ಕಳಸ: ತಾಲ್ಲೂಕಿನ ಗಡಿ ಪ್ರದೇಶವಾದ ಎಳನೀರು ಸಮೀಪದ ಬಂಗರಬಲಿಗೆಯ ಗಿರಿಜನ ಮಲೆಕುಡಿಯರ 5 ಮಕ್ಕಳು ಪ್ರತಿದಿನವೂ ಸಂಸೆಯ ಶಾಲೆಗೆ ಬರಲು 10 ಕಿ.ಮೀ ಪಾದಯಾತ್ರೆ ಮಾಡುತ್ತಾರೆ. ಬಂಗರಬಲಿಗೆ ಗ್ರಾಮಕ್ಕೆ ಈವರೆಗೂ ಸಂಪರ್ಕ ರಸ್ತೆ ಇಲ್ಲದಿರುವುದು ಈ ಮಕ್ಕಳ ಪ್ರಯಾಸಕರ ಬವಣೆಗೆ ಕಾರಣವಾಗಿದೆ.
ಈ ಗಿರಿಜನ ಕಾಲೊನಿ ಬೆಳ್ತಂಗಡಿ ತಾಲ್ಲೂಕಿಗೆ ಸೇರಿದ್ದು, ಬೆಳ್ತಂಗಡಿಗೆ 120 ಕಿ.ಮೀ ದೂರ ಆಗುತ್ತದೆ. ಗ್ರಾ.ಪಂ. ಮಲವಂತಿಗೆ 110 ಕಿ.ಮೀ ಆಗುತ್ತದೆ. ಇದರಿಂದ ಈ ಮಲೆಕುಡಿಯರು ಕಳಸ ತಾಲ್ಲೂಕಿನ ಶಾಲೆ, ಆಸ್ಪತ್ರೆಯನ್ನೇ ನೆಚ್ಚಿದ್ದಾರೆ.
ಸಂಸೆಯಿಂದ 3ಕಿ.ಮೀ. ದೂರದ ಎಳನೀರು ಗಡಿಯ ನಂತರ ಬಂಗರಬಲಿಗೆಗೆ ಮತ್ತೆ 4ಕಿ.ಮೀ ಪ್ರಯಾಣ ಬೆಳೆಸಬೇಕು. ಆದರೆ, ಈ ಗ್ರಾಮದ ರಸ್ತೆ ಅಭಿವೃದ್ಧಿಯಾಗದೆ ಗಿರಿಜನರು ಮೂಲ ಸೌಲಭ್ಯಗಳ ಕೊರತೆಯಿಂದ ವಂಚಿತರಾಗಿದ್ದಾರೆ. ರಸ್ತೆ, ಮನೆ, ವಿದ್ಯುತ್ ಸೌಕರ್ಯ ಇಲ್ಲದೆ 12 ಕುಟುಂಬಗಳು ದಯನೀಯ ಸ್ಥಿತಿಯಲ್ಲಿವೆ. ಅಲ್ಪ ಸ್ವಲ್ಪ ಕೃಷಿ ಜಮೀನು ಹೊಂದಿದ್ದರೂ ವನ್ಯಮೃಗಗಳ ಹಾವಳಿಯಿಂದ ಹೊಟ್ಟೆ ತುಂಬಿಸಿಕೊಳ್ಳುವುದೇ ಸವಾಲಾಗಿದೆ.
ತಲಕಾಡಿನ ಗಂಗರಸರು ಯುದ್ಧ ಸೋತಾಗ ಇಲ್ಲಿ ಬಂದು ತಲೆಮರೆಸಿಕೊಂಡಿದ್ದರು ಎಂಬ ಬಗ್ಗೆ ಇತಿಹಾಸ ಇದೆ. ಇಲ್ಲಿನ ಬ್ರಹ್ಮದೇವರ ಪೀಠ ಜೈನರ ಶ್ರದ್ಧಾಕೇಂದ್ರವಾಗಿದೆ. ಆದರೂ ಗ್ರಾಮಕ್ಕೆ ಸೂಕ್ತ ರಸ್ತೆ ಸೌಲಭ್ಯ ಇಲ್ಲದಿರುವುದು ಅಚ್ಚರಿ ತರುತ್ತದೆ.
ಇನ್ನು ಎಳನೀರಿನಿಂದ 5ಕಿ.ಮೀ. ದೂರದ ಗುತ್ಯಡ್ಕ ಪ್ರದೇಶಕ್ಕೂ ರಸ್ತೆ ಸಮಸ್ಯೆ ತೀವ್ರವಾಗಿದೆ. ನೇತ್ರಾವತಿ ಚಾರಣಕ್ಕೆ ಹೋಗುವ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ರಸ್ತೆ ಕಾರಣಕ್ಕೆ ಘರ್ಷಣೆ ನಡೆಯುತ್ತಲೇ ಇರುತ್ತದೆ. 70 ಕೃಷಿಕರ ಮನೆಗಳು ಇರುವ ಗುತ್ಯಡ್ಕ ಗ್ರಾಮಕ್ಕೆ ಸರ್ವ ಋತು ರಸ್ತೆಯ ಅಗತ್ಯ ಇದೆ ಎಂದು ಗ್ರಾಮಸ್ಥರು ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಇದ್ದಾರೆ.
ಸಂಸೆ ಗ್ರಾಮದಿಂದ ಎಳನೀರು ಮೂಲಕ ಬಂಗರಬಲಿಗೆ ಮತ್ತು ಗುತ್ಯಡ್ಕ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಬೇಕಿದೆ. ಇದರಿಂದ ಒಂದು ಗಿರಿಜನ ಗ್ರಾಮ ಮತ್ತು ಪ್ರವಾಸಿ ಕೇಂದ್ರಕ್ಕೆ ನ್ಯಾಯ ಸಿಗುತ್ತದೆ. ಈ ರಸ್ತೆಗೆ ಸರ್ಕಾರ ತುರ್ತಾಗಿ ಅನುಮೋದನೆ ನೀಡಬೇಕಿದೆ ಎಂದು ಎಳನೀರು ಗ್ರಾಮಸ್ಥ ಕೀರ್ತಿ ಜೈನ್ ಒತ್ತಾಯಿದ್ದಾರೆ.
ಈ ರಸ್ತೆಗಳ ಜೊತೆಗೆ ಎಳನೀರು-ದಿಡಪೆ-ಕಾಜೂರು ರಸ್ತೆ ಅಭಿವೃದ್ಧಿ ಆಗಬೇಕು ಎಂಬ ಬಲವಾದ ಬೇಡಿಕೆ ದಶಕಗಳಿಂದ ಇದೆ. ಈ ರಸ್ತೆ ಅಭಿವೃದ್ಧಿಯಾದರೆ ಸಂಸೆಯಿಂದ ಎಳನೀರು ಮೂಲಕ ಬೆಳ್ತಂಗಡಿ ಕೇವಲ 30ಕಿ.ಮೀ ಆಗುತ್ತದೆ. ಈಗ ಕುದುರೆಮುಖ-ಬಜಗೋಳಿ ಮೂಲಕ ಬೆಳ್ತಂಗಡಿ ತಲುಪಲು 120ಕಿ.ಮೀ ಕ್ರಮಿಸಬೇಕಿದೆ. ಆದರೆ, ಈ ರಸ್ತೆ 1.5ಕಿ.ಮೀ ದೂರ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಹಾದುಹೋಗುತ್ತದೆ ಎಂಬ ಕಾರಣಕ್ಕೆ ಈವರೆಗೂ ಅನುಮತಿ ಸಿಕ್ಕಿಲ್ಲ.
ಕಳೆದ ವರ್ಷವೇ ಶಾಸಕರಾದ ಹರೀಶ್ ಪೂಂಜ, ನಯನಾ ಮೋಟಮ್ಮ ಈ ರಸ್ತೆ ಬಗ್ಗೆ ಆಸಕ್ತಿ ತೋರಿದ್ದಾರೆ. ಈಗಾಗಲೇ ಈ ರಸ್ತೆಗೆ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಆದರೆ ಈವರೆಗೂ ಅರಣ್ಯ ಇಲಾಖೆ ಅನುಮೋದನೆ ಸಿಕ್ಕಿಲ್ಲ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ಎಳನೀರು-ಬೆಳ್ತಂಗಡಿ ರಸ್ತೆ ಬಗ್ಗೆ ಆಸಕ್ತಿ ತೋರಿದ್ದಾರೆ. ಶೀಘ್ರದಲ್ಲೇ ಕೇಂದ್ರದ ಅನುಮತಿ ಸಿಗುವ ಭರವಸೆ ಇದೆ. ಈ ರಸ್ತೆ ನಿರ್ಮಾಣವಾದಲ್ಲಿ ಶೃಂಗೇರಿ-ಹೊರನಾಡು, ಧರ್ಮಸ್ಥಳಕ್ಕೆ ಪ್ರಯಾಣ ಹತ್ತಿರವಾಗುತ್ತದೆ. ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಭಾರಿ ಅನುಕೂಲ ಆಗುತ್ತದೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಎಂ.ಎ.ಶೇಷಗಿರಿ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.