ADVERTISEMENT

ಚಿಕ್ಕಮಗಳೂರು: ಲಾಕ್‌ಡೌನ್‌ ಸಡಿಲ; ಚಟುವಟಿಕೆಗೆ ಇಂಬು

25 ಸಾರಿಗೆ ಬಸ್‌ ಸಂಚಾರ, 750 ಮಂದಿ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 4 ಮೇ 2020, 17:15 IST
Last Updated 4 ಮೇ 2020, 17:15 IST
ಚಿಕ್ಕಮಗಳೂರಿನ ಎಂ.ಜಿ. ರಸ್ತೆಯಲ್ಲಿ ಸಂಚಾರ ಪರಿ     ಪ್ರಜಾವಾಣಿ ಚಿತ್ರ: ಎ.ಎನ್‌.ಮೂರ್ತಿ
ಚಿಕ್ಕಮಗಳೂರಿನ ಎಂ.ಜಿ. ರಸ್ತೆಯಲ್ಲಿ ಸಂಚಾರ ಪರಿ     ಪ್ರಜಾವಾಣಿ ಚಿತ್ರ: ಎ.ಎನ್‌.ಮೂರ್ತಿ   

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸೋಮವಾರ ಲಾಕ್‌ಡೌನ್‌ ಸಡಿಲಗೊಳಿಸಿದ್ದು ಸಂಚಾರ, ವ್ಯಾಪಾರ–ವಹಿವಾಟು ಮೊದಲಾದ ಚಟುವಟಿಕೆಗಳು ಗರಿಗೆದರಿವೆ.

ನಗರದಲ್ಲಿ ಬಹುತೇಕ ಅಂಗಡಿಗಳು ತೆರೆದಿದ್ದವು. ಜನರ ಓಡಾಟ ಜಾಸ್ತಿ ಇತ್ತು. ವಾಹನ ಸಂಚಾರ ದಟ್ಟಣೆ ಇತ್ತು. ವಸ್ತುಗಳ ಮಾರಾಟ, ಖರೀದಿ ಪ್ರಕ್ರಿಯೆಗಳು ಭರದಿಂದ ನಡೆದವು. ಲಾಕ್‌ಡೌನ್‌ ಸಡಿಲ ಜನರಲ್ಲಿ ಖುಷಿ ಮೂಡಿಸಿದೆ.
ಬೆಳಿಗ್ಗೆ 7ರಿಂದ ರಾತ್ರಿ 7 ಗಂಟೆವರೆಗೆ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು.

ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕಲ್ಸ್‌, ಹಾರ್ಡ್‌ವೇರ್‌, ಕೃಷಿ ಪರಿಕರ, ಬಟ್ಟೆ, ಪಾತ್ರೆ, ಫ್ಯಾನ್ಸಿ, ಝೆರಾಕ್ಸ್‌ ಸಹಿತ ಬಹುತೇಕ ಎಲ್ಲ ಅಂಗಡಿಗಳು ತೆರೆದಿದ್ದವು. ಬಹುತೇಕ ಕಡೆ ಗ್ರಾಹಕರ ಕೈಗೆ ಸ್ಯಾನಿಟೈಸರ್‌ ಹಾಕಿ ಒಳಗೆ ಬಿಡುತ್ತಿದ್ದು ಕಂಡುಬಂತು. ತಳ್ಳುಗಾಡಿಗಳಲ್ಲಿ ವ್ಯಾಪಾರ ನಡೆಯಿತು. ಗ್ರಾಹಕರು ಹೋಟೆಲ್‌ಗಳಿಂದ ಪಾರ್ಸೆಲ್‌ ಒಯ್ಯುತ್ತಿದ್ದುದು ಕಂಡುಬಂತು.

ADVERTISEMENT

ಜನರು ಮಾಸ್ಕ್‌ ಧರಿಸಿದ್ದರು. ಬಹಳಷ್ಟು ಅಂಗಡಿಗಳಲ್ಲಿ ಅಂಗಡಿ, ಮಳಿಗೆಗಳವರು ಕೈಗವಸುಗಳನ್ನೂ ಧರಿಸಿದ್ದರು. ದಟ್ಟಣೆಯಾಗದಂತೆ ನಿರ್ವಹಿಸುವ ನಿಟ್ಟಿನಲ್ಲಿ ಬಹಳಷ್ಟು ಕಡೆ ಅಂಕಗಳನ್ನು ಬರೆದು ಸಾಲಿನಲ್ಲಿ ಸಾಗಲು ವ್ಯವಸ್ಥೆ ಮಾಡಿದ್ದರು. ಆಸ್ಪತ್ರೆಗಳು, ಕ್ಲಿನಿಕ್‌ಗಳಲ್ಲಿ ಒಪಿಡಿ ವಿಭಾಗಗಳು ತೆರೆದಿದ್ದವು.

‘40 ದಿನಗಳಿಂದ ಮನೆಯಲ್ಲೇ ಇದ್ದೆ. ದುಡಿಮೆ ಇರಲಿಲ್ಲ. ಆಟೊ ಬಾಡಿಗೆಯೇ ಜೀವನಕ್ಕೆ ಆಧಾರ. ಬೆಳಿಗ್ಗೆಯಿಂದ ಇಬ್ಬರನ್ನು ಬಾಡಿಗೆಗೆ ಕರೆದೊಯ್ದೆ. ದಿನಕಳೆದಂತೆ ಸುಧಾರಣೆ ಆಗಬಹುದು’ ಎಂದು ಆಟೊ ಚಾಲಕ ಮಹೇಶ್‌ ತಿಳಿಸಿದರು.

‘ಅಂಗಡಿ ತೆರೆಯಲು ಅವಕಾಶ ಮಾಡಿದ್ದಾರೆ. ವ್ಯಾಪಾರ ಸುಧಾರಣೆಯಾಗಲು ಕೆಲ ದಿನ ಹಿಡಿಯುತ್ತದೆ’ ಎಂದು ಎಂ.ಜಿ.ರಸ್ತೆ ಎಲೆಕ್ಟ್ರಾನಿಕ್ಸ್‌ ಅಂಗಡಿ ರಮೇಶ್‌ ಹೇಳಿದರು.

ಕಚೇರಿ ಕಾರ್ಯನಿರ್ವಹಣೆ

ಸರ್ಕಾರಿ, ಖಾಸಗಿ ಕಚೇರಿಗಳು ಕಾರ್ಯನಿರ್ವಹಿಸಿದವು. ಕಚೇರಿಗಳಲ್ಲಿ ಸಿಬ್ಬಂದಿ, ಅಧಿಕಾರಿಗಳು ನೌಕರರು ಇದ್ದರು. ಅಂತರ ಕಾಪಾಡುವಂತೆ ಬಹಳಷ್ಟು ಕಡೆ ಸೂಚನಾಫಲಕಗಳನ್ನು ಹಾಕಲಾಗಿತ್ತು.

ಪೊಲೀಸ್‌ ನಿಗಾ

ಪೊಲೀಸರು ಗಸ್ತಿನಲ್ಲಿ ಇದ್ದರು. ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಒಂದೇ ಕಡೆ ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.