ಕಡೂರು (ಚಿಕ್ಕಮಗಳೂರು): ‘ಧರ್ಮ-ಅಧರ್ಮ ಸಂಕಟವಾಯಿತು, ವಿಶ್ವಕ್ಕೆ ಶಾಂತಿ ಭಂಗ ಆಯಿತು, ಧರೆಗೆ ವರುಣನ ಆಗಮನವಾಯಿತು, ಸರ್ವರೂ ಎಚ್ಚರದಿಂದಿರಬೇಕಲೇ ಪರಾಕ್’.
ಇದು ಬೀರೂರು ಪಟ್ಟಣದ ಶ್ರೀಮೈಲಾರಲಿಂಗ ಸ್ವಾಮಿ ಅವರು ನುಡಿದ ಕಾರಣಿಕ.
ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ಮಹೋತ್ಸವ ಮಹಾನವಮಿ ಅಂಗವಾಗಿ ಬೀರೂರಿನ ಬಯಲಿನಲ್ಲಿ ಶುಕ್ರವಾರ ನೆರವೇರಿತು.
‘ಧರ್ಮ- ಅಧರ್ಮ ಸಂಕಟವಾಯಿತು ಎಂದರೆ ಜನರಲ್ಲಿ ಪಾಪಪ್ರಜ್ಞೆ ಕಡಿಮೆಯಾಗುತ್ತಿದೆ. ಧರ್ಮಾಚರಣೆಯಲ್ಲಿ ಆಡಂಬರಕ್ಕೆ ಒತ್ತು ನೀಡಲಾಗುತ್ತಿದ್ದು, ಶ್ರದ್ಧೆಗೆ ನಂತರದ ಸ್ಥಾನ ನೀಡಲಾಗುತ್ತಿದೆ. ಯಾವುದು ಒಳ್ಳೆಯದು, ಕೆಟ್ಟದು ಎನ್ನುವುದರ ನಡುವಿನ ವಿಶ್ಲೇಷಣೆಯ ಗೆರೆ ತೆಳುವಾಗಿರುವುದು. ವಿಶ್ವಕ್ಕೆ ಶಾಂತಿಯ ಭಂಗವಾಯಿತು ಎಂದರೆ, ಅಸ್ಥಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ದೇಶಗಳ ವಿರುದ್ಧ ಬಲಾಢ್ಯ ದೇಶಗಳು ಬಲ ಪ್ರಯೋಗಿಸುವುದು. ಧರೆಗೆ ವರುಣನ ಆಗಮನವಾಯಿತು ಎಂದರೆ ಈವರೆಗೆ ಮುಂಗಾರಿನ ಅಬ್ಬರ ನಿರಂತರವಾಗಿದ್ದು, ಸಾಕಷ್ಟು ಹಾನಿಯೂ ಸಂಭವಿಸಿದೆ. ಹಿಂಗಾರು ಮಳೆ ಕೂಡಾ ಉತ್ತಮವಾಗಿ ಸುರಿಯಲಿದೆ ಎನ್ನುವುದು ಕಾರಣಿಕ ನುಡಿಯ ಅರ್ಥ’ ಎಂದು ಭಕ್ತರು ವಿಶ್ಲೇಷಿಸಿದ್ದಾರೆ.
ಮಾಳ ಮಲ್ಲೇಶ್ವರ ಕಾರ್ಣಿಕ
ಸಿರುಗುಪ್ಪ (ಬಳ್ಳಾರಿ): ‘ಹಾಲು ಹರಿದಾಡೀತು ಎಚ್ಚರ ಗಂಗೆ ಹೊಳೆದಂಡೆಗೆ ನಿಂತಾಳ ಉತ್ತರ ಭಾಗಕ್ಕೆ ಹೊಂಟಾಳ 7700 - ನಗೆಹಳ್ಳಿ(ಹತ್ತಿ) 3400 - ಹೊಕ್ಕುಳ ಜೋಳ 3-6 6-3 ಆದಿತು ಪರಾಕ್’ ಎಂದು ದೇವರಗಟ್ಟ ಉತ್ಸವದಲ್ಲಿ ಕರ್ಣಿಕ ಭವಿಷ್ಯ ನುಡಿದಿದೆ. ಇದನ್ನು ವಿವರಿಸಿರುವ ದೇಗುಲದ ಅರ್ಚಕ ಮಲ್ಲಯ್ಯ ‘ಜೋಳದ ಬೆಲೆ ₹3400 ಹತ್ತಿ ಬೆಲೆ ₹7200 ಆಗಲಿದೆ. ಉತ್ತರದ ಮೇಲ್ಭಾಗದಲ್ಲಿ ತಾಯಿ ಗಂಗಮ್ಮ ಕುಳಿತಿದ್ದಾಳೆ. ಉತ್ತಮ ಮಳೆಯಾಗಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.