ADVERTISEMENT

5 ವರ್ಷದಲ್ಲಿ, ₹5 ಲಕ್ಷ ಕೋಟಿಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ: ಎಚ್‌ಡಿಕೆ

ಜನತಾ ಜಲಧಾರೆ ಕಾರ್ಯಕ್ರಮದಲ್ಲಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 12:39 IST
Last Updated 18 ಏಪ್ರಿಲ್ 2022, 12:39 IST
ಕಳಸ ತಾಲ್ಲೂಕು ಘೋಷಣೆ ಮಾಡಿದ ಕಾರಣಕ್ಕೆ ಸೋಮವಾರ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಕಳಸ ಘಟಕವು ಸನ್ಮಾನಿಸಿತು.ಮುಖಂಡರಾದ ಮಂಜಪ್ಪಯ್ಯ, ಜ್ವಾಲನಯ್ಯ, ಸಂತೋಷ್ ಮತ್ತಿತರರು ಇದ್ದರು.
ಕಳಸ ತಾಲ್ಲೂಕು ಘೋಷಣೆ ಮಾಡಿದ ಕಾರಣಕ್ಕೆ ಸೋಮವಾರ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಕಳಸ ಘಟಕವು ಸನ್ಮಾನಿಸಿತು.ಮುಖಂಡರಾದ ಮಂಜಪ್ಪಯ್ಯ, ಜ್ವಾಲನಯ್ಯ, ಸಂತೋಷ್ ಮತ್ತಿತರರು ಇದ್ದರು.   

ಕಳಸ: ‘ರಾಜ್ಯದ ಜನತೆ ಅಧಿಕಾರ ನೀಡಿದರೆ 5 ವರ್ಷದಲ್ಲಿ ₹5 ಲಕ್ಷ ಕೋಟಿ ವೆಚ್ಚದಲ್ಲಿ ಇಡೀ ರಾಜ್ಯದ ಎಲ್ಲ ಬೇಡಿಕೆಗೆ ತಕ್ಕಂತೆ ಸಮಗ್ರ ಅಭಿವೃದ್ಧಿ ಮಾಡುತ್ತೇನೆ’ ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಪಟ್ಟಣದಲ್ಲಿ ಸೋಮವಾರ ಪಕ್ಷದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಳೆದ 75 ವರ್ಷಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಕನಾಟಕದ ಸಮಗ್ರ ಅಭಿವೃದ್ಧಿಗೆ ಯಾವುದೇ ಮಹತ್ತರ ಯೋಜನೆ ರೂಪಿಸಿಲ್ಲ. ಇದರಿಂದ ರಾಜ್ಯದಲ್ಲಿ ಈಗಲೂ ನಿರುದ್ಯೋಗ, ಶಿಕ್ಷಣ, ಆರೋಗ್ಯ, ವಸತಿ, ನೀರಾವರಿ ಸಮಸ್ಯೆಗಳು ಜೀವಂತವಾಗಿವೆ. ರಾಜ್ಯದ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಜೆಡಿಎಸ್‌ ಸಮಗ್ರ ಯೋಜನೆ ರೂಪಿಸಿದ್ದು, 5 ವರ್ಷ ಅಧಿಕಾರ ಸಿಕ್ಕರೆ ಎಲ್ಲವನ್ನೂ ಬಗೆಹರಿಸಿ ಮಾದರಿ ರಾಜ್ಯ ಮಾಡುತ್ತೇವೆ’ ಎಂದರು.


ಪಕ್ಕದ ತೆಲಂಗಾಣದಲ್ಲಿ 3 ವರ್ಷದಲ್ಲಿ ₹1.20 ಲಕ್ಷ ಕೋಟಿ ವೆಚ್ಚದಲ್ಲಿ 13 ಜಿಲ್ಲೆಗೆ ನೀರು ಪೂರೈಸುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ 51 ನದಿ ಮತ್ತು ಉಪ ನದಿಗಳು ಇದ್ದರೂ, ಇಷ್ಟು ವರ್ಷದಲ್ಲಿ ನೀರಿನ ಸಮಸ್ಯೆ ನೀಗದೆ ಇರಲು ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ದೂರಿದರು.

ADVERTISEMENT

‘ದೇವೇಗೌಡರು ನೀರಾವರಿ ಸಚಿವ, ಮುಖ್ಯಮಂತ್ರಿ ಮತ್ತು ಪ್ರಧಾನಿ ಆದ ಕಾಲದಲ್ಲಿ ನಾಡಿಗೆ ಮಾಡಿದ್ದ ಕೆಲಸವನ್ನು ಜನರು ಮರೆಯದೆ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ತನ್ನಿ’ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ನಮ್ಮ ಸಂಸದೆ ಜನರ ಯಾವುದೇ ಸಮಸ್ಯೆ ಬಗೆಹರಿಸುತ್ತಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಅಧಿಕಾರ ನೀಡಿದರೆ ರಾಜ್ಯದ ಎಲ್ಲ ಕೃಷಿಕರ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು.

ಮಾಜಿ ಸಚಿವ ನಿಂಗಯ್ಯ ಮಾತನಾಡಿ, ಕಳಸ ತಾಲ್ಲೂಕು ಕೇಂದ್ರ ಮಾಡಿದ ಕುಮಾರಣ್ಣ, ಭದ್ರಾ ಮೇಲ್ದಂಡೆ ಮತ್ತು ಇನಾಂ ಭೂಮಿ ಸಂದರ್ಭದಲ್ಲಿ ತೋಟ, ಊರು ಉಳಿಸಿದ ಆಪತ್ಭಾಂಧವ ಎಂದರು.

ಜೆಡಿಎಸ್ ಮುಖಂಡ ಮಂಜಪ್ಪಯ್ಯ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯ ಮಾರ್ಪಾಡು, ಇನಾಂ ಭೂಮಿ ತೆರವು ವಿರುದ್ಧದ ಹೋರಾಟ, ಕಳಸ ತಾಲ್ಲೂಕು ಕೇಂದ್ರದ ಘೋಷಣೆ ಸೇರಿದಂತೆ ಎಚ್.ಡಿ.ಕುಮಾರಸ್ವಾಮಿ ಕಳಸಕ್ಕೆ ಮಾಡಿದ ಮಹತ್ತರ ಕಾರ್ಯಗಳನ್ನು ಮರೆತರೆ ನಮಗೆ ಮನುಷ್ಯತ್ವ ಇದೆ ಎನ್ನಲಾಗುತ್ತದೆಯೇ? ಎಂದು ಬೇಸರಿಸಿದರು.

ಮುಖಂಡ ಜ್ವಾಲನಯ್ಯ ಮಾತನಾಡಿ, ಮುಂದಿನ ಬಾರಿ ಜೆಡಿಎಸ್ ಸರ್ಕಾರ ಬಂದರೆ ಕಳಸದ ಎಲ್ಲ ಕೆಲಸವನ್ನೂ ಒಂದು ರೂಪಾಯಿ ಲಂಚವೂ ಇಲ್ಲದಂತೆ ಮಾಡಿಸಿಕೊಡುವ ಜವಾಬ್ದಾರಿ ನನ್ನದು ಎಂದರು.

ಮುಖಂಡರಾದ ರಂಜನ್ ಅಜಿತ್, ಸಂತೋಷ್, ನಿಖಿಲ್, ಮಹೇಶ್ವರಿ, ಸುಮಾ ನಾಗೇಶ್,ಚಂದ್ರಪ್ಪ,ಸುಧಾಕರ ಶೆಟ್ಟಿ, ವೆಂಕಟೇಶ್ ಮತ್ತಿತರರು ಇದ್ದರು.

ಕಳಸಕ್ಕೆ ಬಂದ ಜಲಧಾರೆ ರಥವನ್ನು ಕೈಮರದಲ್ಲಿ ಸ್ವಾಗತಿಸಿ ಮೆರವಣಿಗೆಯಲ್ಲಿ ಕೋಟೆ ತೀರ್ಥಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಭದ್ರಾ ತೀರದಲ್ಲಿ ಕುಳಿತ ಕುಮಾರಸ್ವಾಮಿ ಭದ್ರೆಗೆ ಪೂಜೆ ಸಲ್ಲಿಸಿ ಜಲಧಾರೆ ಕಲಶಕ್ಕೆ ಭದ್ರೆಯ ನೀರು ತುಂಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.