
ಕೊಪ್ಪ: ಪಟ್ಟಣದ ಮುಖ್ಯರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿ ಹಣ್ಣು, ತರಕಾರಿ ಮಾರಾಟ ಮಾಡುತ್ತಿರುವುದರಿಂದ ಜನರಿಗೆ ಓಡಾಡಲು ತೀವ್ರ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ರಸ್ತೆ ಪಕ್ಕದಲ್ಲಿ ಸಾರ್ವಜನಿಕರಿಗೆ ವಾಹನ ನಿಲುಗಡೆ ಮಾಡಲು ಸಾಧ್ಯವಾಗದಂತೆ ಹಣ್ಣು, ತರಕಾರಿ ಮಾರುವವರು ಈ ಜಾಗವನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಟ್ಟಣ ನಿವಾಸಿ ಸಿ.ಎಚ್. ಪ್ರಕಾಶ್ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ತೆರಿಗೆ ಕಟ್ಟದಿದ್ದರೆ ವಸೂಲಿ ಮಾಡಲು ಪುಸ್ತಕ ಹಿಡಿದು ಬರುವ, ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸುವ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಪೊಲೀಸ್ ಠಾಣಾಧಿಕಾರಿ ಹಲವು ಬಾರಿ ಜಾಗದಲ್ಲಿ ತೆರವುಗೊಳಿಸಿದ್ದರು. ಆದರೆ, ಪಂಚಾಯಿತಿ ಅಧಿಕಾರಿಗಳ ಬೆಂಬಲದಿಂದ ಯಾವುದೇ ಭಯವಿಲ್ಲದೆ ಇದು ಮುಂದುವರಿದಿದೆ ಎಂದು ಆಕ್ಷೇಪಿಸಿದ್ದಾರೆ.
ಈ ಹಿಂದೆ ಕೊಪ್ಪ ಬಸ್ ನಿಲ್ದಾಣದ ಕೊನೆಯ ಎರಡು ಅಂಗಡಿಗಳ ಮುಂಭಾಗ ತೆರೆವು ಸಾಧನೆ ಮಾಡಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಆಡಳಿತ ವರ್ಗಕ್ಕೆ ಇದು ಜೇಬು ಭರ್ತಿಯಾಗುವ ಮೂಲವಾದ್ದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ನಮಗೇನು ಎಂಬ ತಾತ್ಸಾರದಿಂದ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಇಂತಹ ನಡೆಯ ವಿರುದ್ಧ ಸಾರ್ವಜನಿಕರು ತಕ್ಕಪಾಠ ಕಲಿಸಬೇಕೆಂದು ಪಟ್ಟಣದ ನಾಗರಿಕ ಹಿತರಕ್ಷಣಾ ವೇದಿಕೆ ಮನವಿ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.