ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ: ಬೆಂಬಲಕ್ಕೆ ಜೋಶಿ ಮನವಿ

ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ಚುನಾವಣೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 6:25 IST
Last Updated 20 ನವೆಂಬರ್ 2020, 6:25 IST
ಡಾ.ಮಹೇಶ ಜೋಶಿ
ಡಾ.ಮಹೇಶ ಜೋಶಿ   

ಚಿಕ್ಕಮಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ಚುನಾವಣೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇನೆ, ಮತದಾರರು ಬೆಂಬಲ ನೀಡಬೇಕು’ ಎಂದು ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಡಾ.ಮಹೇಶ ಜೋಶಿ ಇಲ್ಲಿ ಗುರುವಾರ ಮನವಿ ಮಾಡಿದರು.

‘ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸಬೇಕು ಎಂಬುದು ನನ್ನ ಆಶಯ. ‘ಕಟ್ಟೋಣ ಸಾಹಿತ್ಯ ಪರಿಷತ್ತನ್ನು ಹಳ್ಳಿಹಳ್ಳಿಗಳ ಮೂಲಕ’ ಎಂಬ ಗುರಿ ಇಟ್ಟುಕೊಂಡಿದ್ದೇನೆ. ಅಧ್ಯಕ್ಷನಾಗಿ ಆಯ್ಕೆಯಾದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಒಮ್ಮೆ ಆಯೋಜಿಸುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಾಹಿತ್ಯ ಪರಿಷತ್ತಿನಲ್ಲಿ 3.20 ಲಕ್ಷ ಮತದಾರರು ಇದ್ದಾರೆ. ಪಟ್ಟಿಯಲ್ಲಿ ಅನೇಕ ದಿವಂಗತರ ಹೆಸರುಗಳು, ಅಪೂರ್ಣ ವಿಳಾಸಗಳು ಇವೆ. ಪರಿಷ್ಕರಣೆ ಮಾಡಿ ಪಟ್ಟಿ ಸಿದ್ಧಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಪರಿಷತ್ತಿನ ಸದಸ್ಯತ್ವ ನೋಂದಣಿ ಸರಳೀಕರಣ, ಆನ್‌ಲೈನ್‌ ನೋಂದಣಿಗೆ ವ್ಯವಸ್ಥೆ ಮಾಡಬೇಕು, ಪರಿಷತ್ತಿನಲ್ಲಿ ಮಹಿಳೆಯರಿಗೆ ಆದ್ಯತೆ (ಐದು ವರ್ಷಗಳಲ್ಲಿ ಕನಿಷ್ಠ ಇಬ್ಬರನ್ನು ಸಮ್ಮೇಳನಾಧ್ಯಕ್ಷ ರನ್ನಾಗಿ ಆಯ್ಕೆ ಮಾಡುವುದು) ನೀಡುವ ಎಂಬ ಗುರಿ ಇಟ್ಟುಕೊಂಡಿದ್ದೇನೆ. ಪರಿಷತ್ತಿನ ಅಳ, ಅಗಲಗಳನ್ನು ಅಧ್ಯಯನ ಮಾಡಿದ್ದೇನೆ. ಕನ್ನಡದ ಅಸ್ಮಿತೆ ಎತ್ತಿ ಹಿಡಿಯುವ ಕೆಲಸ ಮಾಡುತ್ತೇನೆ, ನವ ಮನ್ವಂತರ ಸ್ಥಾಪಿಸುತ್ತೇನೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಡಾ.ರಾಜ್‌ಕುಮಾರ್‌ ಅಭಿಮಾನಿ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರೇಗೌಡ, ರಾಮಲಿಂಗಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.