ಬಾಳೆಹೊನ್ನೂರು: ರಾಜ್ಯದಲ್ಲಿ ಪ್ರತ್ಯೇಕವಾಗಿ ಸುಮಾರು 2 ರಿಂದ 3 ಸಾವಿರ ಎಕರೆ ಜಾಗ ಗುರುತಿಸಿ ಹಾವಳಿ ನಡೆಸುವ, ದಾಳಿ ಮಾಡುವ ಆನೆಗಳನ್ನು ಅಲ್ಲಿಗೆ ಅಟ್ಟುವ ಕೆಲಸ ಆಗಬೇಕಿದೆ. ಇದನ್ನು ಮಾಡಲು ಕನಿಷ್ಠ ₹50 ರಿಂದ ₹70 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಆನೆ ತುಳಿತದಿಂದ ಇತ್ತೀಚೆಗೆ ಮೃತಪಟ್ಟ ಅಂಡವಾನೆ ಗ್ರಾಮದ ಜಾಗ್ರ ಸುಬ್ಬೇಗೌಡರ ಮನೆಗೆ ಈಚೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಲೆನಾಡಿನಲ್ಲಿ ಶಾಶ್ವತವಾದ ಆನೆ ದೊಡ್ಡಿ ಅಥವಾ ಆನೆ ಕಂದಕವನ್ನು ನಿರ್ಮಾಣ ಮಾಡಬೇಕಿದೆ. ಈ ಭಾಗದಲ್ಲಿ ಕಾಡುಕೋಣವೂ ಜನರನ್ನು ಕೊಂದ ಉದಾಹರಣೆ ಇದೆ. ಈ ಹಿನ್ನೆಲೆಯಲ್ಲಿ ಶಾಶ್ವತವಾಗಿ ಕಾಡುಪ್ರಾಣಿಗಳ ಉಪಟಳವನ್ನು ಹೇಗೆ ನಿಲ್ಲಿಸಬೇಕು ಎಂಬ ಬಗ್ಗೆ ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಆನೆ ದಾಳಿಯಂತಹ ಗಂಭೀರ ಪ್ರಕರಣವನ್ನು ಶಾಶ್ವತವಾಗಿ ಪರಿಹರಿಸಲು ಆನೆ ದೊಡ್ಡಿ ನಿರ್ಮಾಣ ಮಾಡುವ ಯೋಜನೆಯನ್ನು ಕೇಂದ್ರ ಅರಣ್ಯ ಸಚಿವರ ಬಳಿ ಮಾತನಾಡಿದ್ದು, ಈ ಯೋಜನೆ ಕಾರ್ಯಗತಗೊಂಡಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವ ವಿಶ್ವಾಸವಿದೆ ಎಂದರು.
ಅರಣ್ಯ ಸಚಿವರ ಅವೈಜ್ಞಾನಿಕ ಆದೇಶಗಳ ಕುರಿತು ಪ್ರತಿಕ್ರಿಯಿಸಿದ ಸಂಸದ, ಇಂತಹ ಸೂಕ್ಷ್ಮ ಸಂದರ್ಭದಲ್ಲಿ ನಾನು ಯಾರನ್ನು ಟೀಕೆ ಮಾಡಲು ಹೋಗಲ್ಲ. ಆದರೆ ದನ ಕರುಗಳನ್ನು ಕಾಡಿಗೆ ತೆಗೆದುಕೊಂಡು ಹೋಗಬೇಡಿ ಎಂದು ಸರ್ಕಾರ ಹೇಳಿದೆ. ಹುಲಿ, ಸಿಂಹಗಳನ್ನು ಕಾಡಿನಲ್ಲಿ ಇಟ್ಟುಕೊಳ್ಳಿ ಎಂದು ಜನರೂ ಹೇಳಿದ್ದಾರೆ. ಈ ಬಗ್ಗೆ ಚರ್ಚಿಸುತ್ತಾ ಕುಳಿತರೆ ಎರಡೂ ಸಮಸ್ಯೆಗಳೂ ಉಲ್ಭಣವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜಕಾರಣದಲ್ಲಿ, ಅಧಿಕಾರದಲ್ಲಿ ಇದ್ದವರು ಜಾಗ್ರತೆಯಿಂದ ಹೆಜ್ಜೆ ಇಡುವುದು ಒಳಿತು ಎಂದರು.
ಮಾಜಿ ಸಚಿವ ಡಿ.ಎನ್.ಜೀವರಾಜ್, ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ, ಮುಖಂಡರಾದ ಪ್ರಭಾಕರ್ ಪ್ರಣಸ್ವಿ, ಬಿ.ಜಗದೀಶ್ಚಂದ್ರ, ಎ.ಸಿ.ಸಂತೋಷ್ ಅರನೂರು, ಪ್ರದೀಪ್ ಕಿಚ್ಚಬ್ಬಿ, ಮಂಜು ಶೆಟ್ಟಿ, ಪ್ರಭಾಕರ್ ಕೋಗಳಿ, ವಿನೋದ್ ಬೊಗಸೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.