ADVERTISEMENT

ಸತತ ಮಳೆ: ಅಡಿಕೆಗೆ ಕೊಳೆರೋಗ ಬಾಧೆ

ಮೆಣಸಿನ ಬಳ್ಳಿಯ ಬೇರಿಗೂ ಹಾನಿ: ಬೆಳೆಗಾರರಿಗೆ ಆತಂಕ

ರವಿ ಕೆಳಂಗಡಿ
Published 30 ಆಗಸ್ಟ್ 2025, 6:21 IST
Last Updated 30 ಆಗಸ್ಟ್ 2025, 6:21 IST
ಕಳಸ ಸಮೀಪದ ಕಳಕೋಡು ಗ್ರಾಮದಲ್ಲಿ ಅಡಿಕೆ ಮರದ ಕೆಳಗೆ ಉದುರಿ ಬಿದ್ದಿರುವ ಕೊಳೆ ಕಾಯಿ
ಕಳಸ ಸಮೀಪದ ಕಳಕೋಡು ಗ್ರಾಮದಲ್ಲಿ ಅಡಿಕೆ ಮರದ ಕೆಳಗೆ ಉದುರಿ ಬಿದ್ದಿರುವ ಕೊಳೆ ಕಾಯಿ   

ಕಳಸ: ಮೇ ತಿಂಗಳ ಮಧ್ಯಭಾಗದಿಂದ ಆರಂಭವಾದ ಮಳೆ ಈಗಾಗಲೇ ವರ್ಷದ ವಾಡಿಕೆಯ ಪ್ರಮಾಣವನ್ನು ದಾಟಿದೆ. ಮೂರುವರೆ ತಿಂಗಳ ಸತತ ಮಳೆಯಿಂದಾಗಿ ತಾಲ್ಲೂಕಿನ ವಾಣಿಜ್ಯ ಬೆಳೆಗಳಿಗೆ ಸಂಕಷ್ಟ ಎದುರಾಗಿದೆ. ಕಾಫಿ ಫಸಲು ಈಗಾಗಲೇ ನೆಲಕಚ್ಚಿದ್ದು, ಮೆಣಸಿನ ಬಳ್ಳಿಯ ಬೇರು ಕೊಳೆಯುತ್ತಿದೆ.

ಕಳಸ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಳೆರೋಗ ವ್ಯಾಪಿಸುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಜೂನ್ ಮೊದಲ ವಾರ ಮಳೆ ಬಿಡುವು ನೀಡಿದ್ದಾಗ ಬಹುತೇಕ ಬೆಳೆಗಾರರು ಅಡಿಕೆಗೆ ಔಷಧಿ ಸಿಂಪಡಿಸಿದರು. ಆನಂತರ ಜುಲೈ ತಿಂಗಳ ಕೊನೆಯಲ್ಲಿ ಮಳೆ ಬಿಡುವು ನೀಡದಿದ್ದರೂ ಔಷಧಿ ಸಿಂಪಡಿಸುವ ಭಗೀರಥ ಯತ್ನವನ್ನು ಬೆಳೆಗಾರರು ನಡಸಿದರು. ಆದರೆ, ನಂತರದ ಒಂದು ತಿಂಗಳ ಸತತ ಮಳೆಯಿಂದ ಮಣ್ಣಿನ ತೇವಾಂಶ ಹೆಚ್ಚಾಗಿದ್ದು, ಕೊಳೆರೋಗ ಬಹುತೇಕ ತೋಟಗಳಲ್ಲಿ ಕಾಣಿಸಿಕೊಂಡಿದೆ.

‘ಎರಡು ತಿಂಗಳಲ್ಲಿ ಎರಡು ಸ್ಪ್ರೇ ಮಾಡಿದ್ದೆವು. ಹಬ್ಬ ಕಳೆದ ನಂತರ ಮತ್ತೊಂದು ಸ್ಪ್ರೇ ಮಾಡಬೇಕು ಎಂದುಕೊಂಡಿದ್ದೆವು. ಈಗಾಗಲೇ ಅಡಿಕೆಗೆ ಕೊಳೆ ರೋಗ ಶುರು ಆಗಿದೆ’ ಎಂದು ಅಬ್ಬುಗುಡಿಗೆಯ ಸಣ್ಣ ಕೃಷಿಕ ಅನೂಪ್ ದುಃಖದಿಂದ ಹೇಳಿದರು.

ADVERTISEMENT

ಕಳೆದ ವರ್ಷ ಕೊಳೆ ರೋಗದಿಂದ ಶೇ 60ರಷ್ಟು ಫಸಲು ಕಳೆದುಕೊಂಡಿದ್ದ ಅವರು, ಈ ಬಾರಿ ಫಸಲು ಉಳಿಸಿಕೊಳ್ಳಲು ಸಕಾಲಿಕ ಔಷಧಿ ಸಿಂಪಡಿಸಿದರೂ ಮಳೆ ಕೊಳೆರೋಗ ಹರಡಲು ಪೂರಕ ವಾತಾವರಣ ಕಲ್ಪಿಸುತ್ತಿದೆ.

ಸಾಮಾನ್ಯವಾಗಿ ಆಗಸ್ಟ್ 15ರ ನಂತರ ಮಳೆ ಪ್ರಮಾಣ ಕಡಿಮೆಯಾಗಿ ಅಲ್ಲೊಂದು ಇಲ್ಲೊಂದು ಅಡ್ಡ ಮಳೆ ಸುರಿಯುವುದು ವಾಡಿಕೆ. ಆದರೆ, ಕಳೆದ ಮೂರು ದಿನಗಳಿಂದ ಪ್ರತಿದಿನವೂ ಭಾರಿ ಮಳೆ ಸುರಿಯುತ್ತಿದೆ. ಇದು ಅಡಿಕೆ ತೋಟಗಳ ಚರಂಡಿಯಲ್ಲಿ ನೀರು ನಿಲ್ಲಲು ಕಾರಣವಾಗಿದೆ. ಅತಿಯಾದ ತೇವಾಂಶದಿಂದ ಕೊಳೆರೋಗ ಬಹುಬೇಗನೆ ತೋಟಕ್ಕೆ ವ್ಯಾಪಿಸುತ್ತದೆ.

ಈ ವರ್ಷ ಅಡಿಕೆ ಫಸಲು ಕೂಡ ಕಡಿಮೆಯೇ ಇದೆ. ಕಳೆದ ವರ್ಷದ ಅಡಿಕೆಗೆ ಈಗ ಉತ್ತಮ ಧಾರಣೆ ಬಂದಿದೆ. ಆದರೆ, ಮಳೆ ಅಡಿಕೆ ಫಸಲು ಕೈಗೆ ಸಿಗಲು ಬಿಡುತ್ತದೋ ಇಲ್ಲವೋ ಎಂಬ ಭಯ ಬೆಳೆಗಾರರಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.