ADVERTISEMENT

‘ಅರೆಬರೆ ಮತ್ತು ಅತಿ ಮಾಹಿತಿ ಎರಡೂ ಅಪಾಯಕಾರಿ'

‘ಮಾಹಿತಿತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳು’ ವಿಚಾರ ಸಂಕಿರಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:49 IST
Last Updated 25 ಜುಲೈ 2019, 19:49 IST
ಸಮ್ಮೇಳನದಲ್ಲಿ ಡಾ.ನಾಗಭೂಷಣ ಮಾತನಾಡಿದರು. ಡಾ.ಪುಷ್ಪಾರವಿಕುಮಾರ್, ಡಾ.ಎಂ.ಎಂ.ಮನೋಹರ್ ಪೈ, ಡಾ.ಸಿ.ಟಿ.ಜಯದೇವ, ಡಾ.ಸಿ.ಕೆ.ಸುಬ್ಬರಾಯ,, ಎಐಟಿ ಆಡಳಿತಮಂಡಳಿಯ ಮೋಹನ್‌, ಡಾ. ಎಂ.ಆರ್.ಸುನೀತಾ ಇದ್ದಾರೆ.
ಸಮ್ಮೇಳನದಲ್ಲಿ ಡಾ.ನಾಗಭೂಷಣ ಮಾತನಾಡಿದರು. ಡಾ.ಪುಷ್ಪಾರವಿಕುಮಾರ್, ಡಾ.ಎಂ.ಎಂ.ಮನೋಹರ್ ಪೈ, ಡಾ.ಸಿ.ಟಿ.ಜಯದೇವ, ಡಾ.ಸಿ.ಕೆ.ಸುಬ್ಬರಾಯ,, ಎಐಟಿ ಆಡಳಿತಮಂಡಳಿಯ ಮೋಹನ್‌, ಡಾ. ಎಂ.ಆರ್.ಸುನೀತಾ ಇದ್ದಾರೆ.   

ಚಿಕ್ಕಮಗಳೂರು: ‘ಅರೆಬರೆ ಮಾಹಿತಿ ಇಂದಿನ ಪಿಡುಗು. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಮಿತಿ ಮತ್ತು ಅತಿ ಮಾಹಿತಿ ಎರಡೂ ಅಪಾಯಕಾರಿ’ ಎಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಭಾರತೀಯ ಮಾಹಿತಿತಂತ್ರಜ್ಞಾನ ಸಂಸ್ಥೆಯ (ಐಐಐಟಿ) ನಿರ್ದೇಶಕ ಡಾ.ಪಿ.ನಾಗಭೂಷಣ್‌ ಅಭಿಪ್ರಾಯಪಟ್ಟರು.

ನಗರದ ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದ(ಎಐಟಿ) ಕಂಪ್ಯೂಟರ್‌ ಸೈನ್ಸ್ ವಿಭಾಗದ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ಮಾಹಿತಿತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳು’ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಯಾರಿಂದ, ಯಾರಿಗೆ ಮಾಹಿತಿ ರವಾನೆಯಾಗುತ್ತಿದೆ ಎಂಬುದು ಪ್ರಮುಖ ಸಂಗತಿ. ಮಾಹಿತಿ ಪರಿಷ್ಕರಣೆ, ರವಾನೆ ಪ್ರಕ್ರಿಯೆಯಲ್ಲಿ ವ್ಯತ್ಯಯವಾದರೆ ಅಪದ್ಧಗಳಿಗೆ ಎಡೆಯಾಗುತ್ತದೆ’ ಎಂದು ವಿಶ್ಲೇಷಿಸಿದರು. ‌

‘ಪೂರ್ವಗ್ರಹ ಪೀಡಿತ ದೃಷ್ಟಿಕೋನಗಳಿದ್ದರೆ ಮಾಹಿತಿ ಪ್ರಕ್ರಿಯೆ ಸರಿಯಾಗಿರಲು ಸಾಧ್ಯ ಇಲ್ಲ. ವ್ಯವಸ್ಥಿತವಾಗಿ ಮತ್ತು ಸರಿಯಾಗಿ ಪ್ರಕ್ರಿಯೆ ನಡೆದಾಗ ಮಾತ್ರ ಮಾಹಿತಿ ದೊಡ್ಡ ಆಸ್ತಿ’ ಎಂದು ವಿವರಿಸಿದರು.

ADVERTISEMENT

‘ಮಾಹಿತಿ ಪ್ರಕ್ರಿಯೆಯಲ್ಲಿ ಮಿದುಳಿನ ಭಾಷ್ಯಕ್ಕೆ ಪ್ರಾಧಾನ್ಯ ನೀಡಿ, ಹೃದಯ ಭಾಷ್ಯ ಕಡೆಗಣಿಸಬಾರದು. ಹೃದಯ ಭಾಷ್ಯವನ್ನು ಅರ್ಥೈಸಿಕೊಂಡು ಅದರ ಅನುಸಾರ ಮಿದುಳು ಸ್ಪಂದಿಸಬೇಕು. ಆದರೆ, ಮಿದುಳಿನ ಅಹಂ ಹೃದಯ ಭಾಷ್ಯವನ್ನು ಅರ್ಥ ಮಾಡಿಕೊಳ್ಳಲು ಬಿಡುತ್ತಿಲ್ಲ. ಇದು ದುರದೃಷ್ಟಕರ ಸಂಗತಿ. ಆಧುನಿಕ ಯುಗದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಗಳೇ ಇದಕ್ಕೆಲ್ಲ ಕಾರಣ. ಹೃದಯವು ಮಿದುಳನ್ನು ನಿಯಂತ್ರಿಸಬೇಕು, ಮಿದುಳು ಹೃದಯವನ್ನು ನಿಯಂತ್ರಿಸಲು ಬಿಡಬಾರದು’ ಎಂದು ಸಲಹೆ ನೀಡಿದರು.

‘ಭಾರತದಲ್ಲಿ ಕಂಪ್ಯೂಟರ್‌ ಸೈನ್ಸ್‌ ಪರಿಚಯಿಸಿದ ಕೀರ್ತಿ ವಿ.ರಾಜಾರಾಮನ್‌ ಅವರಿಗೆ ಸಲ್ಲುತ್ತದೆ. ಕಾನ್ಪುರದ ಐಐಟಿಯಲ್ಲಿ ಪರಿಚಯಿಸಿದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ‘ಸೂಪರ್‌ ಕಂಪ್ಯೂಟರ್‌’ ವಿಭಾಗ ತೆರೆದರು. ಕಂಪ್ಯೂಟರ್‌ ವಿಜ್ಞಾನ ಕ್ಷೇತ್ರದಲ್ಲಿ ಅವರು ಅಪಾರ ಸಾಧನೆ ಮಾಡಿದ್ದಾರೆ, ಪುಸ್ತಕಗಳನ್ನು ಬರೆದಿದ್ದಾರೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರದ ಅನುದಾನದಲ್ಲಿ ದೇಶದಲ್ಲಿ ಐದು ಭಾರತೀಯ ಮಾಹಿತಿತಂತ್ರಜ್ಞಾನ ಸಂಸ್ಥೆಗಳು (ಐಐಐಟಿ) ಕಾರ್ಯನಿರ್ವಹಿಸುತ್ತಿವೆ. ಅಲಹಾಬಾದ್‌, ಜಬಲ್ಪುರ್‌, ಕರ್ನೂಲ್‌, ಕಾಂಚಿಪುರಂ ಮತ್ತು ಗ್ವಾಲಿಯರ್‌ನಲ್ಲಿ ಈ ಸಂಸ್ಥೆಗಳಿವೆ. ಅಲಹಾಬಾದ್‌ನಲ್ಲಿ ಈ ಬಾರಿ ಬಿ.ಟೆಕ್‌ ಐಟಿಯಲ್ಲಿ ಬ್ಯುಸಿನೆಸ್‌ ಇನ್ಫಾರ್ಮೆಟಿಕ್ಸ್‌ ವಿಷಯ ಪರಿಚಯಿಸಲಾಗಿದೆ. ಹೈದರಾಬಾದ್‌ ಐಐಐಟಿಯಲ್ಲಿ ಬಿಟೆಕ್‌ ಆರ್ಟಿಫಿಷಿಯಲ್‌ ಇಂಟಿಲೆಜೆನ್ಸ್‌ ಪರಿಚಯಿಸಲಾಗಿದೆ’ ಎಂದರು.

‘ಇಸ್ರೊ, ಡಿಆರ್‌ಡಿಒದಂಥ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವರು ಪಿಎಚ್‌.ಡಿ ಪಡೆದಿಲ್ಲ. ವಿದ್ಯಾರ್ಹತೆ ಕಡೆಗೆ ಗಮನ ನೀಡಬೇಕಿದೆ ಎಂದು ಪ್ರಧಾನಿ ಹೇಳಿದ್ದಾರೆ. ನಾಸಾದಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಪಿಎಚ್‌.ಡಿ ಪದವೀಧರರು. ವಿದ್ಯಾರ್ಹತೆ ಹೆಚ್ಚಿಸಿಕೊಳ್ಳುವ ಕಡೆಗೆ ಆದ್ಯ ಗಮನ ಹರಿಸುವ ಅಗತ್ಯ ಇದೆ’ ಎಂದರು.

‘ಉದ್ಯೋಗಿಗಳ ವಿದ್ಯಾರ್ಹತೆ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆಗಳು ಗಮನಹರಿಸಬೇಕಿದೆ. ಅಲಹಾಬಾದ್‌ ಐಐಐಟಿಯಲ್ಲಿ ಎಂ.ಟೆಕ್‌, ಎಂಬಿಎ ಅಧ್ಯಯನಕ್ಕೆ ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಂಶೋಧನಾ ವ್ಯಾಸಂಗಕ್ಕೂ (ಪಿಎಚ್‌.ಡಿ) ಅವಕಾಶ ಇದೆ. ಉದ್ಯೋಗ ಸ್ಥಳವನ್ನು ಕಲಿಕಾ ಸ್ಥಳವನ್ನಾಗಿಸುವತ್ತ ಚಿತ್ತ ಹರಿಸುವ ಅಗತ್ಯ ಇದೆ’ ಎಂದರು.

‘ಇಸ್ರೊದೊಂದಿಗೆ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಒಪ್ಪಂದ ಮಾಡಿಕೊಳ್ಳಲಾಗಿದೆ. ಸಂಸ್ಥೆಯ ಉದ್ಯೋಗಿಗಳ ವಿದ್ಯಾರ್ಹತೆ ಮಟ್ಟ ಸುಧಾರಣೆ ನಿಟ್ಟಿನಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ಮಾಹಿತಿ ಪ್ರಕ್ರಿಯೆಯ ಕೆಲಸ ಪೂರ್ವಗ್ರಹಗಳಿಲ್ಲದೆ, ಸರಿಯಾಗಿ, ನಿರ್ಭೀತವಾಗಿ ಯೋಚಿಸುವ ಸಾಮರ್ಥ್ಯ ಬೆಳೆಸುವುದು ಎಂದರು.

ಎಐಟಿ ಪ್ರಾಚಾರ್ಯ ಡಾ.ಸಿ.ಟಿ.ಜಯದೇವ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ್ ಎಂಐಟಿ ಸಂಶೋಧನೆ ಸಮಾಲೋಚನೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಎಂ.ಮನೋಹರ್ ಪೈ, ಆಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಸಿ.ಕೆ.ಸುಬ್ಬರಾಯ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಪುಷ್ಪಾರವಿಕುಮಾರ್, ಡಾ. ಎಂ.ಆರ್.ಸುನೀತ ಇದ್ದರು.

ಸಮ್ಮೇಳನದಲ್ಲಿ ಬಾಂಗ್ಲಾ, ನೈಜೀರಿಯಾ, ದುಬೈ ರಾಷ್ಟ್ರಗಳು, ವಿವಿಧ ರಾಜ್ಯಗಳ150 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.