ತರೀಕೆರೆ: ‘ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ಕುದುರೆಮುಖವು ವಿಶ್ವಪಾರಂಪರಿಕ ಪಟ್ಟಿಯಲ್ಲಿ 38ನೇ ಜೈವಿಕ ತಾಣವಾಗಿದೆ. ಶ್ರೀಮಂತಿಕೆಯಿಂದ ಕೂಡಿದ್ದ ಕುದುರೆಮುಖ ಪಟ್ಟಣ ಕೇವಲ 20 ವರ್ಷಗಳಲ್ಲಿಯೇ ಹಾಳು ಪಟ್ಟಣವಾಗಿದೆ. ಅಲ್ಲಿನ 70-80 ಕುಟುಂಬಗಳು ಇಂದಿಗೂ ಅನಾಥ ಪ್ರಜ್ಞೆಯಲ್ಲಿ ಗತ ವೈಭವದ ಬದುಕನ್ನು ನೆನಪಿಸಿಕೊಂಡು ಬದುಕುತ್ತಿವೆ’ ಎಂದು ಲಕ್ಕವಳ್ಳಿಯ ಸಾಹಿತಿ ಚಕ್ರವರ್ತಿ ಸಿ ಹೇಳಿದರು.
ತಾಲ್ಲೂಕು ಕಸಾಪದಿಂದ ಲಿಂಗದಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ‘ಕುದುರೆಮುಖ ಪರಿಸರ ಚಿಂತನೆ ಕುರಿತು ಉಪನ್ಯಾಸ ನೀಡಿದರು.
ಮನುಷ್ಯರು ನೀಡುವ ಆಹಾರದಿಂದಾಗಿ ಮಂಗಗಳು ಕಾಡಿನಲ್ಲಿ ಆಹಾರ ಹುಡುಕುವುದನ್ನೇ ಮರೆತು ರಸ್ತೆ ಬದಿಯಲ್ಲಿ ಜನ ಬಿಸಾಕುವ ಆಹಾರಕ್ಕಾಗಿ ಕಾದು ವಾಹನಗಳಿಗೆ ಸಿಲುಕಿ ಸಾಯುತ್ತಿವೆ. ಇಂತಹ ತಪ್ಪುಗಳನ್ನು ಜನರು ಇನ್ನಾದರೂ ಬಿಡಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ತಾಲ್ಲೂಕು ಕಸಾಪವು ಶಾಲಾ, ಕಾಲೇಜು ಮಕ್ಕಳಿಗಳಿಗೆ ಸಾಹಿತ್ಯದ ಅರಿವು ಮೂಡಿಸುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಸುತ್ತಿದೆ’ ಎಂದರು.
ಪ್ರೌಢಶಾಲೆಯ ಉಪ ಪ್ರಾಚಾರ್ಯ ಜೆ.ಎಂ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಆರ್.ತಮ್ಮಯ್ಯ ಉಡೇವಾ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಅನಸೂಯ, ಮರುಳಸಿದ್ಧಯ್ಯ ಪಟೇಲ್, ಅರಿವು ವೇದಿಕೆ ಅಧ್ಯಕ್ಷ ಶಿವಣ್ಣ, ಭಗವಾನ್, ಚಂದ್ರಶೇಖರ್, ಜಯಪ್ಪ, ಶಿಕ್ಷಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.