ಕಳಸ: ತಾಲ್ಲೂಕಿನ ಕಾರ್ಲೆ ಗ್ರಾಮವು ಮಳೆಗಾಲ ಆರಂಭವಾದೊಡನೆ ದ್ವೀಪದಂತಾಗುತ್ತದೆ. ಇದರಿಂದ, ಶಾಲಾ–ಕಾಲೇಜು ಮಕ್ಕಳಿಗೆ, ವೃದ್ಧರಿಗೆ, ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದೆ.
ಪರಿಶಿಷ್ಟ ವರ್ಗದ ಗೌಡಲು ಕುಟುಂಬಗಳು ವಾಸವಿರುವ ಈ ಭಾಗದ ಸುತ್ತಲೂ ಹರಿಯುವ ಹಳ್ಳಗಳು ಮಳೆಗಾಲದಲ್ಲಿ ಅಪಾಯಕಾರಿ ಪ್ರವಾಹದ ರೀತಿಯಲ್ಲಿ ಹರಿಯುತ್ತವೆ. ಹಾಗೇ ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಮಳೆಗಾಲದಲ್ಲಿ ಕಟ್ಟೆಮನೆ ಹಳ್ಳದಿಂದ ಕಡಿತಗೊಳ್ಳುವುದರಿಂದ ಗ್ರಾಮಸ್ಥರ ಬದುಕೇ ಸಾಹಸವಾಗುತ್ತದೆ.
ಶಾಲಾ, ಕಾಲೇಜು, ಆಸ್ಪತ್ರೆ, ದಿನಬಳಕೆಯ ವಸ್ತು ಖರೀದಿಗೆ ಕಳಸ ಪೇಟೆಗೆ ಹೋಗಲು ಗಿರಿಜನರಿಗೆ ಮಳೆಗಾಲದಲ್ಲಿ ಎಡರು ತೊಡರು ಇದೆ. 'ಮಳೆ ಬಿಡುವು ನೀಡಿದಾಗ ನಾವು ಹಳ್ಳ ದಾಟಿಕೊಂಡು ಬರುತ್ತೇವೆ. ಆದರೆ ದೊಡ್ಡ ಮಳೆ ಸುರಿದಾಗ ಈ ಹಳ್ಳ ದಾಟುವುದು ಸಾಧ್ಯವಿಲ್ಲದ ಮಾತು ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದರು.
ಕಟ್ಟೆಮನೆ ಹಳ್ಳ ದಾಟಿದರೆ ಕಾರ್ಲೆಯ 7 ಗಿರಿಜನರ ಮನೆಗಳಿಗೆ ಸಂಪರ್ಕ ಸಿಗುತ್ತದೆ. ಅಲ್ಲಿಂದ ಮತ್ತಷ್ಟು ದೂರ ಸಾಗಿದರೆ ಕಾರ್ಲೆಯ ಕಟ್ಟಕಡೆಯ ಕುರುಮುಡುಕದ ಒಂಟಿ ಮನೆ ಸಿಗುತ್ತದೆ. ಈ ಎಲ್ಲ ಮನೆಗಳಿಗೂ ಮಳೆಗಾಲ ಎಂದರೆ ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಸ್ಥಿತಿ ಇದೆ. ಗ್ರಾಮಸ್ಥರು ಈಗಲೂ ಶಿಥಿಲಗೊಂಡ ಕಾಲುಸಂಕದ ಮೇಲೆ ಸರ್ಕಸ್ ಮಾಡುತ್ತಿದ್ದಾರೆ.
ಇಲ್ಲಿ ಮೊಬೈಲ್ ನೆಟ್‍ವರ್ಕ್ ಇಲ್ಲದೆ ಇರುವುದರಿಂದ ಗಿರಿಜನರು ತಮ್ಮ ದೊಡ್ಡ ದನಿಯ ಕೂಗನ್ನೇ ಸಂವಹನಕ್ಕಾಗಿ ಬಳಸುತ್ತಾರೆ. ಯಾರಿಗಾದರೂ ಅನಾರೋಗ್ಯ ಕಂಡು ಬಂದರೆ ಹಳ್ಳದ ಬದಿಯಲ್ಲಿ ನಡೆದು ಬಂದು ಬೇರೆ ಮನೆಯವರನ್ನು ಸಹಾಯಕ್ಕಾಗಿ ಕೂಗಿ ಕರೆಯುತ್ತಾರೆ. ಮಳೆಗಾಲದಲ್ಲಿ ದಿನಗಟ್ಟೆಲೆ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಗ್ರಾಮ ಅಕ್ಷರಶಃ ಕಗ್ಗತ್ತಲಿನಲ್ಲಿ ಮುಳುಗುತ್ತದೆ.
ನಕ್ಸಲರು ಇದ್ದಾಗ ಪೊಲೀಸರು ನಮ್ಮ ಗ್ರಾಮಕ್ಕೆ ಬರುತ್ತಾ ಇದ್ದರು. ಆಗ ನಮ್ಮ ಅನೇಕ ಕೆಲಸ ಮಾಡಿಕೊಡುತ್ತಿದ್ದರು. ಈಗ ನಮ್ಮ ಗ್ರಾಮಕ್ಕೆ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡ ಬರುತ್ತಿಲ್ಲ, ನಮ್ಮ ಸಮಸ್ಯೆ ಕೇಳುವವರೇ ಇಲ್ಲ ಎಂದು ಗಿರಿಜನರು ಬೇಸರ ಹೊರ ಹಾಕುತ್ತಾರೆ.
ನಮ್ ಮಕ್ಕಳನ್ನು ಸಂಸೆ, ಹೊರನಾಡಿನ ಆಶ್ರಮ ಶಾಲೆಗೆ ಸೇರಿಸಿದ್ದೀವಿ. ಹೊಳೆ ದಾಟಲು ಕಷ್ಟ ಅಂತ ಮಳೆಗಾಲದ 6 ತಿಂಗಳು ಮಕ್ಕಳು ಮನೆಗೆ ಬರುವುದೇ ಇಲ್ಲ. ನಮಗೂ ಮಕ್ಕಳನ್ನು ಮನೆಗೆ ಕರ್ಕೊಂಡು ಬರಬೇಕು ಅಂತ ಆಸೆ. ಆದರೆ, ಈ ಹಳ್ಳ ದಾಟಲು ಮಕ್ಕಳಿಗೆ ಆಗಲ್ಲ. ಅದಕ್ಕೆ ನವರಾತ್ರಿಗೆ ಮಾತ್ರ ಅವರು ಮನೆಗೆ ಬರ್ತಾರೆ ಎಂದು ಕಾರ್ಲೆಯ ಗಿರಿಜನ ಮಹಿಳೆಯರು ಮಕ್ಕಳನ್ನು ನೆನೆದು ದುಃಖ ಪಡುತ್ತಾರೆ.
ಕಾರ್ಲೆ ಗ್ರಾಮಸ್ಥರ ಬಹುದಿನಗಳ ಸೇತುವೆ ಬೇಡಿಕೆಯನ್ನು ಸದ್ಯದಲ್ಲೇ ಮಲೆನಾಡು ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಈಡೇರಿಸುತ್ತೇವೆ. ಉಳಿದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಾರೆ ಎಂದು ಶಾಸಕಿ ನಯನಾ ಮೋಟಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
ಕಟ್ಟೆಮನೆ ಹಳ್ಳಕ್ಕೆ ಸೇತುವೆ ನಿರ್ಮಾಣವಾದರೆ ಗ್ರಾಮದ ಬಹುದೊಡ್ಡ ಸಮಸ್ಯೆ ಬಗೆಹರಿಯುತ್ತದೆ. ಗ್ರಾಮದ ಸಣ್ಣ ಬೇಡಿಕೆಗಳ ಬಗ್ಗೆ ಪಂಚಾಯಿತಿ ಸದಾ ನಿಗಾ ವಹಿಸುತ್ತಿದೆ.
-ಕಳಕೋಡು ರವಿ ಸದಸ್ಯ ಸಂಸೆ ಗ್ರಾಮ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.