ಚಿಕ್ಕಮಗಳೂರು: ಜಿಲ್ಲೆಯಲ್ಲಿ ಒಂದೆಡೆ ಮಲೆನಾಡಿನಲ್ಲಿ ನಿರಂತರ ಮಳೆಯಿಂದ ಕಾಫಿ ಸೇರಿ ಪ್ಲಾಂಟೇಷನ್ ಬೆಳೆಗಳಿಗೆ ಕೊಳೆ ರೋಗದ ಆತಂಕ ಎದುರಾಗಿದ್ದರೆ, ಬಯಲು ಸೀಮೆಯಲ್ಲಿ ಮಳೆ ಇಲ್ಲದೆ ಕೃಷಿ ಬೆಳೆಗಳು ಸೊರಗುತ್ತಿವೆ. ಮೋಡ ಕವಿದ ವಾತಾವರಣ ಇದ್ದರೂ ತಿಂಗಳಿಂದ ಮಳೆ ಇಲ್ಲವಾಗಿದ್ದು, ಬಿತ್ತನೆ ಮಾಡಿರುವ ಬೆಳೆ ನೆಲದಲ್ಲೇ ಉಳಿದಿದೆ.
ಚಿಕ್ಕಮಗಳೂರು ತಾಲ್ಲೂಕು ಮಲೆನಾಡು ಮತ್ತು ಬಯಲು ಸೀಮೆ ಎರಡನ್ನೂ ಹೊಂದಿದೆ. ಲಕ್ಯಾ, ಅಂಬಳಿ, ಕಳಸಾಪುರ ಹೋಬಳಿಗಳು ಮಳೆ ಕೊರತೆ ಎದುರಿಸುತ್ತಿವೆ. ನಿತ್ಯವೂ ಕವಿಯುವ ಮೋಡದ ನಡುವೆ ಮಳೆ ಬರುವ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ. ಆದರೆ ಮಳೆಯ ಸುಳಿವು ಇಲ್ಲವಾಗಿರುವುದು ಅವರನ್ನು ಕಂಗಾಲಾಗಿಸಿದೆ.
ಲಕ್ಯಾ, ಕ್ಯಾತನಬೀಡು, ಕಣಿವೆಹಳ್ಳಿ, ದೇವಗೊಂಡನಹಳ್ಳಿ, ಸಿಂದಿಗೆರೆ, ಹುಲಿಕೆರೆ, ಕೇತಮಾರನಹಳ್ಳಿ, ಕಬ್ಬಿಗರಹಳ್ಳಿ, ಶಿರಬಡಿಗೆ, ಬೆಳವಾಡಿ, ಎಸ್.ಬಿದರೆ, ಸ್ವಾಮಿಕಟ್ಟೆ, ಜೋಡಿ ಲಿಂಗದಹಳ್ಳಿ, ಚಟ್ನಹಳ್ಳಿ, ಅಂಬಳೆ, ಕನ್ನೇನಹಳ್ಳಿ, ಬಂಡೀಹಳ್ಳಿ, ಕುರುವಂಗಿ, ಮಲ್ಲೇದೇವರಹಳ್ಳಿ, ಹರಿಹರದಳ್ಳಿ, ನೆಟ್ಟೆಕೆರೆಹಳ್ಳಿ, ಸಗನಿಪುರ, ಕಳಸಾಪುರ ಸುತ್ತಮುತ್ತ ಕೃಷಿ ಈ ವರ್ಷ ಸಂಕಷ್ಟಕ್ಕೆ ಸಿಲುಕಿದೆ. ಕಡೂರು ತಾಲ್ಲೂಕಿನ ಹಲವು ಹಳ್ಳಿಗಳ ಸೇರಿ ಹಾಸನ ಜಿಲ್ಲೆಯ ಗಡಿಯ ಬಾಣಾವರ, ಜಾವಗಲ್ ತನಕ ಇದೇ ಸ್ಥಿತಿ ಇದೆ ಎಂದು ರೈತರು ಹೇಳುತ್ತಾರೆ.
ಪೂರ್ವ ಮುಂಗಾರು ಮಳೆ ಅಬ್ಬರಿಸಿದ್ದರಿಂದ ಬಿತ್ತನೆ ಕಾರ್ಯವೂ ಸಮಯಕ್ಕೆ ಸರಿಯಾಗಿ ಆಗಲಿಲ್ಲ. ಆ ಮಳೆ ಮುಗಿದು ಮುಂಗಾರು ಮಳೆ ಆರಂಭವಾದ ಬಳಿಕ ಈ ಭಾಗಕ್ಕೆ ಮಳೆಯೇ ಬಂದಿಲ್ಲ. ಬಿತ್ತನೆ ಮಾಡಿದ್ದ ಈರುಳ್ಳಿ, ಎಳ್ಳು, ಹೆಸರು, ಉದ್ದು, ಹತ್ತಿ, ಕೊತ್ತಂಬರಿ, ಹಲಸಂದೆ, ಶೇಂಗಾ, ಆಲೂಗಡ್ಡೆ ಬೆಳೆಗಳು ನೆಲ ಬಿಟ್ಟು ಮೇಲೆ ಎದ್ದಿಲ್ಲ.
ರಾಗಿ, ಜೋಳ ಬಿತ್ತನೆಗೆ ಭೂಮಿ ಹದ ಮಾಡಿ 15 ದಿನಗಳಿಂದ ರೈತರು ಕಾದಿದ್ದಾರೆ. ಮಳೆಯ ಸುಳಿವಿಲ್ಲವಾಗಿದ್ದು, ಆಗೊಮ್ಮೆ ಈಗಮ್ಮೆ ನೀರು ಚುಮುಕಿಸಿದಂತೆ ಬರುವ ತುಂತುರು ಮಳೆಗೆ ಹೋಲದ ಧೂಳನ್ನೂ ಅಡಗಿಸಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.
ಈ ಭಾಗದಲ್ಲಿ ಯಾವುದೇ ಊರಿಗೆ ಹೋದರೂ ರೈತರ ಮೊಗದಲ್ಲಿ ಸಂತಸ ಕಾಣೆಯಾಗಿದೆ. ಕ್ಯಾತನಬೀಡಿನಲ್ಲಿ ಊರು ಮಂದಿನ ಕಟ್ಟೆಯಲ್ಲಿ ಕುಳಿತಿದ್ದ ಬಸವೇಗೌಡ ಅವರನ್ನು ಮಾತಿಗೆ ಎಳೆದಾಗ, ತಮ್ಮ ಹೊಲಕ್ಕೇ ಕರೆದೊಯ್ದು ಬೆಳೆಯ ಸ್ಥಿತಿ ವಿವರಿಸಿದರು.
‘ಮಳೆ ಬಂದು ತಿಂಗಳು ಸಮೀಪಸುತ್ತಿದೆ. ಮೇ ತಿಂಗಳಿನಲ್ಲಿ ವಿಪರೀತ ಸುರಿದು ಬಿತ್ತನೆಗೆ ತೊಡಕುಂಟು ಮಾಡಿತು. ಈಗ ಮುಗಿಲು ಸೇರಿ ಎಷ್ಟೋ ದಿನಗಳಿವೆ. ಹೊಲದಲ್ಲಿ ಈರುಳ್ಳಿ, ಹತ್ತಿ, ಕೊತ್ತಂಬರಿ ಬಿತ್ತನೆ ಮಾಡಿದ್ದೇನೆ. ನೀರಾವರಿ ಸೌಲಭ್ಯ ಇಲ್ಲ. 15 ದಿನಗಳ ಹಿಂದೆ ಮಳೆ ಬಂದಿದ್ದರೆ ತಕ್ಕ ಮಟ್ಟಿಗೆ ಬೆಳೆ ಉಳಿಯುತ್ತಿತ್ತು. ಈಗ ಎಲ್ಲವೂ ಹಾಳಾಗಿದೆ’ ಎಂದು ಹೇಳಿದರು.
‘ಈರುಳ್ಳಿ, ಕೊತ್ತಂಬರಿ ಬೆಳೆಗಳು ನೆಲದಿಂದ ಮೇಲೆ ಎದ್ದಿಲ್ಲ. ಎದೆಯುದ್ದಕ್ಕೆ ಬೆಳೆಯಬೇಕಿದ್ದ ಹತ್ತಿ ಗೇಣುದ್ದದಲ್ಲೇ ಹೂವು ಬಿಟ್ಟಿದೆ. ಅಷ್ಟೂ ಬೆಳೆಗಳು ನಮ್ಮ ಕೈ ತಪ್ಪಿ ಹೋಗಿವೆ. ಕಾರ್ಮಿಕರ ಕೊರತೆ ನಡುವೆ ಕೂಲಿಯೂ ದುಬಾರಿಯಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ ಮಾಡಿದ್ದ ಪೈರು ಹಾಳಾಗಿರುವುದನ್ನು ನೋಡಿದರೆ ಸಂಕಟವಾಗುತ್ತಿದೆ’ ಎಂದು ಬಸವೇಗೌಡ ಅಳಲು ತೋಡಿಕೊಂಡರು.
‘ಚಿಕ್ಕಮಗಳೂರು ನಗರದ ತನಕ ಬರುವ ಮಳೆಯಲ್ಲಿ ಅರ್ಧದಷ್ಟು ಮಳೆ ಬಂದಿದ್ದರೆ ಬೆಳೆಗಳು ಉಳಿಯುತ್ತಿದ್ದವು. ಮಳೆ ಇಲ್ಲದ ನಮ್ಮ ಕಷ್ಟ ಯಾರಿಗೆ ಹೇಳಬೇಕು, ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ’ ಎಂದರು.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಮಳೆಯಾಗಿದೆ ಎಂದು ಎಲ್ಲರೂ ತಿಳಿದಿದ್ದಾರೆ. ನಾವು ಹದ ಮಳೆ ಕಂಡು ತಿಂಗಳೇ ಕಳದಿದೆ. ಎಲ್ಲಾ ಬೆಳೆಗಳು ಮಣ್ಣು ಪಾಲಾಗಿವೆ.ಬಸವೇಗೌಡ ಕ್ಯಾತನಬೀಡು ರೈತ
ಈರುಳ್ಳಿ ಬೆಳೆ ಬಿತ್ತನೆ ಮಾಡಿದ ಬಳಿಕ ಒಮ್ಮೆಯೂ ಮಳೆ ಬಂದಿಲ್ಲ. ನೀರಾವರಿ ಸೌಕರ್ಯ ಇಲ್ಲ ಇತ್ತ ಮಳೆ ಬರುತ್ತಿಲ್ಲ. ಮೊಳಕೆಯೊಡೆದ ಈರುಳ್ಳಿ ಈಗ ಬತ್ತಿ ಹೋಗಿದೆ.ಗೌರಮ್ಮ ಕೇತಮಾರನಹಳ್ಳಿ ರೈತ ಮಹಿಳೆ
ಕೆರೆಗಳೂ ಖಾಲಿ ಖಾಲಿ
ಈ ಭಾಗದ ಹಳ್ಳಿಗಳಲ್ಲಿ ಇರುವ ಕೆರೆ ಕಟ್ಟೆಗಳಲ್ಲೂ ನೀರಿಲ್ಲವಾಗಿದ್ದು ಖಾಲಿಯಾಗಿವೆ. ಕಣಿವೆಹಳ್ಳಿ ಸಿಂದಿಗೆರೆ ಹುಲಿಕೆರೆ ಸುತ್ತಮುತ್ತಲ ಕೆರೆಗಳಲ್ಲಿ ನೀರಿಲ್ಲವಾಗಿದೆ. ಕೆರೆಗಳಲ್ಲಿ ನೀರಿಲ್ಲವಾಗಿದ್ದು ಗಿಡಗಂಟಿಗಳು ಬೆಳೆದು ನಿಂತಿವೆ. ಕೊಳವೆ ಬಾವಿ ಹೊಂದಿರುವ ರೈತರು ಟೊಮೊಟೊ ಬೀನ್ಸ್ ಬೆಳೆದಿದ್ದು ಅವುಗಳಿಗೂ ನೀರಿನ ಕೊರತೆಯ ಆತಂಕದಲ್ಲಿದ್ದಾರೆ.
ರಾಗಿ ಬಿತ್ತನೆ ಹೆಚ್ಚಾಗುವ ನಿರೀಕ್ಷೆ
ಕೃಷಿ ಇಲಾಖೆ ವ್ಯಾಪ್ತಿಗೆ ಬರುವ ಬೆಳೆಗಳ ಬಿತ್ತನೆ ಇನ್ನೂ ಹೆಚ್ಚಾಗಿ ಆಗಿಲ್ಲ. ರಾಗಿ ಬಿತ್ತನೆ ಈ ಬಾರಿ ಹೆಚ್ಚಾಗುವ ನಿರೀಕ್ಷೆ ಹೊಂದಿದ್ದೇವೆ ಎಂದು ಕೃಷಿ ಜಂಟಿ ನಿರ್ದೇಶಕಿ ಸುಜಾತಾ ತಿಳಿಸಿದರು. ಹೆಸರು ಅಲಸಂದೆ ಬೆಳೆ ಬಿತ್ತನೆಯಾಗಿದ್ದು ಲಕ್ಯಾ ಹೋಬಳಿ ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯಲ್ಲಿ ಮಳೆ ಕೊರತೆಯಾಗಿದೆ. ರಾಗಿ ಬಿತ್ತನೆಗೆ ಆಗಸ್ಟ್ ಕೊನೆ ತನಕ ಅವಕಾಶ ಇದೆ. ಮುಂದಿನ ದಿನಗಳಲ್ಲಿ ಮಳೆಯಾದರೆ ರಾಗಿ ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ಆಗುವ ಸಾಧ್ಯತೆ ಇದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.