ADVERTISEMENT

ಕಡೂರು: ಕಾಯಕಲ್ಪದ ನಿರೀಕ್ಷೆಯಲ್ಲಿ ಕರ್ಣಾಟಕ ಸಂಘ

73 ವರ್ಷಗಳ ಇತಿಹಾಸ ಇರುವ ಕಡೂರಿನ ಸಂಘಟನೆಯನ್ನು ಕೇಳುವವರಿಲ್ಲ!

ಬಾಲು ಮಚ್ಚೇರಿ
Published 1 ನವೆಂಬರ್ 2021, 3:32 IST
Last Updated 1 ನವೆಂಬರ್ 2021, 3:32 IST
ಕಡೂರು ಪಟ್ಟಣದ ಕೋರ್ಟ್ ಬಳಿ ಇರುವ ಕರ್ಣಾಟಕ ಸಂಘದ ಕಟ್ಟಡ
ಕಡೂರು ಪಟ್ಟಣದ ಕೋರ್ಟ್ ಬಳಿ ಇರುವ ಕರ್ಣಾಟಕ ಸಂಘದ ಕಟ್ಟಡ   

ಕಡೂರು: ಕನ್ನಡ ನಾಡು– ನುಡಿಯ ಅಭಿಮಾನದ ಪ್ರತೀಕವಾಗಿರುವ ಪಟ್ಟಣದ ‘ಕನ್ನಡ ಕಲಾಸಂಘ’ ಸ್ತಬ್ಧವಾಗಿ ಕನ್ನಡಾಭಿಮಾನದ ಪಳೆಯುಳಿಕೆಯಂತಾಗಿದೆ.

73 ವರ್ಷಗಳ ಹಿಂದೆ 1948ರಲ್ಲಿ ಕಡೂರಿನ ಕಲಾಸಕ್ತರೆಲ್ಲ ಸೇರಿ ಆರಂಭವಾದ ಸಂಸ್ಥೆ ಕರ್ಣಾಟಕ ಸಂಘ. ಪುರಸಭೆ ಪಟ್ಟಣದ ಕೋರ್ಟ್ ಬಳಿಯ ಒಂದು ಜಾಗವನ್ನು ಸಂಘಕ್ಕೆ ನೀಡಿತು. ಅಲ್ಲಿ ಚಿಕ್ಕ ಕಟ್ಟಡ ನಿರ್ಮಾಣ ಮಾಡಲು ಸಂಘದ ಸದಸ್ಯರು ನಿರ್ಧರಿಸಿದ್ದು, ಮೈಸೂರು ಸಂಸ್ಥಾನದ ಕಂದಾಯ ಸಚಿವ ಎಚ್‌.ಸಿದ್ದಯ್ಯ ಈ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು. ಆಗಿನ ಕಾಲಕ್ಕೆ ದೊಡ್ಡದೇ ಎಂಬಂತಹ ಕಟ್ಟಡ ನಿರ್ಮಾಣವಾಯಿತು.

ಕರ್ಣಾಟಕ ಸಂಘ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ತೊಡಗಿಸಿಕೊಂಡು ಕ್ರಿಯಾಶೀಲವಾಗಿತ್ತು. ಇಲ್ಲಿನ ಸದಸ್ಯರು ಸೇರಿ ‘ಕನ್ನಡ ಕಲಾ ಸಂಘ’ ಹೆಸರಿನಲ್ಲಿ ನಾಟಕ ತಂಡವೊಂದನ್ನು ರಚಿಸಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ದೇವದಾಸಿ, ಎಚ್ಚಮ್ಮನಾಯಕ ಮುಂತಾದ ನಾಟಕ ಗಳನ್ನು ಇದೇ ಸಂಘದ ಕಟ್ಟಡದಲ್ಲಿ ಅಭ್ಯಾಸ ಮಾಡುತ್ತಿದ್ದರು. ನಂತರ ಮಿಡಲ್ ಸ್ಕೂಲ್ ಮೈದಾನ ಅಥವಾ ಗಣಪತಿ ಪೆಂಡಾಲ್ ಮುಂತಾದ ಕಡೆ ನಾಟಕ ಪ್ರದರ್ಶನ ನೀಡುತ್ತಿದ್ದರು. ಅದೂ ಈಗಿನಂತೆ ವೈಭವದ ವೇದಿಕೆಯಲ್ಲಿ ಅಲ್ಲ. ತೆಂಗಿನ ಗರಿಯ ಚಪ್ಪರವೇ ವೇದಿಕೆ. ಕಲಾವಿದರೇ ಮನೆಯಿಂದ ತಂದ ಜಮಖಾನೆಗಳೇ ಪರದೆಗಳಾಗಿರುತ್ತಿದ್ದವು. ಕನ್ನಡ ಕಲಾ ಸಂಘದ ನಾಟಕಗಳಿಗೆ ಬಹಳ ಪ್ರೋತ್ಸಾಹ ದೊರೆಯುತ್ತಿತ್ತು.

ADVERTISEMENT

ಜನಮಿತ್ರ ನಾರಾಯಣ ಎಂಬ ಕಲಾವಿದರು ಪ್ರಮುಖ ಪಾತ್ರಧಾರಿಗಳಾಗಿದ್ದರು. ಬ್ಯಾಂಕ್ ರಾಮಕೃಷ್ಣಯ್ಯ ಮುಂತಾದವರು ಸಂಘ ಸಕ್ರಿಯವಾಗಿರುವಲ್ಲಿ ಸದಾ ಶ್ರಮಿಸುತ್ತಿದ್ದರು. 1980ರ ವರೆಗೂ ಸಂಘ ಸಕ್ರಿಯವಾಗಿತ್ತು. ಜಿ.ವಿ‌.ಮಂಜುನಾಥ ಸ್ವಾಮಿ, ಜಿ.ವಿ‌.ಶೇಷಣ್ಣ, ಎಸ್‌ಜಿಕೆ ಮೂರ್ತಿ ಮುಂತಾದವರು ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದು ಮಾಹಿತಿ ನೀಡುತ್ತಾರೆ ಇಲ್ಲಿಯೇ ಕಲಾವಿದನಾಗಿ ರೂಪುಗೊಂಡ ಚುಟುಕು ಕವಿ ಹೊ.ರಾ.ಕೃಷ್ಣಕುಮಾರ್.

80ರ ದಶಕದಲ್ಲಿ ಸಂಘದ ಸದಸ್ಯರೇ ಸೇರಿ ಒಂದು ರಸಮಂಜರಿ ತಂಡ ಕಟ್ಟಿದ್ದರು. ಕೆಲ ದಿನಗಳ ನಂತರ ಅದೂ ಸ್ಥಗಿತಗೊಂಡಿತು. ಕೆಲ ದಿನಗಳ ನಂತರ ಕೆ.ಎಂ.ಕೃಷ್ಣಮೂರ್ತಿ ಶಾಸಕರಾಗಿದ್ದಾಗ ಹಿರಿಯ ಪತ್ರಕರ್ತ ಎಚ್.ಎಸ್.ಸೂರ್ಯನಾರಾಯಣ ಮತ್ತು ಸಾಹಿತಿ ಅಜ್ಜಂಪುರ ಜಿ.ಸೂರಿ ಅವರಿಗೆ ಕಟ್ಟಡದ ಜವಾಬ್ದಾರಿ ವಹಿಸಿಲಾಗಿತ್ತು ಎನ್ನುತ್ತಾರೆ ಹಿರಿಯ ಪತ್ರಕರ್ತ ಎಚ್‌ಎಸ್.ಪರಮೇಶ್.

ಆ ನಂತರದಲ್ಲಿ ಸಂಘದ ಕಟ್ಟಡ ನಿರುಪಯೋಗಿ ಎನ್ನುವಂತಾಗಿದೆ. ಕರ್ಣಾಟಕ ಸಂಘ ಪ್ರಸ್ತುತ ಅಸ್ತಿತ್ವದಲ್ಲಿ ಇದೆಯೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಏಕೆಂದರೆ ಪುರಸಭೆಯ ಸುಪರ್ದಿಯಲ್ಲಿರುವ ಈ ಕಟ್ಟಡ ಯಾವುದಕ್ಕೂ ಉಪಯೋಗವಾಗುತ್ತಿಲ್ಲ. ಈಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸೂರಿ ಶ್ರೀನಿವಾಸ್ ಮತ್ತಿತರರು ಕರ್ಣಾಟಕ ಸಂಘಕ್ಕೆ ಮರುಜೀವ ನೀಡಲೆತ್ನಿಸಿದ್ದರೂ ಅದು ಅಷ್ಟಾಗಿ ವೇಗ ಪಡೆದಿಲ್ಲ. ಆವರಣದ ತುಂಬ ಗಿಡಗಂಟಿಗಳು ಬೆಳೆದಿವೆ. ಕನ್ನಡ ಕಲಾಸಂಘ ಎಂಬ ಬೋರ್ಡ್ ಮಾತ್ರ ಕಾಣುತ್ತದೆ ವಿನಾ ಕಟ್ಟಡ ಹೊರಕ್ಕೆ ಕಾಣದಂತಾಗಿದೆ.

ಪಟ್ಟಣದ ಹೆಮ್ಮೆಯ ಕೇಂದ್ರ ವಾಗಬಹುದಾಗಿದ್ದ ಕರ್ಣಾಟಕ ಸಂಘ ಮತ್ತೆ ಪುನರುಜ್ಜೀವನಗೊಂಡು ಕನ್ನಡದ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಲಿ ಎಂಬುದು ಕಡೂರಿನ ಜನರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.