ADVERTISEMENT

ಎಂಜಿನಿಯರಿಂಗ್‌ ಗುಣಮಟ್ಟ ಸುಧಾರಣೆಗೆ ಲ್ಯಾಮ್ಡಾ ಪರಿಚಯ: ಸಿ.ಎನ್‌.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 12:30 IST
Last Updated 11 ನವೆಂಬರ್ 2019, 12:30 IST
ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಡಾ.ಸಿ.ಎನ್‌.ಅಶ್ವತ್ಥನಾರಾಯಣ   

ಚಿಕ್ಕಮಗಳೂರು: ‘ಎಂಜಿನಿಯರಿಂಗ್ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ‘ಲ್ಯಾಮ್ಡಾ’ (ಟ್ಯಾಲೆಂಟ್‌ ಎಕ್ಸಿಲರೆಟರ್ಸ್) ಎಂಬ ಕಾರ್ಯಕ್ರಮವನ್ನು ಪರಿಚಯಿಸಲು ಉದ್ದೇಶಿಸಲಾಗಿದೆ’ ಎಂದು ಉನ್ನತಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇಲ್ಲಿ ಸೋಮವಾರ ತಿಳಿಸಿದರು.

ಪ್ರತಿಭೆ ಜೊತೆಗೆ ಔದ್ಯಮಿಕ ಕ್ಷೇತ್ರ ಬೇಡುವ ಕೌಶಲ ಕಲಿಸಿ ಉದ್ಯೋಗ ಕೊಡಿಸುವುದೇ ‘ಲ್ಯಾಮ್ಡಾ’ ಕಾರ್ಯಕ್ರಮದ ಉದ್ದೇಶ. ಇದೊಂದು ‘ಉದ್ಯೋಗ ಖಾತ್ರಿ’ ಕಾರ್ಯಕ್ರಮ. ಡಿಪ್ಲೊಮಾ, ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಪರಿಚಯಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಲಿಕೆ ಜಾಗದಲ್ಲೇ ಉದ್ಯೋಗಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು. ಔದ್ಯಮಿಕ ಕ್ಷೇತ್ರದ ಬೇಡಿಕೆಗಳಿಗೆ ತಕ್ಕಂತೆ ಸಜ್ಜುಗೊಳಿಸಲಾಗುವುದು. ಕೋರ್ಸ್‌ನಲ್ಲಿ ಪ್ರತ್ಯೇಕವಾಗಿ ‘ಲ್ಯಾಮ್ಡಾ’ ಸೇರಿಸಲಾಗುವುದು. ಸರ್ಕಾರಿ ಕಾಲೇಜುಗಳಿಗೆ ಮೊದಲು ಆದ್ಯತೆ ನೀಡಿ, ನಂತರ ಖಾಸಗಿ ಕಾಲೇಜುಗಳಿಗೂ ವಿಸ್ತರಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ADVERTISEMENT

ಮೆಡಿಕಲ್‌ ಸೀಟು ಬ್ಲಾಕಿಂಗ್‌ಗೆ ಸಂಬಂಧಿಸಿದಂತೆ ಆದಾಯ ತೆರಿಗೆ (ಐಟಿ) ಇಲಾಖೆಯಿಂದ ವಿಚಾರಣೆ ನಡೆಯುತ್ತಿದೆ. ಸಿಬಿಐ ತನಿಖೆಗೆ ವಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಉತ್ತರಿಸಿದರು.

ಮುಂದಿನ ದಿನಗಳಲ್ಲಿ ಇಂಥ ದುರ್ಬಳಕೆಯಾಗದಂತೆ ಕ್ರಮ ವಹಿಸಲಾಗುವುದು. ‘ಮಾಪ್‌ ಅಪ್‌’ ಸುತ್ತಿಗೂ ಮುನ್ನಾ ಸೀಟು ಒಪ್ಪಿಸುವ ವಿಧಾನ ಜಾರಿಗೊಳಿಸಿರೆ ಇಂಥ ದುರ್ಬಳಕೆ ಮರುಕಳಿಸಲ್ಲ ಎನಿಸುತ್ತದೆ. ಈ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ರಾಜು ಕಾಗೆ ಅವರು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಗವಾಡ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವುದೇ ಅನುಮಾನ ಇದೆ, ಯಾಕೆಂದರೆ ಶ್ರೀಮಂತ್ ಪಾಟೀಲ ರಾಜೀನಾಮೆ ನೀಡಿಲ್ಲ. ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.