ADVERTISEMENT

ಕಸ್ತೂರಿರಂಗನ್ ವರದಿ ಕಾಂಗ್ರೆಸ್‌ ಕೂಸು: ವರಸಿದ್ಧಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 7:42 IST
Last Updated 13 ಡಿಸೆಂಬರ್ 2020, 7:42 IST
ವರಸಿದ್ಧಿ ವೇಣುಗೋಪಾಲ್
ವರಸಿದ್ಧಿ ವೇಣುಗೋಪಾಲ್   

ಚಿಕ್ಕಮಗಳೂರು: ‘ಕಸ್ತೂರಿರಂಗನ್ ವರದಿ, ಬಫರ್ ವಲಯ, ಹುಲಿ ಸಂರಕ್ಷಿತ ಯೋಜನೆ, ಒತ್ತುವರಿ ಸಮಸ್ಯೆಗಳಿಗೆ ಕಾಂಗ್ರೆಸ್‌ ಕಾರಣ’ ಎಂದು ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್ ಆರೋಪಿಸಿದ್ದಾರೆ.

‘ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಜನಪ್ರತಿನಿಧಿಗಳೇ ಕಾರಣ’ ಎಂದು ಎಐಸಿಸಿ ಕಾರ್ಯದರ್ಶಿ ಸಂದೀಪ್ ಆರೋಪಿಸಿರುವುದರಲ್ಲಿ ಹುರುಳಿಲ್ಲ. ಕಸ್ತೂರಿರಂಗನ್ ವರದಿ ಸಮಸ್ಯೆ ಕಾಂಗ್ರೆಸ್ ಅಧಿಕಾರದ ಅವಧಿಯದ್ದು. ಸಮಸ್ಯೆಗೆ ಕಾಂಗ್ರೆಸ್‌ ಕಾರಣ’ ಎಂದು ತಿರುಗೇಟು ನೀಡಿದ್ದಾರೆ.

‘ಈ ಹಿಂದೆ ಕೇರಳ ಮಾದರಿಗೆ ಬಿಜೆಪಿ ಒತ್ತಾಯ ಮಾಡಿದಾಗ ಕಿವಿಗೊಡಲಿಲ್ಲ. ಈಗ ಕಾಂಗ್ರೆಸ್ ಮುಖಂಡರು ಒತ್ತಾಯಿಸುತ್ತಿರುವುದನ್ನು ಗಮನಿಸಿದರೆ ಇದು ಜನರ ಕಣ್ಣೊರೆಸುವ ತಂತ್ರ ಅನಿಸುತ್ತಿದೆ. ಕಸ್ತೂರಿರಂಗನ್ ಸಮಿತಿ ನೇಮಿಸಿದಾಗ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಕಾಂಗ್ರೆಸ್ ನಡೆ ‘ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿ ದಂತೆ’ ಇದೆ’ ಎಂದು ಟೀಕಿಸಿದ್ದಾರೆ.

ADVERTISEMENT

‘ವಿಧಾನಸಭೆ ಯಲ್ಲಿ ಬಿಜೆಪಿ ಶಾಸಕರು ಕಸ್ತೂರಿರಂಗನ್‌ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವರದಿಯನ್ನು ತಡೆಹಿಡಿಯುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಪತ್ರ ಬರೆದಿದೆ. ಶೃಂಗೇರಿ ಶಾಸಕರಾದ ಟಿ.ಡಿ.ರಾಜೇಗೌಡ ಅವರು ಪತ್ರ ರವಾನಿಸಿದ್ದು ಬಿಟ್ಟು ಬೇರೇನು ಮಾಡಿಲ್ಲ’ ಎಂದು ದೂರಿದ್ದಾರೆ.

‘ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದು ಕಾಂಗ್ರೆಸ್ ಎಂದು ಹೇಳಿಕೊಳ್ಳುತ್ತಿರುವುದು, ಇನ್ನೊಂದು ಕಡೆ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ’ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.