ಕಡೂರು: ತಾಲ್ಲೂಕಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಕೊರತೆ ಪರಿಣಾಮ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ರಾಗಿ, ಜೋಳ, ಶೇಂಗಾ, ಹೆಸರು, ಹತ್ತಿ, ಮೆಕ್ಕೆಜೋಳ ಫಸಲು ಬಾಡಲು ಆರಂಭಿಸಿದ್ದು, ವಾರದ ಒಳಗೆ ಮಳೆ ಆಗದಿದ್ದರೆ ಬೆಳೆಗಳು ಸಂಪೂರ್ಣ ಒಣಗುವ ಸ್ಥಿತಿಯಿದೆ.
ತಾಲ್ಲೂಕಿನಲ್ಲಿ ಈ ಬಾರಿ ರಾಗಿ ಗುರಿ ಮೀರಿ ಬಿತ್ತನೆಯಾಗಿದ್ದು, ಅಂದಾಜು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದ ಆಹಾರಧಾನ್ಯವಾಗಿದೆ. ಮುಸುಕಿನಜೋಳ, ಹೆಸರು, ಶೇಂಗಾ, ಹತ್ತಿ ಬೆಳೆಗಳು ಅಂದಾಜು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿವೆ. ಆಗಸ್ಟ್ ತಿಂಗಳಿನಲ್ಲಿ ಸಾಧಾರಣ ಮಳೆಯಾಗಿದ್ದು, ಹಿರೇನಲ್ಲೂರು ಹಾಗೂ ಸಖರಾಯಪಟ್ಟಣ, ಯಗಟಿ ಹೋಬಳಿಗಳಲ್ಲಿ ಮಾತ್ರ ಮಳೆ ಕೊರತೆಯಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ತಾಲ್ಲೂಕಿನ ಎಲ್ಲ ಹೋಬಳಿಯಲ್ಲಿಯೂ ಮಳೆ ಕೊರತೆಯಾಗಿದೆ.
ಸಿಂಗಟಗೆರೆಯ ಪಂಚನಹಳ್ಳಿ ಭಾಗದಲ್ಲಿ ಕಳೆದ ಎರಡು ದಿನದಿಂದ ಅಲ್ಪ ಮಳೆಯಾದ ಪರಿಣಾಮ ಬೆಳೆ ಹಸಿರಾಗಿರುವುದನ್ನು ಬಿಟ್ಟರೆ ಉಳಿದೆಡೆ ಬೆಳೆ ಬಾಡಲು ಆರಂಭಿಸಿದೆ. ಬಾಡುತ್ತಿರುವ ಫಸಲು ಉಳಿಸಲು ಕೊಳವೆಬಾವಿ ಸೌಲಭ್ಯ ಇಲ್ಲದ ರೈತರು ಅಕ್ಕಪಕ್ಕದ ಜಮೀನಿಗಳಿಂದ ಹಣತೆತ್ತು ನೀರು ಪಡೆದು ಬೆಳೆ ಉಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
₹4,800 ರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವುದಾಗಿ ಸರ್ಕಾರ ಪ್ರಕಟಿಸಿದ ಬಳಿಕ ರೈತರಲ್ಲಿ ಉತ್ಸಾಹ ಹೆಚ್ಚಿದ್ದು, ಒಂದಷ್ಟು ಹಣ ಕೈಸೇರಬಹುದು ಎನ್ನುವ ನಿರೀಕ್ಷೆಯಲ್ಲಿ ಬಹಳಷ್ಟು ರೈತರು ಮಳೆಯಾಶ್ರಿತ ಬೆಳೆಯಾಗಿ ರಾಗಿ ಬಿತ್ತನೆ ಮಾಡಿದ್ದಾರೆ. ಕೃಷಿ ಇಲಾಖೆಯ ಮಾಹಿತಿಯಂತೆ ಕಸಬಾ ಹೋಬಳಿ 5500 ಹೆಕ್ಟೇರ್, ಬೀರೂರು 4000, ಹಿರೇನಲ್ಲೂರು 2600, ಯಗಟಿ 7400, ಸಿಂಗಟಗೆರೆ 5000, ಸಖರಾಯಪಟ್ಟಣ 6500, ಪಂಚನಹಳ್ಳಿ 5500,ಚೌಳಹಿರಿಯೂರು 3000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ.
ಕೃಷಿ ಇಲಾಖೆಯು 2,700 ಕ್ವಿಂಟಲ್ ರಾಗಿ ಬಿತ್ತನೆ ಬೀಜವನ್ನು ವಿತರಿಸಿದೆ. ಕಡೂರು ತಾಲ್ಲೂಕಿನಲ್ಲಿ ಈವರೆಗೆ 4,900 ಮೆಟ್ರಿಕ್ ಟನ್ ಯೂರಿಯಾ, 1,735 ಮೆಟ್ರಿಕ್ ಟನ್ ಡಿಎಪಿ, 2575 ಮೆಟ್ರಿಕ್ ಟನ್ ಪೊಟ್ಯಾಷ್,7500 ಮೆಟ್ರಿಕ್ ಟನ್ ಸಂಯುಕ್ತ ಗೊಬ್ಬರ, (10-26-26, 20-20-20, 17-17-17,17-16-17,ಇತರೆ), ಫಾಸ್ಪೇಟ್ 650 ಮೆಟ್ರಿಕ್ ಟನ್‌ನಷ್ಟು ಪೂರೈಕೆಯಾಗಿದೆ.
‘ಮಳೆ ನಂಬಿ ತಾಲ್ಲೂಕಿನಾದ್ಯಂತ ಬಹಳಷ್ಟು ರೈತರು ರಾಗಿ ಮತ್ತಿತರ ಬೆಳೆಗಳನ್ನು ಬಿತ್ತಿದ್ದಾರೆ. ಆದರೆ ಸೆಪ್ಟೆಂಬರ್‌ನಲ್ಲಿ ಮಳೆಯೇ ಬಂದಿಲ್ಲ. ಹೀಗಾದರೆ ಜನ ಜಾನುವಾರುಗಳಿಗೆ ಸಂಕಷ್ಟ ಒದಗಲಿದೆ’ ಎಂದು ಜೋಡಿತಿಮ್ಮಾಪುರದ ಕೃಷಿಕ ಗೋವಿಂದಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಹಿರೇನಲ್ಲೂರು ಹೋಬಳಿಯಲ್ಲಿ ಬೆಲೆ ಇಲ್ಲದೆ ಈರುಳ್ಳಿ ಹಾಗೂ ಮಳೆ ಇಲ್ಲದೆ ರಾಗಿ ಎರಡೂ ಸಂಕಷ್ಟಕ್ಕೆ ಸಿಲುಕಿ ಪರ್ಯಾಯವಿಲ್ಲದ ರೈತರ ಬದುಕನ್ನೂ ನುಂಗಿ ಹಾಕಿವೆ ಎಂಬುದು ಉಮಾಮಹೇಶ್ವರಪ್ಪ ಅವರ ಅಳಲು.
‘ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಕಡೂರು ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಜಿಲ್ಲೆಯಲ್ಲಿಯೇ ಅಧಿಕವಾಗಿದೆ. ಕೊಳವೆಬಾವಿ ಸೌಲಭ್ಯ ಇರುವ ಸಾಕಷ್ಟು ರೈತರು ಕೃಷಿ ಇಲಾಖೆ ನೀಡಿದ ತುಂತುರು ನೀರಾವರಿ ಸೌಲಭ್ಯ ಬಳಸಿ ಬೆಳೆ ರಕ್ಷಣೆಗೆ ಮುಂದಾಗುವ ನಿರೀಕ್ಷೆ ಇದೆ. ಮಳೆ ಬರುವ ಆಶಾಭಾವನೆ ಇದ್ದು, ಕೇವಲ ಒಂದೆರಡು ಉತ್ತಮ ಮಳೆಯು ರೈತರ ಬದುಕನ್ನು ಹಸನಾಗಿಸಬಲ್ಲದು’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಎಂ.ಅಶೋಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.