ADVERTISEMENT

ನಮ್ಮೆಲ್ಲರ ಜೀವಧ್ವನಿ ಕನ್ನಡ: ಬೆಳ್ಳಿಪ್ರಕಾಶ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 8:21 IST
Last Updated 2 ನವೆಂಬರ್ 2022, 8:21 IST
ಕಡೂರಿನಲ್ಲಿ ನಡೆದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿದರು.
ಕಡೂರಿನಲ್ಲಿ ನಡೆದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿದರು.   

ಕಡೂರು: ನಮ್ಮ ಜೀವಧ್ವನಿ ಕನ್ನಡವನ್ನೇ ಬಳಸುವ ಮೂಲಕ ಕನ್ನಡ ಭಾಷೆಯನ್ನು ಜೀವಂತವಾಗಿಡಲು ನಿರಂತರವಾಗಿ ಶ್ರಮಿಸಬೇಕು ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.

ಕಡೂರಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡ ವೈಚಾರಿಕ ಭಾಷೆಯೂ ಹೌದು. ನಮ್ಮ ಅಭಿಮಾನದ ಜೀವಧ್ವನಿಯೂ ಹೌದು. ವಚನ ಮತ್ತು ದಾಸ ಸಾಹಿತ್ಯವೂ ಸೇರಿದಂತೆ ವಿವಿಧ ಸಾಹಿತ್ಯ ಪ್ರಾಕಾರಗಳು ಕನ್ನಡ ಭಾಷೆಗೆ ಮಹೋನ್ನತ ಕೊಡುಗೆ ನೀಡಿ ನಾಡಿನ ಹಿರಿಮೆಯನ್ನು ಹೆಚ್ಚಿಸಿವೆ. ನಮ್ಮ ನಾಡಿನ ರಾಷ್ಟ್ರಕವಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕನ್ನಡದ ಹೆಮ್ಮೆ. ಇದೇ ಸಂದರ್ಭದಲ್ಲಿ ನಮ್ಮನ್ನಗಲಿದ ನಟ ಪುನೀತ್ ಅವರಿಗೆ ಸರ್ಕಾರ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಶ್ಲಾಘನೀಯ’ ಎಂದರು.

ADVERTISEMENT

ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವ ರಕ್ಷೆ ಸ್ವೀಕರಿಸಿದ ತಹಶೀಲ್ದಾರ್ ಜೆ.ಉಮೇಶ್ ಮಾತನಾಡಿ, ಕನ್ನಡ ಭಾಷಿಕ ಪ್ರದೇಶಗಳೆಲ್ಲ ಒಟ್ಟಾಗಿ ಕನ್ನಡನಾಡು ಉದಯವಾದ ದಿನ ಕನ್ನಡಿಗರಿಗೆಲ್ಲ ಅವಿಸ್ಮರಣೀಯ ದಿನ. ಭಾಷಾವಾರು ಪ್ರಾಂತ್ಯ ರಚನೆ ಸಮಯದಲ್ಲಿ ಚದುರಿಹೋಗಿದ್ದ ಕನ್ನಡ ನಾಡು ಒಂದಾಗಿ ಕನ್ನಡ ನಾಡು ಉದಯವಾದ ದಿನವನ್ನು ರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ. ಕನ್ನಡನಾಡು ಮತ್ತು ನುಡಿ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಲಿ’ ಎಂದರು.

ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ‘ನಮ್ಮ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದರು.

ಪುರಸಭೆ ಉಪಾಧ್ಯಕ್ಷೆ ವಿಜಯಾ ಚಿನ್ನರಾಜು, ಇನ್‌ಸ್ಪೆಕ್ಟರ್ ಶ್ರೀನಿವಾಸ್, ಪಿಎಸ್‌ಐ ರಮ್ಯ, ಶೂದ್ರ ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರೇವಣ್ಣಯ್ಯ, ಬೀರೂರು ಬಿಇಒ ರಾಜ್ ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್, ಪುರಸಭಾ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.