
ತರೀಕೆರೆ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೆಮ್ಮಣ್ಣಗುಂಡಿ, ಕಲ್ಲತ್ತಿಗಿರಿ ಮತ್ತು ಹೆಬ್ಬೆ ಫಾಲ್ಸ್ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಭಾರಿ ಮಳೆಗೆ ಕೆಮ್ಮಣ್ಣಗುಂಡಿಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿದ್ದು, ಚಾಲಕರು ಜೀವ ಭಯದಲ್ಲಿ ವಾಹನ ಸಂಚಾರ ಮಾಡುವಂತಾಗಿದೆ.
ರಸ್ತೆ ಬಿರುಕು ಬಿಟ್ಟಿರುವುದರಿಂದ ಪ್ರವಾಸಕ್ಕೆಂದು ಬರುತ್ತಿರುವ ಪ್ರವಾಸಿಗರ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಅಲ್ಲದೆ ಕೆಮ್ಮಣ್ಣಗುಂಡಿ ಗಿರಿಧಾಮದ ರಸ್ತೆ ಅನೇಕ ತಿರುವುಗಳಿಂದ ಕೂಡಿದ್ದು, ಇಳಿಜಾರು ಪ್ರದೇಶವಾಗಿದೆ. ಕಳೆದ ಅನೇಕ ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಕಾಂಕ್ರೀಟ್ ರಸ್ತೆಯ ತುಂಬೆಲ್ಲ ಪಾಚಿ ಕಟ್ಟಿಕೊಂಡಿದೆ.
ಇದರಿಂದ ವಾಹನ ಚಾಲಕರು ವಾಹನಗಳನ್ನು ಚಲಾಯಿಸುವ ಸಂದರ್ಭದಲ್ಲಿ ಅನಿವಾರ್ಯವಾಗಿ ಬ್ರೇಕ್ ಹಾಕಿದಾಗ ವಾಹನಗಳು ಕಾಂಕ್ರೀಟ್ ರಸ್ತೆಯಲ್ಲಿ ಜಾರಿಕೊಂಡು ರಸ್ತೆಯ ಹಂಚಿಗೆ ಹೋಗುತ್ತಿರುವುದರ ಜೊತೆಗೆ, ರಸ್ತೆ ಕುಸಿಯುವ ಹಂತದಲ್ಲಿದೆ. ಇದರಿಂದಾಗಿ ಎದುರಿನಿಂದ ಬರುವ ವಾಹನಗಳಿಗೆ ಸ್ಥಳಾವಕಾಶ ನೀಡಲು ತೊಂದರೆಯಾಗುತ್ತಿದ್ದು, ಹೆಚ್ಚಿನ ಅನಾಹುತಗಳಾಗುವ ಮುನ್ನ ಈ ರಸ್ತೆ ದುರಸ್ತಿ ಕಾರ್ಯ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಳೆಗಾಲದಲ್ಲಿ ಕೆಮ್ಮಣ್ಣಗುಂಡಿಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆಯಲ್ಲಿ ವಾಹನ ಚಲಾಯಿಸುವುದೇ ಚಾಲಕರಿಗೆ ಸವಾಲಿನ ಕೆಲಸವಾಗಿದೆ. ಅನೇಕ ತಿರುವುಗಳಿರುವ ಭಾಗಗಳಲ್ಲಿ ರಸ್ತೆ ಬಿರುಕು ಬಿಟ್ಟಿರುವುದರ ಜೊತೆಗೆ, ರಸ್ತೆ ಬದಿಗೆ ಅಳವಡಿಸಲಾಗಿದ್ದ ತಡೆ, ಕಂಬಿಗಳು, ಕಿತ್ತು ಹೋಗಿರುವುದರಿಂದ ಪ್ರಯಾಣಿಕರು ಜೀವ ಭಯದಲ್ಲೇ ಪ್ರಯಾಣಿಸುವಂತಾಗಿದೆ. ಅನಾಹುತ ಸಂಭವಿಸುವ ಮೊದಲೇ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ವಹಿಸಬೇಕೆಂದು ತಿಳಿಸಿದ್ದಾರೆ.
ಕಲ್ಲತ್ತಿಗಿರಿಯಿಂದ ಹೆಬ್ಬೆ ಫಾಲ್ಸ್‌ವರೆಗೂ ಸಾವಿರಾರು ಎಕರೆ ಕಾಫಿ ತೋಟಗಳಿದ್ದು, ಇದೇ ಮಾರ್ಗದಲ್ಲಿ ನೂರಾರು ಜನರು ಬೆಳಿಗ್ಗೆ ಮತ್ತು ಸಂಜೆ ಪ್ರತಿದಿನ ಸಂಚರಿಸುತ್ತಿದ್ದು, ಇವರು ಸಹ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ.
ಅಗತ್ಯ ಕ್ರಮ ಕೈಗೊಳ್ಳಲಾಗುವುದು
ಕೆಮ್ಮಣಗುಂಡಿಗೆ ಸಂಪರ್ಕ ಕಲ್ಪಿಸುವ ಪಿ.ಡಬ್ಲ್ಯೂ.ಡಿ ಇಲಾಖೆಯಿಂದ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ ಕುಸಿಯುತ್ತಿರುವ ಹಂತದಲ್ಲಿರುವುದು ಇಲಾಖೆ ಗಮನಕ್ಕೆ ಬಂದಿದ್ದು ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಿ.ಡಬ್ಲ್ಯೂ.ಡಿ ತರೀಕೆರೆ ವಿಭಾಗದ ಎ.ಇ.ಇ. ಸೋಮಶೇಖರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.