ADVERTISEMENT

ಚಿಕ್ಕಮಗಳೂರು | ಅಕ್ರಮ ಭೂಮಂಜೂರಾತಿ: ಶಾಸಕರೂ ನೇರ ಹೊಣೆ!

ತಪ್ಪೆಸಗಿದವರ ಪಟ್ಟಿಯಲ್ಲಿ 326 ಸಿಬ್ಬಂದಿ; ಆರು ಮಾಜಿ ಶಾಸಕರು

ವಿಜಯಕುಮಾರ್ ಎಸ್.ಕೆ.
Published 27 ಸೆಪ್ಟೆಂಬರ್ 2024, 5:54 IST
Last Updated 27 ಸೆಪ್ಟೆಂಬರ್ 2024, 5:54 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಚಿಕ್ಕಮಗಳೂರು: ಕಡೂರು ಮತ್ತು ಮೂಡಿಗೆರೆ ತಾಲ್ಲೂಕಿನ 10 ಸಾವಿರ ಎಕರೆಗೂ ಹೆಚ್ಚು ಅಕ್ರಮ ಭೂಮಂಜೂರಾತಿ ಪ್ರಕರಣದಲ್ಲಿ ತಪ್ಪೆಸಗಿದವರ ಪಟ್ಟಿಯಲ್ಲಿ ಎರಡೂ ತಾಲ್ಲೂಕಿನ 326 ಅಧಿಕಾರಿಗಳು ಮತ್ತು ಆರು ಮಾಜಿ ಶಾಸಕ ಹೆಸರುಗಳಿವೆ. ಕಾನೂನು ಮೀರಿ ಅಕ್ರಮವಾಗಿ ಭೂಮಂಜೂರಾತಿ ಆಗಿರುವುದಕ್ಕೆ ಭೂಸಕ್ರಮೀಕರಣ ಸಮಿತಿಯನ್ನೂ ತನಿಖಾ ತಂಡ ಹೊಣೆ ಮಾಡಿದೆ. 

ADVERTISEMENT

ಆರು ಮಾಜಿ ಶಾಸಕರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷದವರೂ ಇದ್ದಾರೆ. ಕಡೂರು ವಿಧಾನಸಭಾ ಕ್ಷೇತ್ರ ಶಾಸಕರಾಗಿದ್ದ ವೈ.ಎಸ್.ವಿ.ದತ್ತ, ಬೆಳ್ಳಿ ಪ್ರಕಾಶ್, ಮೂಡಿಗೆರೆ ಕ್ಷೇತ್ರ ಪ್ರತಿನಿಧಿಸಿದ್ದ ಮೋಟಮ್ಮ, ಎಂ.ಪಿ.ಕುಮಾರಸ್ವಾಮಿ, ಬಿ.ಬಿ.ನಿಂಗಯ್ಯ ಅವರ ಹೆಸರುಗಳು ಎರಡೂ ತಾಲ್ಲೂಕುಗಳ ಅಕ್ರಮ ಮಂಜೂರಾತಿ ತನಿಖೆಗೆ ನೇಮಿಸಿದ್ದ 13 ತಹಶೀಲ್ದಾರ್‌ಗಳ ತಂಡ ಸರ್ಕಾರಕ್ಕೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ದಾಖಲಾಗಿವೆ. ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಆ ಹೋಬಳಿ ಪ್ರತಿನಿಧಿಸಿದ್ದ ಸಿ.ಟಿ.ರವಿ ಅವರನ್ನೂ ಪಟ್ಟಿಯಲ್ಲಿ ಹೆಸರಿಸಲಾಗಿದೆ.

‘ಶಾಸಕೇತರ ಅಧ್ಯಕ್ಷರಾಗಿದ್ದ ಬಿ.ಎಲ್.ಪ್ರಕಾಶ್ ಮತ್ತು ಎರಡೂ ತಾಲ್ಲೂಕಿನ ಭೂಸಕ್ರಮೀಕರಣ ಸಮಿತಿಯಲ್ಲಿ ಕಾರ್ಯನಿರ್ವಹಿಸಿರುವ 23 ಸದಸ್ಯರು ಪಟ್ಟಿಯಲ್ಲಿದ್ದಾರೆ. ಸರ್ಕಾರದ ಆಸ್ತಿ ಉಳಿಸುವ ಮತ್ತು ಅಧಿಕಾರಿಗಳು ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸಿರುವುದನ್ನು ಖಚಿತಪಡಿಸಿಕೊಳ್ಳುವ ಮಹತ್ತರ ಹೊಣೆಯನ್ನು ಸಮಿತಿ ಹೊಂದಿದೆ. ಆದ್ದರಿಂದ ಅನರ್ಹ ಪ್ರಕರಣಗಳ ಮಂಜೂರಾತಿಗೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನೇರ ಹೊಣೆಗಾರರು’ ಎಂದು ತನಿಖಾ ತಂಡ ವರದಿಯಲ್ಲಿ ಉಲ್ಲೇಖಿಸಿದೆ.

23 ತಹಶೀಲ್ದಾರ್‌ಗಳು, 18 ಶಿರಸ್ತೆದಾರರು, 48 ಕಂದಾಯ ನಿರೀಕ್ಷಕರು, 104 ಗ್ರಾಮ ಆಡಳಿತಾಧಿಕಾರಿಗಳು ಸೇರಿ ಒಟ್ಟು 326 ಸಿಬ್ಬಂದಿ ತಪ್ಪಿತಸ್ಥರ ಪಟ್ಟಿಯಲ್ಲಿದ್ದಾರೆ.

ಒಟ್ಟು 10,598 ಎಕರೆ ಅಕ್ರಮ ಮಂಜೂರಾತಿಯನ್ನು ಅವುಗಳ ಅಕ್ರಮದ ಸ್ವರೂಪದ ಆಧಾರದ ಮೇಲೆ ಮೂರು ಭಾಗವಾಗಿ ಮಾಡಲಾಗಿದೆ. ಎರಡೂ ತಾಲ್ಲೂಕಿನಿಂದ ಒಟ್ಟು 6,248 ಎಕರೆಯನ್ನು ಅನರ್ಹ ಎಂದು ತನಿಖಾ ತಂಡ ವರದಿ ನೀಡಿದೆ. ಇವುಗಳ ಪೈಕಿ ಅರ್ಜಿಯೇ ಇಲ್ಲದ, ಅರ್ಹತಾ ದಿನಾಂಕ ಮೀರಿದ, ಅರ್ಜಿ ವಿವರದ ದಾಖಲೆ ತಿದ್ದುಪಡಿ ಮಾಡಿದ, ಅನಧಿಕೃತ ವಿಭಾಗ ಪತ್ರ ಲಗತ್ತಿಸಿ ಅರ್ಹತೆಗಿಂತ ಹೆಚ್ಚು ಭೂಮಿ ಮಂಜೂರು ಮಾಡಿದ, ಉಳುಮೆಯನ್ನೇ ಮಾಡದ, ವಯಸ್ಸಿನ ದಾಖಲೆ ಇಲ್ಲದ, ನಮೂನೆ 50, 53, 57ರಲ್ಲಿ ಪೂರ್ವಾನುಮತಿ ಇಲ್ಲದೆ ಗೋಮಾಳ, ಶೇಂದಿವನ, ಅರಣ್ಯ, ಅಮೃತಮಹಲ್ ಕಾವಲಿನಲ್ಲಿ ಮಂಜೂರಾತಿ ನೀಡಿದ ಪ್ರಕರಣಗಳು ಸೇರಿ ಒಟ್ಟು 1,802 ಎಕರೆ ಅಕ್ರಮ ಮಂಜೂರಾತಿಯಲ್ಲಿ ಮಾತ್ರ ಸಮಿತಿಯ ಅಧ್ಯಕ್ಷರನ್ನು ಹೊಣೆ ಮಾಡಲಾಗಿದೆ.

ಉಳಿದ 8,796 ಎಕರೆ ಮಂಜೂರಾತಿಗೆ ನಡಾವಳಿ ತಿದ್ದುಪಡಿ, ಸಮಿತಿ ನಿರ್ಧಾರ ಮೀರಿ ಹೆಚ್ಚು ಭೂಮಿ ಮಂಜೂರು, ಸಮಿತಿ ವಜಾಗೊಳಿಸಿದ್ದರೂ ಮಂಜೂರು, ಸಮಿತಿಯ ಮುಂದೆ ಮಂಡನೆಯನ್ನೇ ಮಾಡದೆ ಮಂಜೂರು, ಕಡತ ಲಭ್ಯವಿಲ್ಲದೆ ಸಾಗುವಳಿ ಚೀಟಿ ನೀಡಿರುವುದು, ನಕ್ಷೆ ಲಭ್ಯವಿಲ್ಲದೆ ಮಂಜೂರು ಮಾಡಿರುವ ಪ್ರಕರಣಗಳಲ್ಲಿ ವಿಷಯ ನಿರ್ವಾಹಕರಿಂದ (ಕೇಸ್ ವರ್ಕರ್) ತಹಶೀಲ್ದಾರ್‌ಗಳ ತನಕ 326 ಸಿಬ್ಬಂದಿಯನ್ನು ಹೊಣೆ ಮಾಡಲಾಗಿದೆ. 

ಮರುಪರಿಶೀಲನೆಗೆ ಶಿಫಾರಸು ಮಾಡಿರುವ 3,736 ಎಕರೆ, ಕಾರ್ಯವೈಫಲ್ಯ ಕಂಡು ಬಂದ 617 ಎಕರೆ ಭೂಮಿ ಮಂಜೂರಾತಿಯಲ್ಲಿ ಸಮಿತಿಯನ್ನು ತನಿಖಾ ತಂಡ ಹೊಣೆ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.