗಳು ಸಹಕಾರ ನೀಡಬೇಕು ಎಂದು ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.