ADVERTISEMENT

ನರಸಿಂಹರಾಜಪುರ:‘ತೊಟ್ಟಿಲು ತೂಗುವ ಕೈ ದೇಶ ಆಳಲಿ’: ತೇಜಸ್ವಿನಿ ರಮೇಶ್

ಬಿಜೆಪಿ ಕಸಬಾ ಹೋಬಳಿ ಘಟಕದ ಮಹಿಳಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 6:16 IST
Last Updated 29 ಜನವರಿ 2023, 6:16 IST
ನರಸಿಂಹರಾಜಪುರದ ಕರಬವೇಶ್ವರ ಫಾರಂಹೌಸ್ ವ್ಯಾಪ್ತಿಯಲ್ಲಿ ಶನಿವಾರ ನಡೆದ ಬಿಜೆಪಿ ಕಸಬಾ ಹೋಬಳಿ ಘಟಕದ ಮಹಿಳಾ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಮಾತನಾಡಿದರು
ನರಸಿಂಹರಾಜಪುರದ ಕರಬವೇಶ್ವರ ಫಾರಂಹೌಸ್ ವ್ಯಾಪ್ತಿಯಲ್ಲಿ ಶನಿವಾರ ನಡೆದ ಬಿಜೆಪಿ ಕಸಬಾ ಹೋಬಳಿ ಘಟಕದ ಮಹಿಳಾ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಮಾತನಾಡಿದರು   

ನರಸಿಂಹರಾಜಪುರ: ತೊಟ್ಟಿಲು ತೂಗುವ ಕೈಗಳು ರಾಜ್ಯ, ದೇಶ ಆಳಬೇಕು ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ತಿಳಿಸಿದರು.

ತಾಲ್ಲೂಕಿನ ಮೆಣಸೂರು ಗ್ರಾಮದ ಕರಿಬಸವೇಶ್ವರ ಫಾರ್ಮ್‌ಹೌಸ್ ವ್ಯಾಪ್ತಿಯಲ್ಲಿ ಶನಿವಾರ ನಡೆದ ಬಿಜೆಪಿ ಕಸಬಾ ಹೋಬಳಿ ಘಟಕದ ಕಾರ್ಯಕರ್ತೆಯರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ಬಾರಿ ಶೃಂಗೇರಿ ಕ್ಷೇತ್ರದಲ್ಲಿ ಡಿ.ಎನ್.ಜೀವರಾಜ್ ಅವರನ್ನು ಗೆಲ್ಲಿಸಬೇಕು. ಕೆಲವರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯುವುದೇ ಕೆಲಸವಾಗಿದೆ. ವಿಧವಾ ವೇತನ ಹೆಚ್ಚಿಸಲು ಮೋದಿ ಬರಬೇಕಾಯಿತು. ದೇಶದ 85 ಕೋಟಿ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗಿದೆ. ಪ್ರಸ್ತುತ ಭಾರತ ಬೇರೆ ದೇಶಗಳಿಗೆ ಸಹಾಯ ನೀಡುವ ಸರ್ಕಾರವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ, ‘ಜಿಲ್ಲೆಯ ಮೊದಲ ಮಹಿಳಾ ಸಮಾವೇಶ ಯಶಸ್ವಿಯಾಗಿದೆ. ಮೋದಿ ಸರ್ಕಾರ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಚುನಾಯಿಸಿದೆ. ಕೇಂದ್ರ ಸಂಪುಟದಲ್ಲಿ 8 ಮಹಿಳಾ ಸಚಿವರಿದ್ದಾರೆ, ಮುಂದಿನ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಡಿ.ಎನ್.ಜೀವರಾಜ್ ಅಭ್ಯರ್ಥಿಯಾಗಲಿದ್ದು ಎಲ್ಲ ಮಹಿಳೆಯರು ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ‘1991ರಲ್ಲಿ ಬಿಜೆಪಿಯಿಂದ ಸಭೆ ಮಾಡಬೇಕಾದರೆ 20 ಜನರನ್ನು ಸೇರಿಸುವುದು ಕಷ್ಟವಾಗುತ್ತಿತ್ತು. ಇಂದು ಹೋಬಳಿ ಸಮಾವೇಶದಲ್ಲಿ 3,000ಕ್ಕೂ ಹೆಚ್ಚು ಮಹಿಳೆಯರು ಸೇರಿದ್ದು, ಜಿಲ್ಲಾ ಮಟ್ಟದ ಸಮಾವೇಶದಂತೆ ನಡೆಯುತ್ತಿರುವುದು ಸಂತಸ ತಂದಿದೆ’ ಎಂದರು.

‘ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿದ್ದ ರಾಜೇಗೌಡರು ನನಗೂ ಒಂದು ಅವಕಾಶ ನೀಡಿ ಎಂದು ಪ್ರಚಾರ ಮಾಡಿದ್ದರಿಂದ ಮತದಾರರು ಅವರಿಗೆ ಮತ ನೀಡಿದ್ದರು. ನಾನು ಶಾಸಕನಾಗಿದ್ದಾಗ 2,766 ರೈತರಿಗೆ ಸಾಗುವಳಿ ಚೀಟಿ ನೀಡಲಾಗಿತ್ತು. ಶಾಸಕರು ಕೇವಲ 24 ಸಾಗುವಳಿ ಚೀಟಿ ಮಾತ್ರ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಎಲ್ಲರಿಗೂ ಬಗರ್ ಹುಕುಂ ಹಾಗೂ 94ಸಿ ಅಡಿ ಸಾಗುವಳಿ ಚೀಟಿ ಕೊಡಲಾಗುವುದು’ ಎಂದು ಭರವಸೆ ನೀಡಿದರು.

ಅಧ್ಯಕ್ಷತೆಯನ್ನು ಬಿಜೆಪಿ ಮಹಿಳಾ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ ವಹಿಸಿದ್ದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಶ್ರೀ ಮೋಹನ್, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಸುಧಾ ಆಚಾರ್, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಚ್.ಎಂ.ಅರುಣ್ ಕುಮಾರ್, ಪ್ರಮುಖರಾದ ಪದ್ಮಾವತಿ, ಕೋಕಿಲಮ್ಮ, ಶೃತಿ, ಸುಧಾ, ಭಾಗ್ಯ, ರಜಿನಿ, ಸುಚಿತಾ, ಸುಜಾತಾ, ರೇಖಾ, ಪೂಜಾ, ರೀನಾ, ಸವಿತಾ ರತ್ನಾಕರ್, ಕೆಸವಿ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.