
ಕಡೂರು: ತಾಲ್ಲೂಕಿನ ಜಿ.ಮಾದಾಪುರದ ಸಿದ್ಧ ಪುರುಷ ಮರುಳಸಿದ್ದೇಶ್ವರ ಸ್ವಾಮಿಗೆ ಬುಧವಾರ ರಾತ್ರಿ ಕಾರ್ತಿಕೋತ್ಸವ, ಕದಲಿಪೂಜೆ, ಗುಗ್ಗಳೋತ್ಸವ, ಕಳಸೋತ್ಸವ ಕಾರ್ಯಕ್ರಮಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಬುಧವಾರ ರಾತ್ರಿ 10 ಗಂಟೆಗೆ ಕದಲಿ ಪೂಜೆ ನೆರವೇರಿಸಿದ ನಂತರ ಭಕ್ತರು ಗುಗ್ಗಳದ ಕುಂಡಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹರಕೆಯನ್ನು ತೀರಿಸಿದರು. ನಂತರ ದೀಪೋತ್ಸವ, ಮಹಾಮಂಗಳಾರತಿ ನಡೆಯಿತು. ಬಂದಿದ್ದ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷ ಜಿ.ಎಂ.ಪ್ರಕಾಶ್ ಮಾತನಾಡಿ, ಭಕ್ತರ ಸಹಕಾರದಿಂದ ದೇವಾಲಯವು ಅಭಿವೃದ್ಧಿ ಪಥದಲ್ಲಿ ನಡೆದಿದ್ದು, ಈಗಾಗಲೇ ಸಮುದಾಯ ಭವನದ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಭಕ್ತರ ದಾನವನ್ನು ನೀಡಲು ಮುಕ್ತ ಅವಕಾಶವಿದೆ, ದೇವಾಲಯದ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಯೋಜನೆಯನ್ನು ಮಾಡಲಾಗಿದೆ. ದೇವಾಲಯದಲ್ಲಿ ಸಂಸ್ಕೃತ ಪಾಠ ಶಾಲೆ, ಪ್ರವಚನ ಮಂದಿರ ಸ್ಥಾಪಿಸುವ ಯೋಜನೆ ಇದೆ. ಮದ್ಯವರ್ಜನ ಶಿಬಿರಗಳು, ಆರೋಗ್ಯ ಶಿಬಿರಗಳನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ನೀಡಿದರು.
ಸಮಿತಿಯ ಕಾರ್ಯದರ್ಶಿ ನಟರಾಜು, ಸದಸ್ಯರಾದ ಪ್ರೇಮಕುಮಾರ್ (ಬಾಬು), ಸುರೇಶ್ ಗೌಡ್ರು, ಶಿವಮೂರ್ತಿ, ಟಿ.ಎಂ.ಶಿವಮೂರ್ತಿ, ರಾಜಕುಮಾರ್, ಶೇಖರಪ್ಪ, ಮರುಳಸಿದ್ದಯ್ಯ, ಶಿವಲಿಂಗಸ್ವಾಮಿ, ರಾಜಶೇಖರ್, ದರ್ಶನ್, ಈಶ್ವರಪ್ಪ, ಮುರುಗೇಶ್ ಅರ್ಚಕ ಪರಮಶಿವಯ್ಯ, ಚನ್ನಮಲ್ಲಯ್ಯ ಹಾಗೂ ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.