ADVERTISEMENT

ಜಗತ್ತಿನ ಶಾಂತಿಗೆ ಮಹಾವೀರರ ಬೋಧನೆ ಅವಶ್ಯ: ಸಿ.ಟಿ.ರವಿ

ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 13:45 IST
Last Updated 10 ಏಪ್ರಿಲ್ 2025, 13:45 IST
ನಗರದ ಕುವೆಂಪು ಕಲಾಮಂದಿರದಲ್ಲಿ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಗವನ್ ಮಹಾವೀರರ ಭಾವಚಿತ್ರಕ್ಕೆ ಸಿ.ಟಿ.ರವಿ ಪುಷ್ಪ ನಮನ ಸಲ್ಲಿಸಿದರು
ನಗರದ ಕುವೆಂಪು ಕಲಾಮಂದಿರದಲ್ಲಿ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಗವನ್ ಮಹಾವೀರರ ಭಾವಚಿತ್ರಕ್ಕೆ ಸಿ.ಟಿ.ರವಿ ಪುಷ್ಪ ನಮನ ಸಲ್ಲಿಸಿದರು   

ಚಿಕ್ಕಮಗಳೂರು: ‘ಜಗತ್ತಿಗೆ ಮಹಾವೀರರ ಬೋಧನೆಗಳು ಅಗತ್ಯವಾಗಿದ್ದು, ಅವರ ಸಂದೇಶಗಳಿಂದ ಮಾತ್ರ ಜಗತ್ತು ಯುದ್ಧದಿಂದ ಮುಕ್ತವಾಗಿ ಶಾಂತಿ ಕಾಣುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿಗೆ ಜ್ಞಾನದ ಬೆಳಕು, ಸದ್ವಿಚಾರಗಳನ್ನು ಬೋಧಿಸಲೆಂದೇ ಮಹಾವೀರರ ಜನನವಾಗಿದ್ದು, ಅಹಿಂಸೆ ಧರ್ಮದ ಮೂಲ ತಿರುಳು ಎಂದು ಅವರು ಬೋಧಿಸಿದರು. ಕೈವಲ್ಯ ಜ್ಞಾನವನ್ನು ಗಳಿಸಿಕೊಂಡು ಅದನ್ನು ಸಮಾಜಕ್ಕೆ ಬೋಧಿಸಿ, ಸಮಾಜದಲ್ಲಿನ ಪ್ರತಿಯೊಂದು ಜೀವಿಯನ್ನೂ ಪ್ರೀತಿಸಬೇಕು ಎನ್ನುವ ಸಂದೇಶ ಸಾರಿದರು ಎಂದು ಹೇಳಿದರು.

ADVERTISEMENT

‘ಜಿನನಾಗುವುದು ಸಾಮಾನ್ಯ ಸಂಗತಿಯಲ್ಲ. ನೂರಾರು ಕೋಟಿಯಲ್ಲಿ ಒಬ್ಬರು ಜಿನರಾಗಲು ಸಾಧ್ಯ. ಅಂತಹ ಮಹಾನ್ ತೀರ್ಥಂಕರ ಮಹಾವೀರರು. ಜಗತ್ತಿಗೆ ಭಾರತ ಕೊಟ್ಟಿರುವಷ್ಟು ಕೊಡುಗೆ ಬೇರೆ ಯಾವ ದೇಶವೂ ನೀಡಿಲ್ಲ. 24ನೇ ತೀರ್ಥಂಕರ ಮಹಾವೀರರು ಜನಿಸಿದ ಪುಣ್ಯಭೂಮಿ ಭಾರತ’ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಗ್ರೇಡ್-2 ತಹಶೀಲ್ದಾರ್ ರಾಮರಾವ್ ದೇಸಾಯಿ ಮಾತನಾಡಿ, ಅಹಿಂಸೆ, ಸತ್ಯ, ಧರ್ಮ, ಅಪರಿಗ್ರಹ ಮುಂತಾದ ಮಹಾವೀರರ ಬೋಧನೆಗಳೂ ಇಂದಿಗೂ ಪ್ರಸ್ತುತವಾಗಿದ್ದು, ಮಾನವರು ದುಃಖ, ಹಿಂಸೆಗೆ ಉತ್ತರ ಹುಡುಕಬೇಕಾದರೆ ಏನು ಮಾಡಬೇಕು ಎಂಬ ಸಂದೇಶ ಸಾರಿದರು ಎಂದು ಹೇಳಿದರು.

ಉಪನ್ಯಾಸ ನೀಡಿದ ಚಾರಿತ್ರ ಜೀನೇಂದ್ರ ಬಾಬು, ‘ಮಹಾವೀರನ ಮೂಲ ಹೆಸರು ವರ್ಧಮಾನ. ಪ್ರಾಚೀನ ನಗರವಾದ ವೈಶಾಲಿಯ ಬಳಿಯ ಕುಂದಗ್ರಾಮ ಎಂಬ ಹಳ್ಳಿಯಲ್ಲಿ ಜನಿಸಿದರು. ಮಹಾವೀರನ ತೀವ್ರ ತಪಸ್ಸಿನ ಜೀವನ ಮತ್ತು ಅಲೆಮಾರಿ ಸನ್ಯಾಸಿಯಾಗಿ ಬೆಳೆದರು. ಸತ್ಯದ ಹುಡುಕಾಟದಲ್ಲಿ ಅವರು ಹನ್ನೆರಡು ವರ್ಷಗಳ ಕಾಲ ಹೋರಾಡಿದರು’ ಎಂದು ತಿಳಿಸಿದರು.

ಅಹಿಂಸೆಯಲ್ಲಿ ಸಂಪೂರ್ಣ ನಂಬಿಕೆ ಹೊಂದಿರುವ ಜೈನ ಧರ್ಮ ಅತ್ಯುನ್ನತ ಸ್ಥಾನ ಪಡೆಯಿತು. ಪ್ರತಿಯೊಂದು ಜೀವಿಯ ಜೀವನವನ್ನು ಪವಿತ್ರವೆಂದು ಪರಿಗಣಿಸಲಾಗಿತ್ತು. ಜೈನ ಧರ್ಮದ ಪ್ರಕಾರ, ಪ್ರತಿಯೊಂದು ಜೀವಿಯ ಜೀವವನ್ನು ರಕ್ಷಿಸುವುದು ಮತ್ತು ಸಂರಕ್ಷಿಸುವುದು ಮನುಷ್ಯನ ಕರ್ತವ್ಯ. ಜೈನ ಧರ್ಮವು ಜೀವಿಗಳಿಗೆ ನೀಡಿದಷ್ಟು ಗೌರವವನ್ನು ಬೇರೆ ಯಾವುದೇ ಧರ್ಮ ನೀಡಿಲ್ಲ. ಎಲ್ಲಾ ರೀತಿಯ ಜೀವಗಳ ಬಗ್ಗೆ ದಯೆ ಜೈನ ಧರ್ಮದ ಪ್ರಮುಖ ಲಕ್ಷಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜೈನ ಸಂಘದ ಅಧ್ಯಕ್ಷ ಕಾಂತಿಲಾಲ್ ಜೈನ್, ಕಾರ್ಯದರ್ಶಿ ರಮೇಶ್ ಜೈನ್, ದಿಗಂಬರ ಸಂಘದ ಅಧ್ಯಕ್ಷ ಜಿನೇಂದ್ರ ಬಾಬು, ತೇರಾಪಂಥ ಸಂಘದ ಅಧ್ಯಕ್ಷ ಮಹೇಂದ್ರ ಡೋಸಿ, ನಗರಸಭೆ ಸದಸ್ಯ ವಿಫುಲ್ ಕುಮಾರ್ ಜೈನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.