ADVERTISEMENT

ಶೃಂಗೇರಿ | ಕುರುಬಕೇರಿ ಜನರಿಗಿಲ್ಲ ಶುದ್ಧ ನೀರಿನ ಸೌಲಭ್ಯ

9 ವರ್ಷಗಳಿಂದ ಕಾರ್ಯನಿರ್ವಹಿಸಿದ ಶುದ್ಧಗಂಗಾ ಘಟಕ

ರಾಘವೇಂದ್ರ ಕೆ.ಎನ್
Published 3 ಮಾರ್ಚ್ 2025, 7:08 IST
Last Updated 3 ಮಾರ್ಚ್ 2025, 7:08 IST
   

ಶೃಂಗೇರಿ: ತಾಲ್ಲೂಕಿನ ಕುರುಬಕೇರಿಯಲ್ಲಿರುವ ಶುದ್ಧಗಂಗಾ ಘಟಕ ಸ್ಥಾಪಿಸಿ 9 ವರ್ಷಗಳಾದರೂ ಅದು ಕಾರ್ಯ ನಿರ್ವಹಿಸುತ್ತಿಲ್ಲ.

ದೇವರಾಜ ಅರಸು ಜನ್ಮಶತಾಬ್ದಿ ಕಾರ್ಯಕ್ರಮದ ಅಂಗವಾಗಿ ಸರ್ಕಾರ ಜಿಲ್ಲೆಗೆ 40 ಶುದ್ಧ ಕುಡಿಯುವ ನೀರಿನ ಘಟಕಗಳನ್ನು 9 ವರ್ಷದ ಹಿಂದೆ ನೀಡಿತ್ತು. ಕುರುಬಕೇರಿ ರಸ್ತೆಯ ಪಕ್ಕದಲ್ಲಿ ₹6.97 ಲಕ್ಷ ಅನುದಾನದಲ್ಲಿ ಶುದ್ಧಗಂಗಾ ನೀರಿನ ಘಟಕ ಸ್ಥಾಪಿಸಿದಾಗ ಸ್ಥಳೀಯರು ನೀರಿನ ಕೊರತೆ ನೀಗಬಹುದು ಎಂಬ ನಿರೀಕ್ಷೆ ಹೊಂದಿದ್ದರು. ಆದರೆ ಅವರ ಭರವಸೆ ಹುಸಿಯಾಗಿದೆ.

ಈ ಘಟಕದಿಂದ ಶೃಂಗೇರಿಗೆ ಬಂದು ಹೋಗುವ ಆಂಧ್ರಪ್ರದೇಶ, ತಮಿಳುನಾಡು, ಬೆಂಗಳೂರು, ಮೈಸೂರು ಮೊದಲಾದ ಕಡೆಗಳಿಂದ ಪ್ರವಾಸಿಗರು ಇದೇ ಮಾರ್ಗವಾಗಿ ಸಂಚರಿಸುವುದರಿಂದ ಅವರಿಗೆ ಶುದ್ಧ ಕುಡಿಯುವ ನೀರು ಸುಲಭ ದರದಲ್ಲಿ ದೊರಕುತ್ತಿತ್ತು. ತಾಲ್ಲೂಕಿನ ಹಲವಾರು ಕಚೇರಿ, ಶಾಲೆ– ಕಾಲೇಜು, ಅಂಗಡಿ, ಸುತ್ತಮುತ್ತಲಿನ ಮನೆಗಳು ಹಾಗೂ ಸಾರ್ವಜನಿಕರಿಗೆ ಸದುಪಯೋಗವಾಗುತ್ತಿತ್ತು. ಆದರೆ ಫಟಕದ ಸುತ್ತಮುತ್ತ ಈಗ ಕಳೆ ಬೆಳೆದಿದೆ.

ADVERTISEMENT

ತಾಲ್ಲೂಕಿನಲ್ಲಿ ಮೂರು ವರ್ಷಗಳಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗುತ್ತಿದ್ದು ಕೆರೆ, ಬಾವಿ, ಹಳ್ಳ, ಕೊಳ್ಳಗಳಲ್ಲಿ ಅಂರ್ತಜಲ ತಳಕಂಡಿದೆ. ಈ ಘಟಕ ಪ್ರಾರಂಭವಾಗಿದ್ದರೆ ಅನುಕೂಲವಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟಕ ಸ್ಥಾಪಿಸುವ ಹೊಣೆ ಹೊತ್ತ ಏಜೆನ್ಸಿಯ ಮುಖ್ಯಸ್ಥರು, ಜಿಲ್ಲಾಡಳಿತ ಶೀಘ್ರ ಈ ಕುರಿತು ಗಮನ ಹರಿಸಬೇಕು. ಘಟಕಕ್ಕೆ ನಿರಂತರವಾಗಿ ನೀರು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರಾದ ಕೃಷ್ಣಪ್ಪ ಒತ್ತಾಯಿಸಿದರು.

‘ಶುದ್ಧ ನೀರಿನ ಘಟಕ ಪ್ರಾರಂಭವಾದರೆ ನಮಗೆ ಅನುಕೂಲವಾಗುತ್ತದೆ. ಬೇಸಿಗೆಯಲ್ಲಿ ಕೊಳಚೆ ನೀರು, ಮಳೆಗಾಲದಲ್ಲಿ ತುಂಗಾ ನದಿಯ ಮಣ್ಣು ಮಿಶ್ರಿತ ನೀರಿಗೆ ಅವಲಂಬಿಸಬೇಕಾಗಿದೆ’ ಎಂದು ಕುರಬಕೇರಿ ನಿವಾಸಿ ಸತ್ಯವತಿ ಅಳಲು ತೋಡಿಕೊಂಡರು.

ಸರ್ಕಾರವು ಯೋಜನೆ ಅನುದಾನಗಳನ್ನು ನೀಡುತ್ತಿದೆ. ಆದರೆ ಅವು ಜನರನ್ನು ತಲುಪದಿರಲು ಅಧಿಕಾರಿಗಳ ವಿಳಂಬ ಧೋರಣೆಯೇ ಕಾರಣ
ಪ್ರಶಾಂತ್, ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.