
ಕಡೂರು: ದೇಶ ಕಟ್ಟುವಲ್ಲಿ ಭಾಷೆಯ ಪಾತ್ರ ಮಹತ್ವದ್ದಾಗಿದ್ದು ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ನೀಗಿಸಿ ಮಕ್ಕಳಿಗೆ ಮಾತೃಭಾಷೆಯಲ್ಲಿ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು ಎಂದು ಚನ್ನರಾಯಪಟ್ಟಣ ತಾಲ್ಲೂಕಿನ ಸಾತೇನಹಳ್ಳಿಯ ಕನ್ನಡ ಶಿಕ್ಷಕಿ ಅರ್ಷಿಯಾ ಬಾನು ಹೇಳಿದರು.
ಕಡೂರು ತಾಲ್ಲೂಕು ಬೀರೂರಿನ ಎಸ್‌ಜೆಎಂ ಪ್ರೌಢಶಾಲೆಯಲ್ಲಿ ಶನಿವಾರ ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟ ಕರ್ನಾಟಕ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಮೂರನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
‘ನಾನು ದೃಷ್ಟಿದೋಷದಿಂದ ಬಳಲಿದ್ದು, ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ನನಗೆ ನನ್ನ ತಾಯಿಯೇ ಪ್ರೇರಣೆ. ದೃಶ್ಯ ಮತ್ತು ಶ್ರಾವ್ಯ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಕಲಿಯಲು ನೆರವಾದರು. ಈ ಹಂತದಲ್ಲಿ ಮಾತೃಭಾಷೆ ಕನ್ನಡ ನನ್ನ ಆಸೆಗೆ ನೀರೆರೆಯಿತು. ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮದ ಮೇಲಿನ ಆಸ್ಥೆ ಪೋಷಕರು ಮತ್ತು ಮಕ್ಕಳಲ್ಲಿ ಕಡಿಮೆ ಆಗುತ್ತಿದ್ದು ಇದು ತಪ್ಪಬೇಕು. ಕನ್ನಡಿಗರು ಕನ್ನಡ ಬಾರದವರಿಗೂ ಕನ್ನಡ ಕಲಿಸುವ ಮೂಲಕ ಸಾರ್ಥಕತೆ ಮೆರೆಯಬೇಕು. ಬೋಧನೆ ಪರಿಣಾಮಕಾರಿ ಮಾಧ್ಯಮವಾಗಿದ್ದು, ಶಿಕ್ಷಣವನ್ನು ವೃತ್ತಿಯಾಗಿ ನೋಡುವುದಕ್ಕಿಂತ ಪ್ರವೃತ್ತಿಯಾಗಿ ಪರಿಗಣಿಸಿದಾಗ ನಾವು ಇತರರಿಗೆ ಆಸಕ್ತಿ ಮೂಡುವಂತೆ ಕಲಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸವಾಲುಗಳ ನಡುವೆ ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಗದಗ ನಗರದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ವಿಶ್ವನಾಥ ಬೇಂದ್ರೆ ಮಾತನಾಡಿ, ಪಾಲಕರಲ್ಲಿ ಕನ್ನಡ ಬಗ್ಗೆ ಅಭಿಮಾನ ಹೆಚ್ಚಿಸುವ ಕೆಲಸವಾಗಬೇಕು. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ಶಾಲೆಯ ಬಗ್ಗೆ, ಕಲಿಕೆಯ ಹಾಗೂ ಕನ್ನಡದ ಕುರಿತು ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸುವಲ್ಲಿ ಶಿಕ್ಷಕರ ಬಹಳ ಪ್ರಮುಖವಾಗಬೇಕು. ಶಿಕ್ಷಣ ಕೇವಲ ಹಣ ಸಂಪಾದನೆಗೆ ಸೀಮಿತವಾಗದೆ, ನಮ್ಮ ಬದುಕಿಗೆ ಆನಂದ ತರುವ, ಆರೋಗ್ಯಕರ ಜೀವನಕ್ಕೆ ತಳಹದಿಯಾಗುವ ಮುಖ್ಯ ಸಾಧನ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸದಸ್ಯರ ಪರಿಚಯ ಮತ್ತು ಅಧ್ಯಕ್ಷರಿಂದ ವಾರ್ಷಿಕ ವರದಿ ಬಳಿಕ ಒಕ್ಕೂಟದ ಪದಾಧಿಕಾರಿಗಳು ಬೀರೂರು ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಿದ್ದಕ್ಕೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟದ ಅಧ್ಯಕ್ಷ ನಾಗೇಂದ್ರಸ್ವಾಮಿ, ರಾಜ್ಯ ನಿರ್ದೇಶಕರಾದ ಬಿ.ಕೆ.ರಮ್ಯಾ, ಅನಂತರಾಜು, ಪವಿತ್ರಾ, ಯೋಗೀಶ್, ಪಾರಿಲಾ, ಕಾನೂನು ಸಲಹೆಗಾರ ಪ್ರಸನ್ನ, ಜಿಲ್ಲಾ ನಿರ್ದೇಶಕ ಚಿರಾಗ್ ಮೆಹ್ತಾ , ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.