ADVERTISEMENT

ಇನ್ನೂ 1,485 ಅನರ್ಹರಿಗೆ ಅಕ್ರಮ ಪಿಂಚಣಿ

ಸರ್ಕಾರದ ಬೊಕ್ಕಸಕ್ಕೆ ₹2.17 ಕೋಟಿ ನಷ್ಟ: ಕ್ರಿಮಿನಲ್ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:07 IST
Last Updated 13 ಡಿಸೆಂಬರ್ 2025, 4:07 IST

ಚಿಕ್ಕಮಗಳೂರು: ಕಡೂರು ತಾಲ್ಲೂಕಿನಲ್ಲಿ ಮಧ್ಯ ವಯಸ್ಸಿನ 64 ಜನರಿಗೆ ಪಿಂಚಣಿ ಮಂಜೂರು ಮಾಡಿರುವ ಆರೋಪದಲ್ಲಿ 11 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇದರ ಬೆನ್ನಲ್ಲೇ ಇನ್ನೂ 1,485 ಜನರಿಗೆ ಅಕ್ರಮ ಪಿಂಚಣಿ ಮಂಜೂರಾಗಿರುವುದು ಬಹಿರಂಗವಾಗಿದೆ. ಇದರಿಂದ ₹2.17 ಕೋಟಿ ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಎನ್‌.ಕೆ.(ನಾಡ ಕಚೇರಿ)–5 ತಂತ್ರಾಂಶದಲ್ಲಿ ಅಕ್ರಮವಾಗಿ 64 ಜನರಿಗೆ ಪಿಂಚಣಿ ಮಂಜೂರು ಮಾಡಿ ಸರ್ಕಾರಕ್ಕೆ ₹9.03 ಲಕ್ಷ ನಷ್ಟ ಮಾಡಿದ್ದಾರೆ ಎಂದು ತಹಶೀಲ್ದಾರ್ ಮೊದಲ ವರದಿಯಲ್ಲಿ ತಿಳಿಸಿದ್ದರು. ಅದನ್ನು ಆಧರಿಸಿ ತನಿಖೆ ನಡೆಸಿದ್ದ ಕಂದಾಯ ಇಲಾಖೆ, 11 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.

ತನಿಖೆಯ ಮುಂದುವರಿದ ಭಾಗವಾಗಿ ಮತ್ತೊಂದು ವರದಿಯನ್ನು ಕಡೂರು ತಹಶೀಲ್ದಾರ್ ಸಲ್ಲಿಸಿದ್ದಾರೆ. ಕಡೂರು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಎನ್.ಕೆ.–4 ತಂತ್ರಾಂಶದಲ್ಲೂ 1,485 ಅನರ್ಹರಿಗೆ ಅಕ್ರಮವಾಗಿ ಪಿಂಚಣಿ ಮಂಜೂರಾಗಿ ಸರ್ಕಾರಕ್ಕೆ ₹2.17 ಕೋಟಿ ನಷ್ಟವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಈ ಸಂಬಂಧ ಹಿಂದಿನ ಶಿರಸ್ತೇದಾರ್ ಕಲ್ಮರುಡಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ADVERTISEMENT

64 ಅನರ್ಹರಿಗೆ ಪಿಂಚಣಿ ಮಂಜೂರು ಮಾಡಿರುವ ಪ್ರಕರಣದಲ್ಲೂ ಕಲ್ಮರುಡಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೇ ವಿಷಯ ನಿರ್ವಾಹಕ ಗಿರೀಶ್, ಕಂದಾಯ ಅಧಿಕಾರಿ ರವಿಕುಮಾರ್, ಗ್ರಾಮ ಆಡಳಿತಾಧಿಕಾರಿಗಳಾದ ಹನುಮಂತಪ್ಪ, ಕಾವ್ಯಾ ಟಿ.ಎಂ., ಕುಮಾರ್ ಜಿ.ಎಂ., ಲಿಂಗರಾಜು ಕೆ., ರವಿ ಕೆ.ಆರ್., ಎಸ್.ಎಂ.ಚನ್ನಬಸವಯ್ಯ, ನಿರ್ಮಲಾ ಟಿ.ಎಸ್., ರವಿಚಂದ್ರ ಎಸ್.ಗೊಗಿ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸರ್ಕಾರಕ್ಕೆ ವಂಚನೆ, ನಕಲಿ ದಾಖಲೆ ಸೃಷ್ಟಿ, ವಂಚಿಸುವ ಉದ್ದೇಶದಿಂದಲೇ ದಾಖಲೆಗಳ ದೃಷ್ಟಿ, ಕರ್ತವ್ಯ ಲೋಪ ಸೇರಿ ಹಲವು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.

‘ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧಾಪ್ಯ ವೇತನವನ್ನು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿನವರು ಮಾತ್ರ ಈ ಯೋಜನೆಗೆ ಅರ್ಹರು. ಆದರೆ, ಸಾಮಾಜಿಕ ಭದ್ರತಾ ವಿಭಾಗದ ಶಿರಸ್ತೇದಾರ್ (ಉಪತಹಶೀಲ್ದಾರ್) ಬಿ.ಸಿ.ಕಲ್ಮರುಡಪ್ಪ ಅವರು ಲಾಗಿನ್ ದುರ್ಬಳಕೆ ಮಾಡಿಕೊಂಡು 35–40 ವಯಸ್ಸಿನವರಿಗೂ ವೇತನ ಮಂಜೂರು ಮಾಡಿದ್ದಾರೆ’ ಎಂಬ ದೂರುಗಳು ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿದ್ದವು. ಅಂದಿನ ಉಪವಿಭಾಗಾಧಿಕಾರಿ ಅವರಿಂದ ಪ್ರಾಥಮಿಕ ತನಿಖೆ ಮಾಡಿಸಿದ್ದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಕಲ್ಮರುಡಪ್ಪ ಅವರನ್ನು ಅಮಾನತು ಮಾಡಿದ್ದರು. ವಿಚಾರಣೆ ನಡೆಸಿದ್ದ ತಹಶೀಲ್ದಾರ್‌ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಮಧ್ಯ ವಯಸ್ಸಿನವರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಿರುವ ಬಗ್ಗೆ 2024ರ ಸೆ.19ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.